ADVERTISEMENT

ಸುಳ್ವಾಡಿ ದುರಂತ ಪ್ರಕರಣಕ್ಕೆ 2 ವರ್ಷ; ಸಂತ್ರಸ್ತರ ಕುಟುಂಬ ಇನ್ನೂ ಅತಂತ್ರ

ಬಿ.ಬಸವರಾಜು
Published 13 ಡಿಸೆಂಬರ್ 2020, 19:30 IST
Last Updated 13 ಡಿಸೆಂಬರ್ 2020, 19:30 IST
ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಬದುಕುಳಿದವರು
ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಬದುಕುಳಿದವರು   

ಹನೂರು: ತಾಲ್ಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷಪ್ರಸಾದ ದುರಂತ ನಡೆದು ಸೋಮವಾರಕ್ಕೆ (ಡಿ.14) ಎರಡು ವರ್ಷ. ದೇವಸ್ಥಾನದ ಟ್ರಸ್ಟಿಗಳ ನಡುವಿನ ವೈಯಕ್ತಿಕ ದ್ವೇಷಕ್ಕೆ ಪ್ರಾಣ ಕಳೆದುಕೊಂಡ 17 ಮಂದಿಯ ಕುಟುಂಬಗಳು ಇನ್ನೂ ಅತಂತ್ರ ಸ್ಥಿತಿಯಲ್ಲಿವೆ.

ಅಸ್ವಸ್ಥಗೊಂಡ 110ಕ್ಕೂ ಹೆಚ್ಚು ಜನರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಖುದ್ದಾಗಿ ಸಂತ್ರಸ್ತರ ಬಳಿಗೇ ಬಂದು ನೀಡಿದ ಭರವಸೆಗಳು ಇನ್ನೂ ಈಡೇರಿಲ್ಲ.

‘ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಅವನ ಜೊತೆ ನಾವು ಹೋಗಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಹೇಳುವಾಗ ಮಾರಕ್ಕ ಅವರ ಕಣ್ಣಾಲಿಗಳು ತುಂಬಿ ಬಂದವು.

ADVERTISEMENT

2018ರ ಡಿ.14ರಂದು ವಿಷ ಪ್ರಸಾದ ಸೇವಿಸಿ ಬಿದರಳ್ಳಿ ಗ್ರಾಮದ ಶಾಂತರಾಜು ಮೃತಪಟ್ಟಿದ್ದರು. ಕುಟುಂಬದ ಆಧಾರಸ್ತಂಭವಾಗಿದ್ದ ಶಾಂತರಾಜು ಅವರನ್ನುಕಳೆದುಕೊಂಡ ಕುಟುಂಬ ಎರಡು ವರ್ಷಗಳಿಂದ ವೇದನೆ ಅನುಭವಿಸುತ್ತಿದೆ.

‘ಮನೆಯಲ್ಲಿ ದುಡಿಯುವವರು ಇಲ್ಲದೇ, ಇತ್ತ ಸರ್ಕಾರದ ಭರವಸೆಗಳು ಈಡೇರದೆ ಯಾತನೆ ಪಡುವಂತಾಗಿದೆ’ ಎಂದು ಮಾರಕ್ಕ ದುಃಖಿಸಿದರು.

ದುಷ್ಕೃತ್ಯದಲ್ಲಿ ಮಕ್ಕಳನ್ನು ಕಳೆದುಕೊಂಡತಂದೆ ತಾಯಿ, ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು, ಪತಿಯನ್ನು ಕಳೆದುಕೊಂಡವರು, ಪತ್ನಿಯನ್ನು ಕಳೆದುಕೊಂಡವರು ಇಂದಿಗೂ ವೇದನೆ ಪಡುತ್ತಿದ್ದಾರೆ. ಈ ಕರಾಳ ಘಟನೆ ಸುತ್ತಮುತ್ತಲ ಊರಿನವರ ನೆನಪಿನಿಂದ ಮಾಸಿ ಹೋಗಿಲ್ಲ.

ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಡಿ.24ರಂದು ಬಿದರಹಳ್ಳಿಗೆ ಬಂದುಸಂತ್ರಸ್ತ ಕುಟುಂಬದವರಿಗೆ ಸಾಂತ್ವನ ಹೇಳಿ, ತಪ್ಪಿತಸ್ಥರಿಗೆ ಕಾನೂನಿನಡಿ ಶಿಕ್ಷೆ ವಿಧಿಸುವುದರ ಜೊತೆಗೆ ಮೃತಪಟ್ಟವರ ಹಾಗೂ ಅಸ್ವಸ್ಥಗೊಂಡವರ ಕುಟುಂಬಗಳ ಜೀವನ ನಿರ್ವಹಣೆಗಾಗಿ ಕೆಲವು ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು.

‘ಎರಡು ವರ್ಷ ಕಳೆದರೂ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ’ ಎಂಬುದು ಸಂತ್ರಸ್ತರ ಆರೋಪ.

‘ಪ್ರಾರಂಭದಲ್ಲಿ ಪಡಿತರ ನೀಡಿದರು. ಆಸ್ಪತ್ರೆಯಿಂದ ಮರಳಿದ ಮೇಲೆ ಮತ್ತೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದರಿಂದ ಕೆಲವು ತಿಂಗಳು ವೈದ್ಯರನ್ನು ನಿಯೋಜಿಸಿದರು. ಆದರೆ, ಇಂದಿಗೂ ವಿಷ ಪ್ರಸಾದ ತಿಂದವರು ಹಲವು ಶಾಶ್ವತ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿದರಳ್ಳಿ ಗ್ರಾಮದ ನೀಲಾ, ಕುಮಾರ, ಆರಾಯಿ, ಸರೋಜ ಎಂಬುವವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರ ಕಷ್ಟ ಕೇಳುವವರು ಯಾರು’ ಎಂದು ಬಿದರಳ್ಳಿ ಗ್ರಾಮದ ರಂಗಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

‘ದುರಂತದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ನಮಗೆ ವಿದ್ಯಾಭ್ಯಾಸ ಮುಗಿದ ಬಳಿಕ ನೌಕರಿ ಕೊಡುವುದಾಗಿ ಅಂದಿನ ಅಧಿಕಾರಿಗಳು ಹೇಳಿದ್ದರು. ಈಗ ನನ್ನ ವಿದ್ಯಾಭ್ಯಾಸ ಮುಗಿಯುತ್ತಿದೆ. ಅಧಿಕಾರಿಗಳನ್ನು ಕೇಳಿದರೆ ಇದು ನಮಗೆ ಬರುವುದಿಲ್ಲ, ಅದನ್ನು ಬೆಂಗಳೂರಿನ ಕಚೇರಿಗೆ ಕಳುಹಿಸುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ. ತಮ್ಮ ಮತ್ತು ತಂಗಿ ನನ್ನನ್ನೇ ಆಶ್ರಯಿಸಿದ್ದಾರೆ. ಅವರ ಸಂಪೂರ್ಣ ಜವಬ್ದಾರಿ ಈಗ ನನ್ನ ಮೇಲೆ ಬಿದ್ದಿದೆ ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ’ ಎಂದು ಕೋಟೆಪೋದೆ ಗ್ರಾಮದ ರಾಣಿಬಾಯಿ ಅವರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ಈಡೇರದ ಭರವಸೆ: ಘಟನೆ ನಂತರ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಎಂಬ ಒತ್ತಾಯ ವ್ಯಾಪಕವಾಗಿ ಕೇಳಿ ಬಂದಿತ್ತು. ಎರಡು ವರ್ಷಗಳಾದರೂ ಅದು ಇಂದಿಗೂ ಪ್ರಾಥಮಿಕ ಕೇಂದ್ರವಾಗಿಯೇ ಇದೆ.

