ADVERTISEMENT

ಹನೂರು ‌| ಚಾಲನೆಯಲ್ಲಿರುವಾಗಲೇ ಮೂರ್ಛೆ ರೋಗ: ಕಂಬಕ್ಕೆ ಬಸ್‌ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 15:30 IST
Last Updated 8 ಸೆಪ್ಟೆಂಬರ್ 2024, 15:30 IST
ಹನೂರಿನಿಂದ ರಾಮಾಪುರಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಚಾಲಕ ಮೂರ್ಛೆ ಹೋದ ಪರಿಣಾಮ ಬಸ್ಸು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು.
ಹನೂರಿನಿಂದ ರಾಮಾಪುರಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಚಾಲಕ ಮೂರ್ಛೆ ಹೋದ ಪರಿಣಾಮ ಬಸ್ಸು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು.   

ಹನೂರು: ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಮೂರ್ಛೆರೋಗ ಕಾಣಿಸಿಕೊಂಡು ಕೆಳಗೆ ಬಿದ್ದ ಪರಿಣಾಮ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಶನಿವಾರ ಸಂಜೆ ಜರುಗಿದೆ.

ಕೆಎಸ್‌ಆರ್‌ಟಿಸಿ ಬಸ್ ಚಾಲಕ ಕಬ್ಬಳ್ಳಿ ಗ್ರಾಮದ ಸುಭಾಷ್ ಮೂರ್ಛೆ ಹೋದವರು. ಹನೂರು ಪಟ್ಟಣದಿಂದ ಅಜ್ಜೀಪುರ ಅಂಬಿಕಾಪುರ, ನಾಗಣ್ಣನಗರ, ರಾಮಪುರ ಮಾರ್ಗವಾಗಿ ಸಂಚರಿಸುವಾಗ ಬಸ್ ಚಾಲನೆ ಮಾಡುತ್ತಿದ್ದ ಸುಭಾಷ್‌ ಶನಿವಾರ ಏಕಾಏಕಿ ಮೂರ್ಚೆ ರೋಗ ಕಾಣಿಸಿಕೊಂಡು ಕೆಳಗೆ ಬಿದ್ದಿದ್ದಾರೆ. ಬಸ್ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನಿಂತುಕೊಂಡಿದೆ. ಆ ಸಮಯ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಅನಾಹುತ ತಪ್ಪಿದೆ.

‘ಬಸ್ಸಿನಲ್ಲಿ ಒಬ್ಬ ಪ್ರಯಾಣಿಕ ಹಾಗೂ ನಿರ್ವಾಹಕ ಮಾತ್ರ ಇದ್ದಿದ್ದರಿಂದ ಯಾವುದೇ ಗಾಯಗಳಾಗಿಲ್ಲ. ಪ್ರತಿದಿನ ಈ ಮಾರ್ಗವಾಗಿ ಸುಮಾರು 40ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಸಂಚಾರ ಮಾಡುತ್ತಿದ್ದರು. ಗೌರಿ– ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇದ್ದುದರಿಂದ ವಿದ್ಯಾರ್ಥಿಗಳು ಬಸ್‌ಗೆ ಬಂದಿರಲಿಲ್ಲ. ಇದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ADVERTISEMENT
ಚಾಲಕನಿಗೆ ಮೂರ್ಛೆ ರೋಗ ಇರುವುದು ನಮ್ಮ ಗಮನಕ್ಕೆ ಬಂದಿಲ್ಲ. ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು.
ಅಶೋಕ್, ಜಿಲ್ಲಾ ವಿಭಾಗೀಯ ನಿಯಂತ್ರಣ ಅಧಿಕಾರಿ

‘ಚಾಲಕ ಸುಭಾಷ್ 12 ವರ್ಷಗಳಿಂದ ಸಂಸ್ಥೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಎರಡು ಅಪಘಾತ ಮಾಡಿದ್ದಾರೆ. ‌ಮೂರ್ಛೆ ರೋಗ ಇರುವುದರಿಂದ ಇವರಿಗೆ ಬೇರೆ ಜವಾಬ್ದಾರಿ ನೀಡುವ ಬದಲು ಚಾಲಕನ ಹುದ್ದೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನು ಮುಂದಾದರೂ ಸಾರ್ವಜನಿಕರು ಶಾಲಾ-ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಬೇರೆ ಚಾಲಕರನ್ನು ನಿಯೋಜಿಸಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.