ADVERTISEMENT

ಮಹದೇಶ್ವರ ಬೆಟ್ಟ: ಸೌಂದರ್ಯ ಹೆಚ್ಚಿಸಲಿವೆ ಸಾಲು ಗಿಡ

ರಸ್ತೆ ಬದಿಯಲ್ಲಿ 300 ಗಿಡ ನೆಡುತ್ತಿರುವ ಪ್ರಾಧಿಕಾರ, ಈಶ್ವರಿ ಟ್ರಸ್ಟ್‌

ಜಿ ಪ್ರದೀಪ್ ಕುಮಾರ್
Published 27 ಮೇ 2023, 5:38 IST
Last Updated 27 ಮೇ 2023, 5:38 IST
ಮಹದೇಶ್ವರ ಬೆಟ್ಟದ ರಸ್ತೆ ಬದಿಯಲ್ಲಿ ನೆಡಲಾಗಿರುವ ಸಾಲು ಗಿಡಗಳು
ಮಹದೇಶ್ವರ ಬೆಟ್ಟದ ರಸ್ತೆ ಬದಿಯಲ್ಲಿ ನೆಡಲಾಗಿರುವ ಸಾಲು ಗಿಡಗಳು   

ಮಹದೇಶ್ವರ ಬೆಟ್ಟ: ಮುಂದಿನ ಎರಡ್ಮೂರು ವರ್ಷದಲ್ಲಿ ಮಹದೇಶ್ವರ ಬೆಟ್ಟದ ದೇವಾಲಯದ ಸುತ್ತಮುತ್ತಲಿನ ಪ್ರದೇಶದ ಸೌಂದರ್ಯ ಇಮ್ಮಡಿಯಾಗಲಿದೆ. ದೇವಾಲಯದ ಆವರಣ ಹಾಗೂ ಬೆಟ್ಟದಲ್ಲಿರುವ ವಿವಿಧ ಪ್ರಮುಖ ರಸ್ತೆಗಳ ಎರಡೂ ಬದಿಗಳಲ್ಲಿ ಸಾಲು ಗಿಡ– ಮರಗಳು ಭಕ್ತರ ಕಣ್ಮನ ಸೆಳೆಯಲಿವೆ.  

ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಚಾಮರಾಜನಗರ ಈಶ್ವರಿ ಟ್ರಸ್ಟ್‌ ಜಂಟಿಯಾಗಿ ಬೆಟ್ಟದ ಮಾಸ್ಟರ್‌ ಪ್ಲಾನ್‌ ಪ್ರದೇಶದ ರಸ್ತೆಗಳ ಇಕ್ಕೆಲಗಳಲ್ಲೂ 300 ಸಾಲು ಗಿಡ ನೆಡುತ್ತಿವೆ. ಈಗಾಗಲೇ ಶೇ 75ರಷ್ಟು ಗಿಡಗಳನ್ನು ನೆಡಲಾಗಿದ್ದು, ಉಳಿದ ಗಿಡಗಳನ್ನು ನೆಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. 

ಈ ಹಿಂದೆ ರಸ್ತೆ ಬದಿಯಲ್ಲಿದ್ದ ಸಾಲು ಮರಗಳ ಮಧ್ಯಭಾಗದಲ್ಲಿ ಗಿಡಗಳನ್ನು ನೆಡಲಾಗಿದ್ದು, ಕಾಡು ಜಾತಿಯ ಮರಗಳಲ್ಲದೆ, ಹಣ್ಣುಗಳು, ಅಲಂಕಾರಿಕ ಹೂ ಬಿಡುವ ಮರಗಳ ಸಸಿಗಳನ್ನು ನೆಡಲಾಗುತ್ತಿದೆ.

ADVERTISEMENT

ಜಂಟಿ ಸಹಭಾಗಿತ್ವ: ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್‌.ಕಾತ್ಯಾಯಿನಿದೇವಿ, ಚಾಮರಾಜನಗರದ ಪರಿಸರ ಪ್ರೇಮಿ ಹಾಗೂ ಈಶ್ವರಿ ಟ್ರಸ್ಟ್‌ನ ಸಂಸ್ಥಾಪಕ ಸಿ.ಎಂ.ವೆಂಕಟೇಶ್‌ ಬಳಿ ಬೆಟ್ಟವನ್ನು ಹಸಿರೀಕರಣ ಮಾಡುವ ಕುರಿತು ಚರ್ಚಿಸಿದ್ದರು. ಪ್ರಾಧಿಕಾರ ಮತ್ತು ಈಶ್ವರಿ ಟ್ರಸ್ಟ್‌ನ ಸಹಭಾಗಿತ್ವದಲ್ಲಿ ಸಾಲುಗಿಡ ನೆಡುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. 

