ಯಳಂದೂರು: ‘ಅದು ಒನಕೆ ಮರ, ಇದು ಗೂಟಕ್ಕೆ ಬಳಸುವ ಕಾಂಡ, ಮತ್ತದು ದೊಡ್ಡ ಸಂಪಿಗೆ ವೃಕ್ಷ, ಸಮೀಪದ್ದು ಧೂಪದ ತರು, ಮೇಲಿನದ್ದು ನೀಳಲು ಸಸ್ಯ, ಚಪ್ಪೆಕಾಯಿ ಅಪ್ಪಿದ ಸಸ್ಯ, ಡ್ರಾಸೆರ, ಗಂಟೆ ಪುಷ್ಪ..,’ ಹೀಗೆ ಬಿಳಿಗಿರಿ ಕಾಡಿನೊಳಗಿನ ಉತ್ಪನ್ನಗಳ ಹೆಸರನ್ನು ಸಂಪನ್ಮೂಲ ವ್ಯಕ್ತಿ ನವೀನ್ ಜಗುಲಿ ವಿದ್ಯಾರ್ಥಿಗಳಿಗೆ ವಿವರಿಸುತ್ತಾ ಹೋದರು. ಅವರ ಮಾತು ಆಲಿಸುತ್ತಲೇ ಕಾಡಿನ ಸೌಂಕದರ್ಯಕ್ಕೆ ಮನಸೋತ ಮಕ್ಕಳು ಕುತೂಹಲದಿಂದ ಕಾನನದ ಹಾದಿಯಲ್ಲಿ ಹೆಜ್ಜೆ ಹಾಕಿದರು.
ಬಿಳಿಗಿರಿ ಕಾಡಿನಲ್ಲಿ ಮರ ಗಿಡಗಳ ಹುಟ್ಟಿನ ಹಿನ್ನೆಲೆಯಲ್ಲಿ ಅರಿತ ವಿದ್ಯಾರ್ಥಿನಿಯರು ಮರಗಳ ಬಳಕೆಯನ್ನು ತಿಳಿದುಕೊಂಡರು. ನೂರಾರು ವರ್ಷ ಬದುಕುವ ಮರಗಳನ್ನು ಕಣ್ಣಾರೆ ಕಂಡು ಅವುಗಳ ಉಪಯೋಗ ತಿಳಿದು ಹುಬ್ಬೇರಿಸಿದರು. ಪರಿಸರ ನಮಗಾಗಿ ಏನೆಲ್ಲಾ ಸೃಷ್ಟಿಸಿದೆ ಎಂಬ ಭಾವದಲ್ಲಿ ಮೌನವಾಗಿ ಸಾಗಿದರು.
ಅರಣ್ಯ ಇಲಾಖೆಯು ಪ್ರತಿ ವರ್ಷ ಕಾಡಂಚಿನ ಶಾಲಾ ಮಕ್ಕಳಿಗೆ ‘ವನದರ್ಶನ’ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದು ವಿದ್ಯಾರ್ಥಿಗಳಲ್ಲಿ ವನದ ಮಹತ್ವ ಪರಿಚಯಿಸುತ್ತಿದೆ. ನೂರಾರು ತರು ಲತೆಗಳ ಪ್ರಾಕೃತಿಕ ಚೆಲುವಿನ ತಾಣವಾದ ಬಿಆರ್‌ಟಿ ಅರಣ್ಯದಲ್ಲಿ ಈ ಬಾರಿ ನಡೆದ ‘ಚಿಣ್ಣರ ವನ ದರ್ಶನ’ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಕಾಡಿನ ಬಗ್ಗೆ ಹತ್ತಾರು ಒಳ ನೋಟಗಳನ್ನು ತೆರೆದಿಡುವ, ಕಾಡಿನ ಸೊಬಗನ್ನು ಸವಿಯುವ ಅವಕಾಶವನ್ನು ಮಕ್ಕಳಿಗೆ ನೀಡಲಾಯಿತು. ಕಾಡಿನ ಜೀವಿಗಳ ಆವಾಸವನ್ನು ಪರಿಚಯಿಸಿ ಅರಣ್ಯ ರಕ್ಷಣೆಯ ಭಾವವನ್ನು ಮಕ್ಕಳ ಭಾವ ಕೋಶದಲ್ಲಿ ಬಿತ್ತುವ ಕೈಂಕರ್ಯ ಮಾಡಲಾಯಿತು.
