ADVERTISEMENT

ಮುಸ್ಲಿಂ,ದಲಿತರ ಪೌರತ್ವ ಕಸಿಯುವ ಹುನ್ನಾರ: CAA ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ: ಕೇಂದ್ರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 15:56 IST
Last Updated 15 ಮಾರ್ಚ್ 2024, 15:56 IST
ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದನ್ನು ಖಂಡಿಸಿ ಎಸ್‌ಡಿಪಿಐ ಮುಖಂಡರು ಚಾಮರಾಜನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು
ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದನ್ನು ಖಂಡಿಸಿ ಎಸ್‌ಡಿಪಿಐ ಮುಖಂಡರು ಚಾಮರಾಜನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಕೇಂದ್ರ ಸರ್ಕಾರ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಜಾರಿಗೊಳಿಸಿರುವುದನ್ನು ಖಂಡಿಸಿ ಎಸ್‌ಡಿಪಿಐ ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. 

ನಗರದ ಸುಲ್ತಾನ್‌ ಷರೀಫ್‌ ವೃತ್ತದ ಬಳಿ ಸೇರಿದ ಪ್ರತಿಭಟನಕಾರರು ಧರಣಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬ್ರಾರ್‌ ಅಹಮದ್‌ ಮಾತನಾಡಿ, ‘ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡಬಾರದು ಎಂದು ನಮ್ಮ ಸಂವಿಧಾನದಲ್ಲಿ ನಮೂದಿಸಲಾಗಿದೆ. ಹಾಗಿದ್ದರೂ ನಮ್ಮ ಸಂವಿಧಾನವನ್ನು ಎಂದೂ ಮನಸಾರೆ ಒಪ್ಪಿಕೊಳ್ಳದ ಫ್ಯಾಸಿಸ್ಟ್‌ ಮನಸ್ಥಿತಿಯ ಬಿಜೆಪಿ ತನ್ನ ಸೈದ್ಧಾಂತಿಕ ಗುರು ಆರ್‌ಎಸ್‌ಎಸ್‌ನ ಆಣತಿ ಮೇರೆಗೆ ಸಿಎಎ ಕರಾಳ ಕಾಯ್ದೆಯನ್ನು ಜಾರಿಗೆ ತಂದಿದೆ’ ಎಂದು ದೂರಿದರು.

ADVERTISEMENT

‘ಈ ಕಾಯ್ದೆಯು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದು ಕೇವಲ ಮುಸ್ಲಿಂ ವಿರೋಧಿ ಅಲ್ಲ. ಈ ದೇಶದ ದಲಿತರು, ಆದಿವಾಸಿಗಳು ಮತ್ತು ಕಡುಬಡವರ ಪೌರತ್ವ ಮತ್ತು ಮತದಾನದ ಹಕ್ಕು ಕಸಿಯುವ ಹುನ್ನಾರವೂ ಇದರ ಹಿಂದಿದೆ’ ಎಂದು ಅಬ್ರಾರ್ ಆರೋಪಿಸಿದರು. 