ಆರಂಭದಲ್ಲಿ ವೆಂಕಟೇಶ್‌ 50 ಗಿಡ ನೆಡಲು ಮುಂದಾದರು. ನಂತರ ಪ್ರಾಧಿಕಾರ 250 ಗಿಡ ಒದಗಿಸಿತು. ಸದ್ಯ 213 ಸಸಿ ನೆಡಲಾಗಿದ್ದು, 87 ಸಸಿ ನೆಡುವುದು ಬಾಕಿ ಇದೆ.

ಯಾವುದೆಲ್ಲಾ ಗಿಡಗಳು?:

‘ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಆಹ್ಲಾದಕರ ವಾತಾವರಣ ಇರಬೇಕು. ರಸ್ತೆ ಬದಿಯಲ್ಲಿ ನಡೆದಾಡುವಾಗ ನೆರಳಿರಬೇಕು. ಪಕ್ಷಿಗಳಿಗೆ ಹಣ್ಣು ಸಿಗಬೇಕು. ಕ್ಷೇತ್ರದ ಸೌಂದರ್ಯವೂ ಹೆಚ್ಚಬೇಕು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಎಲ್ಲ ಜಾತಿಯ ಗಿಡ ನೆಡಲಾಗುತ್ತಿದೆ’ ಎಂದು ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಸಾಲು ಗಿಡಗಳ ನಿರ್ವಹಣೆಯಲ್ಲಿ ಸಿ.ಎಂ.ವೆಂಕಟೇಶ್‌

‘ನಾನು ಹೊಂಗೆ, ಜಂಬುನೇರಳೆ, ಅರಳಿ, ಬೇವು ಸೇರಿದಂತೆ ಕಾಡು ಜಾತಿಯ ಮರಗಳನ್ನು ನೆಟ್ಟಿದ್ದೆ. ಪ್ರಾಧಿಕಾರದವರು 250 ಗಿಡಗಳನ್ನು ಪೂರೈಸಿದ್ದಾರೆ. ಟಬೂಬಿಯಾ, ರೋಸಿಯಾ, ಮೇ ಫ್ಲವರ್‌ನಂತಹ ಹೂ ಬಿಡುವ ಗಿಡಗಳನ್ನು ಒದಗಿಸಿದ್ದಾರೆ. ಅವುಗಳನ್ನೂ ನೆಡಲಾಗುತ್ತಿದೆ’ ಎಂದರು.

‘ಕ್ಷೇತ್ರಕ್ಕೆ ಬರುವ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ವಸತಿಗೃಹ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳಿಗಾಗಿ ಈಗಾಗಲೇ ಇದ್ದ ಹಲವು ಮರ ಕಡಿಯಲಾಗಿತ್ತು. ಆ ಬಳಿಕ ಗಿಡಗಳನ್ನು ನೆಡುವ ಕೆಲಸ ಆಗಿರಲಿಲ್ಲ. ಪ್ರಾಧಿಕಾರ ಈಗ ಸಾಲು ಗಿಡಗಳನ್ನು ನೆಡುತ್ತಿರುವುದು ಸಂತಸದ ವಿಚಾರ. ಸಮರ್ಪಕವಾಗಿ ನಿರ್ವಹಿಸಿದರೆ ಎರಡ್ಮೂರು ವರ್ಷದಲ್ಲಿ ಬೆಟ್ಟ ಹಸಿರಾಗಲಿದೆ’ ಎಂದು ಪರಿಸರ ಪ್ರೇಮಿ ನಾಗೇಂದ್ರ ಹೇಳಿದರು.

