ಹನೂರು: ಪಟ್ಟಣದ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಪ್ರಚಲಿತ ವಿದ್ಯಮಾನ, ವಿಜ್ಞಾನದ ಆಗು ಹೋಗುಗಳ ಅರಿವಿಗೆ ಉತ್ತಮ ವೇದಿಕೆಯಾಯಿತು.
ಪ್ರಾಥಮಿಕ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತುಪ್ರದರ್ಶನ ಹಲವು ಚರ್ಚೆ ಹಾಗೂ ಕುತೂಹಲಗಳನ್ನು ಹುಟ್ಟುಹಾಕಿತು. ಖಗೋಳ ವಿಜ್ಞಾನ, ಬಾಹ್ಯಕಾಶ ವಿಜ್ಞಾನ, ನಕ್ಷತ್ರ ಪುಂಜಗಳು, ಸೌರಮಂಡಲ, ಕಕ್ಷೆಗಳ ವಿಧಗಳು, ಸೂರ್ಯ, ಧೂಮಕೇತುಗಳು, ಉಲ್ಕೆಗಳು, ಚಂದ್ರಯಾನ -2, ಭಾಸ್ಕರ-1, ಆರ್ಯಭಟ, ಮಂಗಳಯಾನ, ನಕ್ಷತ್ರ ಪುಂಜಗಳ ಪ್ರಪಂಚ, ಕ್ಷುದ್ರಗ್ರಹಗಳು, ನಕ್ಷತ್ರದ ಮಾದರಿಗಳು, ರಸಗೊಬ್ಬರ ತಯಾರಿಕಾ ವಿಧಾನ, ಹಸಿ ಹಾಗೂ ಒಣ ಕಸ ವಿಂಗಡಣೆ, ಆಹಾರ ಸಂಸ್ಕರಣೆಯ ವಿಧಾನಗಳು, ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಪರಿಸರ ಸಂರಕ್ಷಣೆ, ನೀರಿನ ಮೂಲಗಳು ಹಾವುಗಳ ಸಂರಕ್ಷಣೆ, ಅರಣ್ಯ ನಾಶದಿಂದಾಗುವ ದುಷ್ಪರಿಣಾಮಗಳು, ಪರಿಸರ ಸಮತೋಲನ ಕಾಪಾಡುವಲ್ಲಿ ವನ್ಯಜೀವಿಗಳ ಪಾತ್ರ ಮುಂತಾದ ಅಂಶಗಳನ್ನೊಳಗೊಂಡ 165 ಮಾದರಿಗಳನ್ನು ಪ್ರೌಢ ಹಾಗೂ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ತಯಾರಿಸಿ ಗಮನ ಸಳೆದರು.
ರಸ್ತೆ ದಾಟುವಾಗ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳು, ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವಾಗ ಪಾಲಿಸಬೇಕಾದ ನಿಯಮಗಳು, ಉಲ್ಲಂಘಿಸಿದರೆ ದಂಡ ವಿಧಿಸುವ ಪ್ರಕ್ರಿಯೆಗಳ ಬಗ್ಗೆ ಸುಲಲಿತವಾಗಿ ವಿವರಿಸುವ ಮೂಲಕ ಮೂರನೇ ತರಗತಿ ಜೆಸ್ಸಿಕಾ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು.
ಪೋಷಕರು ಭಾಗಿ: ವಿಜ್ಞಾನ ವಸ್ತು ಪ್ರದರ್ಶನಕ್ಕೆ ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಭೇಟಿನೀಡಿದ್ದರು. ಮಕ್ಕಳು ತಯಾರಿಸಿದ ವಿಜ್ಞಾನದ ಮಾದರಿಗಳನ್ನು ವೀಕ್ಷಣೆ ಮಾಡಿ ಸಂತಸಪಟ್ಟರು. ಮಕ್ಕಳಲ್ಲಿರುವ ಕ್ರಿಯಾಶೀಲತೆ, ವಿಜ್ಞಾನದ ಬಗ್ಗೆ ಇರುವ ಕುತೂಹಲ ಕಂಡು ಬೆರಗಾದರು.
ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗಿಯಾಗಿ ಮಾದರಿಗಳ ವಿವರಣೆ ನೀಡುತ್ತಿರುವುದು ಖುಷಿ ಕೊಟ್ಟಿದೆ. ಇಂತಹ ಕಾರ್ಯಕ್ರಮಗಳು ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರದ ಕಲಿಕೆಗೆ ಹೆಚ್ಚು ಸಹಕಾರಿಯಾಗಿದೆ. ಜೊತೆಗೆ ಮತ್ತಷ್ಟು ಪ್ರಯೋಗಗಳಿಗೆ ಉತ್ತೇಜನ ನೀಡುತ್ತದೆ ಎಂದು 6ನೇ ತರಗತಿ ವಿದ್ಯಾರ್ಥಿನಿ ನಂದಿತಾ ಅಭಿಪ್ರಾಯಪಟ್ಟರು.
ಪ್ರತಿ ವರ್ಷವೂ ಶಾಲೆಯಲ್ಲಿ ವಿಜ್ಞಾನ ಮೇಳ ವಸ್ತಪ್ರದರ್ಶನದಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಕಳೆದ ಬಾರಿ ಪ್ರೌಢಶಾಲೆಯ ಮಕ್ಕಳಿಗೆ ಸೀಮಿತವಾಗಿದ್ದ ಪ್ರದರ್ಶನ ಈ ಬಾರಿ ಪ್ರಾಥಮಿಕ ಶಾಲೆಗೂ ವಿಸ್ತರಣೆ ಮಾಡಲಾಗಿದೆ. ನೋಡಿ ಕಲಿಯುವುದಕ್ಕಿಂತ ಮಾಡಿ ತಿಳಿಯುವುದು ಅತ್ಯಂತ ಪರಿಣಾಮಕಾರಿಯಾಗಿರುವುದನ್ನು ಮನಗಂಡು ಮಕ್ಕಳೇ ಸ್ವತಃ ಮಾದರಿಗಳನ್ನು ತಯಾರಿಸಿ ಅವುಗಳ ಬಗ್ಗೆ ವಿವರಣೆ ನೀಡುತ್ತಿದ್ದಾರೆ. ಇದರಿಂದ ಕಲಿತ ವಿಚಾರಗಳು ಮಕ್ಕಳಲ್ಲಿ ದೀರ್ಘಕಾಲ ಸ್ಮೃತಿಪಟದಲ್ಲಿ ಉಳಿಯುತ್ತದೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಕೆಗೂ ಸಹಕಾರಿಯಾಗುತ್ತದೆ. –ಮಧುಸೂದನ್ ಪ್ರಾಂಶುಪಾಲರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.