‘2019ರಲ್ಲಿ ಈ ಮಾನವ ವಿರೋಧಿ, ತಾರತಮ್ಯದ ಕಾನೂನನ್ನು ಜಾರಿ ಮಾಡಲು ಮೋದಿ ಸರ್ಕಾರ ಹೊರಟಾಗ ಇಡೀ ದೇಶದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ, ಪ್ರತಿರೋಧ ಎದುರಾಯಿತು. ಇದು ಮುಸ್ಲಿಮರಿಗೆ ಸಂಬಂಧಪಟ್ಟ ವಿಚಾರ ಎಂದು ಬಿಂಬಿಸಿ ಆ ಮೂಲಕ ದೇಶದ ಇತರೆ ಸಮುದಾಯದ ಪ್ರಜೆಗಳನ್ನು ಈ ಪ್ರತಿಭಟನೆಗಳಿಂದ ದೂರ ಇಡುವ ಸಂಚನ್ನು ಅಂದು ಬಿಜೆಪಿ ಮಾಡಿತ್ತು. ಆದರೆ, ಎಲ್ಲ ಧರ್ಮೀಯರ ಒಗ್ಗಟ್ಟಿನ ಪ್ರತಿರೋಧಕ್ಕೆ ತತ್ತರಿಸಿದ ಸರ್ಕಾರ ಅಂದು ಇದರ ಅನುಷ್ಠಾನವನ್ನು ಮುಂದೂಡುವ ಅನಿವಾರ್ಯತೆಗೆ ಸಿಲುಕಿತ್ತು. ಈಗ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಧರ್ಮದ ಆಧಾರದ ಮೇಲೆ ಮತಗಳನ್ನು ಒಡೆಯಲು ಕಾಯ್ದೆ ಜಾರಿ ಮಾಡಿದೆ’ ಎಂದು ದೂರಿದರು. 

ಧರ್ಮಗುರು ಮೊಹಮ್ಮದ್ ಇಸ್ಮಾಯಿಲ್ ರಶಾದಿ, ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಸೈಯದ್ ಆರೀಫ್, ಜಿಲ್ಲಾ ಖಜಾಂಚಿ ನಯಾಜ್, ಪ್ರಧಾನ ಕಾರ್ಯದರ್ಶಿ, ನಗರಸಭಾ ಸದಸ್ಯ ಮಹೇಶ್, ನಗರಸಭಾ ಸದಸ್ಯರಾದ ಕಲೀಲ್ ಉಲ್ಲಾ, ಮೊಹಮ್ಮದ್ ಅಮೀಕ್, ಅಫ್ಸರ್ ಪಾಷ ಪಾಲ್ಗೊಂಡಿದ್ದರು.

‘ಶ್ರೀಮಂತರಿಗೆ ಅನುಕೂಲ’

‘ಪೌರತ್ವ ನಿರೂಪಿಸಲು ಸರ್ಕಾರ ಕೇಳುತ್ತಿರುವ ಕಾಗದ ಪತ್ರಗಳು ದಲಿತರು ಆದಿವಾಸಿಗಳು ಮತ್ತು ಕಡು ಬಡವರಲ್ಲಿಯೂ ಲಭ್ಯವಿಲ್ಲ. ಸ್ಥಿತಿವಂತರಲ್ಲಿ ಸುಲಭವಾಗಿ ದೊರೆಯಬಹುದಾದ ಕಾಗದ ಪತ್ರಗಳನ್ನೇ ಅಧಿಕೃತ ಪತ್ರಗಳಾಗಿ ಪರಿಗಣಿಸುವ ಮನಸ್ಥಿತಿ ಸರ್ಕಾರಕ್ಕೆ ಇದೆ. ಈ ಮೂಲಕ ದಲಿತರು ಆದಿವಾಸಿಗಳು ಮತ್ತು ಕಡುಬಡವರನ್ನು ಪೌರತ್ವ ವಿಚಾರದಲ್ಲಿ ಅನಗತ್ಯ ತೊಂದರೆ ನೀಡುವುದು ಸರ್ಕಾರದ ದುರುದ್ದೇಶ. ಮೂಲ ನಿವಾಸಿಗಳ ಮೇಲೆ ಅಕ್ರಮ ವಲಸಿಗರು ಎಂಬ ಮುದ್ರೆ ಒತ್ತಿ ಅವರನ್ನು ದೇಶದ ಭಿನ್ನ ಪ್ರಜೆಗಳು ಎಂಬಂತೆ ಬಿಂಬಿಸಲು ಸರ್ಕಾರ ಕರಾಳ ಕಾನೂನು ತಂದಿದೆ’ ಎಂದು ಅಬ್ರಾರ್‌ ಅಹಮದ್‌ ಆರೋಪಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.