ಗಿಡಗಳ ನಿರ್ವಹಣೆಯೇ ಸವಾಲು

ಗಿಡ ನೆಟ್ಟರೆ ಮಾತ್ರ ಸಾಲದು. ಅದರ ನಿರ್ವಹಣೆಯೇ ದೊಡ್ಡ ಸವಾಲು. ಗಿಡಗಳು ಬೆಳೆದು ದೊಡ್ಡ ಪ್ರಮಾಣದಲ್ಲಿ ಹಸಿರು ಗೋಚರಿಸಲು ಕನಿಷ್ಠ ಮೂರು ವರ್ಷ ಬೇಕು. ಅಲ್ಲಿಯವರೆಗೂ ಅದನ್ನು ನಿರ್ವಹಿಸಬೇಕು.  ಚಾಮರಾಜನಗರದ ಸುತ್ತಮುತ್ತಲೂ 7 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿರುವ ವೆಂಕಟೇಶ್‌ ತಮ್ಮ ಸ್ವಂತ ಹಣದಿಂದ ಗಿಡಗಳನ್ನು ಪೋಷಿಸುತ್ತಿದ್ದಾರೆ.  ‘ಗಿಡಗಳ ಪಾಲನೆಗೆ ಹೆಚ್ಚು ಶ್ರಮ ಅಗತ್ಯವಿದೆ. ಬೆಟ್ಟದ ಬಹುತೇಕ ಕಡೆಗಳಲ್ಲಿ ನಾವು ದೊಡ್ಡ ಗಿಡಗಳನ್ನೇ ನೆಟ್ಟಿದ್ದೇವೆ. ಎಲ್ಲ ಗಿಡಗಳಿಗೆ ಟ್ರೀ ಗಾರ್ಡ್‌ಗಳನ್ನು ಅಳವಡಿಸಿದ್ದೇವೆ. ಹಾಗಾಗಿ ಜಾನುವಾರುಗಳು ಗಿಡಗಳನ್ನು ತಿನ್ನುವ ಸಾಧ್ಯತೆ ಕಡಿಮೆ. ಹಾಗಿದ್ದರೂ ಕೆಲವೊಂದು ಗಿಡಗಳು ಸಾಯುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಹೊಸ ಗಿಡ ನೆಡಬೇಕಾಗುತ್ತದೆ. ಬೇಸಿಗೆಯಲ್ಲಿ ನೀರುಣಿಸಬೇಕಾಗುತ್ತದೆ. ಪ್ರಾಧಿಕಾರ ಸಹಕರಿಸುವ ಭರವಸೆ ನೀಡಿದೆ. ನಾನು ಕೂಡ ಅವುಗಳ ಪಾಲನೆಗೆ ಗಮನ ನೀಡುವೆ’ ಎಂದು ವೆಂಕಟೇಶ್‌ ತಿಳಿಸಿದರು.

ವರ್ಷದ ಕಾರ್ಯಕ್ರಮ:

ಕಾತ್ಯಾಯಿನಿದೇವಿ ಪ್ರಾಧಿಕಾರದ ಕಾರ್ಯದರ್ಶಿ ಎಸ್‌.ಕಾತ್ಯಾಯಿನಿದೇವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ‘ಜೇನುಮಲೆ ಭವನದ ಮುಂಭಾಗ ನಾಗಮಲೆ ಭವನದ ಮುಂಭಾಗ ಪಾಲಾರ್ ರಸ್ತೆ ಅಂತರಗಂಗೆ ಬಳಿ ರಸ್ತೆ ಬದಿಗಳಲ್ಲಿ ಸಾಲು ಗಿಡ ನೆಡಲಾಗುತ್ತಿದೆ. ಇದು ಒಂದು ವರ್ಷದ ಕಾರ್ಯಕ್ರಮ. ಈಗಾಗಲೇ 213 ಸಸಿ ನೆಡಲಾಗಿದೆ. ಎತ್ತರದ ಗಿಡಗಳನ್ನೇ ನೆಡಲಾಗುತ್ತಿದೆ. ನೇರಳೆ ಹೊಂಗೆ ಅರಳಿ ಕಾಡು ಬಾದಾಮಿ ಹಳದಿ ಮತ್ತು ಗುಲಾಬಿ ಹೂಗಳನ್ನು ಬಿಡುವ ಗಿಡಗಳನ್ನು ಆಯ್ಕೆ ಮಾಡಿದ್ದೇವೆ. ದೇವಾಲಯಕ್ಕೆ ಬರುವ ಭಕ್ತರ ನೆರಳಿನ ವ್ಯವಸ್ಥೆಯ ಜೊತೆಗೆ ಪ್ರಾಣಿಗಳಿಗೆ ಆಹಾರವೂ ದೊರೆಯತ್ತದೆ. ಗಿಡಗಳ ಜೊತೆಗೆ ಬೀದಿ ದೀಪಗಳನ್ನೂ ಅಳವಡಿಸಲೂ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.