ಆನೆ, ಹುಲಿ, ಪಕ್ಷಿ, ಸಸ್ಯ, ಬಳ್ಳಿ, ಹೂ ಗಿಡ ವೈವಿಧ್ಯತೆಯ ವಿಕಾಸವನ್ನು ವಿದ್ಯಾರ್ಥಿನಿಯರಿಗೆ ತಿಳಿಸಲಾಯಿತು. ಮನುಕುಲಕ್ಕೆ ಕಾನನನದ ಅಗತ್ಯ, ಬೀಜ ಪ್ರಸರಣದಲ್ಲಿ ಹಕ್ಕಿ, ಜಿಂಕೆ, ಕಡವೆಗಳ ಸಾಂಗತ್ಯ, ಮಣ್ಣಿನ ಸವಕಳಿ ತಪ್ಪಿಸುವಲ್ಲಿ ಬೇರಿನ ಮಹತ್ವ, ಸೂಕ್ಷ್ಮ ಜೀವಿ, ಇರುವೆ, ಗೆದ್ದಲು ಕೀಟಗಳ ಉಪಯೋಗವನ್ನು ಕಾವ್ಯ, ಚುಟುಕಗಳ ಮೂಲಕ ಮಕ್ಕಳಿಗೆ ತಿಳಿಸಲಾಗುತ್ತದೆ ಎನ್ನುತ್ತಾರೆ ಪರಿಸರ ಪ್ರಿಯ ನವೀನ್ ಜಗಲಿ.
ದಟ್ಟ ಅಡವಿಯ ನಡುವಿನ ಸಂಚಾರ ವಿಶಿಷ್ಟ ಅನುಭವ ನೀಡುತ್ತದೆ. ಆನೆ, ಚಿರತೆಗಳ ವೇಗ, ವ್ಯಾಘ್ರ ಘರ್ಜನೆ ಕೂತೂಹಲ ಮೂಡಿಸಿತು ಎಂದು ವಿದ್ಯಾರ್ಥಿಗಳಾದ ಮಹದೇವಿ ಮತ್ತು ಭಾವನಾ ಹೇಳಿದರು.
ಗುಂಬಳ್ಳಿ ಸಸ್ಯಕ್ಷೇತ್ರ, ಮರಡಿ ಗುಡ್ಡ, ಅರಣ್ಯ ಕಚೇರಿ, ಬಿಆರ್‌ಟಿ ತಪಾಸಣಾ ಕೇಂದ್ರ, ದೇವಾಲಯ, ಕೆ,ಗುಡಿ, ಸಫಾರಿ ಸೇರಿ ಹಲವಾರು ನೈಸರ್ಗಿಕ ನೆಲೆಗಳನ್ನು ಮಕ್ಕಳು ವೀಕ್ಷಿಸಿ, ತಜ್ಞರ ಜೊತೆ ಸಂವಾದ ನಡೆಸಿದರು.
ಅರಣ್ಯ ಅಧಿಕಾರಿಗಳಾದ ಅನಂತರಾಮು, ವಾಸು, ನಿಸಾರ್, ವಿನೋದ್, ಪ್ರಾಂಶುಪಾಲ ಮೊಹಮ್ಮದ್ ಸೋಹೆಬ್ ಪಾಷಾ ಹಾಗೂ ಇತರರು ಇದ್ದರು.
ಗ್ರಾಮೀಣ ಭಾಗದ ಮಕ್ಕಳಿಗೆ ವನದರ್ಶನ ಕಾರ್ಯಕ್ರಮಗಳಿಂದ ಹೆಚ್ಚು ಅನುಕೂಲ ಆಗಲಿದೆ. ಕಾಡಿನ ಜೀವಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಲಿದೆ. ಮಕ್ಕಳ ಮನೋಲೋಕ ಮತ್ತಷ್ಟು ಪರಿಸರ ಸ್ನೇಹಿಯಾಗಲಿದೆ.ಜಿ.ಮಲ್ಲೇಶಪ್ಪ ಪರಿಸರ ಪ್ರೇಮಿ
‘ಅರಣ್ಯ ಇಲಾಖೆ ಕಾರ್ಯಕ್ರಮ’ ಚಿಣ್ಣರ ವನ ದರ್ಶನ ಕಾರ್ಯಕ್ರಮ ಸರ್ಕಾರಿ ಶಾಲಾ ಮಕ್ಕಳಿಗೆ ವರವಾಗಿದೆ. ಎರಡು ದಿನದ ಕಾರ್ಯಕ್ರಮದಲ್ಲಿ ಸಸ್ಯ ಕ್ಷೇತ್ರ ಕಾಡಿನ ಹಾದಿ ಮೂಲಿಕೆ ಗಿಡ ಹೊಳೆ ನೀರು ನದಿ ಆನೆ ಹುಲಿ ವೀಕ್ಷಣೆ ಸಫಾರಿ ಮಾಡಲಿದ್ದಾರೆ. ಅರಣ್ಯ ರಕ್ಷಕರು ಅಧಿಕಾರಿಗಳ ಕಾರ್ಯ ಹಂಚಿಕೆ ಬಗ್ಗೆ ಮಕ್ಕಳಿಗೆ ತಿಳಿಸಲಾಗುತ್ತದೆ. ಚಿಣ್ಣರಿಗೆ ಕಾನನದ ಮುಂಜಾವಿನ ನೋಟ ಪ್ರಾಣಿಗಳ ಚಲನವಲನಗಳ ಬಗ್ಗೆ ತಿಳಿಸಲಾಗುತ್ತದೆ’ ಎಂದು ಆರ್‌ಎಫ್‌ಒ ನಾಗೇಂದ್ರನಾಯಕ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.