‘ಘಟನೆಯ ಬಳಿಕ ವೆಂಟಿಲೇಟರ್ ಸೌಲಭ್ಯ ಇರುವ ಆಂಬುಲೆನ್ಸ್ ಅನ್ನು ಇಲ್ಲಿ ನಿಯೋಜಿಸಲಾಗಿತ್ತು. ಅದಾಗಿ ಒಂದೂವರೆ ತಿಂಗಳಲ್ಲಿ ಅದನ್ನು ತೆರವುಗೊಳಿಸಲಾಯಿತು. ಈ ಆಸ್ಪತ್ರೆ ವ್ಯಾಪ್ತಿಗೆ 24 ಹಳ್ಳಿಗಳು ಬರುತ್ತವೆ. ಅವಘಡಗಳು ಸಂಭವಿಸಿದರೆ ಇಲ್ಲಿ ಸೌಲಭ್ಯ ಕೊರತೆಯಿಂದ ರಾಮಾಪುರಕ್ಕೆ ತೆರಳಬೇಕು. ಆದ್ದರಿಂದ ಇದನ್ನು ಮೇಲ್ದರ್ಜಗೇರಿಸಬೇಕು ಎಂದು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರು ಪ್ರಯೋಜನವಾಗಿಲ್ಲ’ ಎಂದು ಮುಖಂಡ ರಾಮಲಿಂಗಂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನೀಡಿಲ್ಲ ಹಕ್ಕು ಪತ್ರ: ಸಂತ್ರಸ್ತರ ಕುಟುಂಬಗಳಿಗೆ ನಿವೇಶನ ಹಾಗೂ ಕೃಷಿ ನಡೆಸಲು ಭೂಮಿ ನೀಡುವ ವಾಗ್ದಾನವನ್ನು ಮುಖ್ಯಮಂತ್ರಿ ನೀಡಿದ್ದರು. ನಿವೇಶನ ಹಂಚಿಕೆ ಪ್ರಕ್ರಿಯೆ ಬಹುತೇಕ ಮುಗಿದಿದ್ದು, ಹಕ್ಕು ಪತ್ರ ಇನ್ನೂ ನೀಡಿಲ್ಲ. ಜಮೀನು ನೀಡುವ ವಿಚಾರದಲ್ಲಿ ಯಾವುದೇ ಪ್ರಗತಿಯಾಗಿಲ್ಲ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹನೂರು ತಹಶೀಲ್ದಾರ್‌ ನಾಗರಾಜು ಅವರು, ‘ಬಿದರಹಳ್ಳಿ ಗ್ರಾಮದ ಬಳಿ ಬೋಳುದಿಣ್ಣೆ ಬಳಿ ಎರಡು ಎಕರೆ ಜಾಗ ಗುರುತಿಸಿ ಅದನ್ನು ಗ್ರಾಮಪಂಚಾಯಿತಿಗೆ ನೀಡಲಾಗಿದೆ. ಅದನ್ನು ನಿವೇಶನಗಳನ್ನಾಗಿ ಹಂಚಿಕೆ ಮಾಡಲಾಗಿದೆ. ಆದರೆ ಇನ್ನು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿಲ್ಲ. ಜಮೀನು ನೀಡುವ ಸಂಬಂಧ ಇರುವ ಅಷ್ಟು ಫಲಾನುಭವಿಗಳಿಗೆ ಬೇಕಾದಷ್ಟು ಸರ್ಕಾರಿ ಜಾಗ ಇಲ್ಲ. ಖಾಸಗಿಯವರನ್ನು ಹುಡುಕಲಾಗುತ್ತಿದೆ. ಸಿಕ್ಕಿದ ಕೂಡಲೇ ಜಮೀನು ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು’ ಎಂದರು. ಎಂದು ಹನೂರು ತಹಶೀಲ್ದಾರ್ ನಾಗರಾಜು ತಿಳಿಸಿದರು.

ಆರೋಪಿಗಳು ಇನ್ನೂ ಜೈಲಲ್ಲಿ
ಪ್ರಕರಣದ ಪ್ರಮುಖ ಆರೋಪಿಗಳಾದ ಇಮ್ಮಡಿ ಮಹಾದೇವಸ್ವಾಮಿ, ಅಂಬಿಕಾ, ಮಾದೇಶ ಮತ್ತು ದೊಡ್ಡಯ್ಯ ಅವರು ಇನ್ನೂ ಜೈಲಿನಲ್ಲೇ ಇದ್ದಾರೆ. ಸುಪ್ರೀಂಕೋರ್ಟ್‌ನಲ್ಲೂ ಅವರಿಗೆ ಜಾಮೀನು ಸಿಕ್ಕಿಲ್ಲ.

ಇತ್ತ, ದೇವಾಲಯ ಸರ್ಕಾರದ ವಶಕ್ಕೆ ಹೋಗಿ, 50 ದಿನಗಳ ಹಿಂದೆ ಭಕ್ತರ ಪ‍್ರವೇಶಕ್ಕೆ ಮುಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.