ADVERTISEMENT

ಹತ್ತೂರು ಉತ್ಸವಕ್ಕಿಂತ ಕೆಸ್ತೂರು ಹಬ್ಬ ಚಂದ!

ಎನ್.ಮಂಜುನಾಥಸ್ವಾಮಿ
Published 11 ಫೆಬ್ರುವರಿ 2024, 5:36 IST
Last Updated 11 ಫೆಬ್ರುವರಿ 2024, 5:36 IST
ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಜರುಗುವ ಗ್ರಾಮ ದೇವತೆಯ ಹಬ್ಬದಲ್ಲಿ ಸತ್ತಿಗೆ ಸೂರಿಪಾನಿ ಹೊತ್ತ ಭಕ್ತರ ಸಾಂಸ್ಕೃತಿಕ ಲೋಕ ಕಣ್ಣು ತುಂಬುತ್ತದೆ (ಸಂಗ್ರಹ ಚಿತ್ರ)
ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಜರುಗುವ ಗ್ರಾಮ ದೇವತೆಯ ಹಬ್ಬದಲ್ಲಿ ಸತ್ತಿಗೆ ಸೂರಿಪಾನಿ ಹೊತ್ತ ಭಕ್ತರ ಸಾಂಸ್ಕೃತಿಕ ಲೋಕ ಕಣ್ಣು ತುಂಬುತ್ತದೆ (ಸಂಗ್ರಹ ಚಿತ್ರ)   

ಯಳಂದೂರು: ಜಾತ್ರೆ, ಹಬ್ಬ, ಉತ್ಸವಗಳು ನಾಡಿನ ಸಾಂಸ್ಕೃತಿಕ ಜಗತ್ತಿನ ಬಿಂಬ. ಊರೊಟ್ಟಿನ ಹೆಸರಿನಲ್ಲಿ ಜರುಗುವ  ಕೋಲು ಕುಣಿತ, ತಮಟೆ ನಾದ, ಮಾರಿ ನೃತ್ಯ, ಹೆಂಗಳೆಯರ ಹಾಡು-ಹಸೆ ಗ್ರಾಮೀಣರ ಬದುಕಿನಲ್ಲಿ ಸಂತಸ ಸಂಭ್ರಮ ತುಂಬುತ್ತದೆ. ಜನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ದಾಟಿಸುತ್ತದೆ. ಇಂತಹ ಹತ್ತಾರು ಆಚರಣೆಗಳನ್ನು ಕಣ್ತುಂಬಿಕೊಡುವ ಕೆಸ್ತೂರು ಗ್ರಾಮದೇವತೆ ಹಬ್ಬಕ್ಕೆ ಶತಮಾನಗಳ ಚರಿತ್ರೆ ಇದೆ.  

ತಾಲ್ಲೂಕಿನ ಕೆಸ್ತೂರು ಮಾರಮ್ಮನ ಜಾತ್ರೆ 5 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ವರ್ಷ ಮಂಗಳವಾರ (ಫೆ.12) ಪ್ರಾರಂಭವಾಗಿ ಏ.26ರ ತನಕ ಗ್ರಾಮ ದೇವತೆಗೆ ನೂರಾರು ಅಲಂಕಾರ, ಪೂಜಾ ಕೈಂಕರ್ಯ ನೆರವೇರಲಿದೆ.

ಕೊಳ್ಳೇಗಾಲ ತಾಲ್ಲೂಕಿನ ಚಿಲಕವಾಡಿ ಹಾಗೂ ಸುತ್ತಲ ಗ್ರಾಮಗಳಾದ ಮಲ್ಲಿಗೆಹಳ್ಳಿ,  ಹೊಸೂರು, ಯರಿಯೂರು ಗ್ರಾಮಗಳ ಭಕ್ತಗಣ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು, ಹತ್ತಾರು ಧಾರ್ಮಿಕ ಕೈಂಕರ್ಯದಲ್ಲಿ ಭಾಗಿಯಾಗುತ್ತಾರೆ. ಜಾತಿ-ಮತ ಪಂಥಗಳನ್ನು ಮೀರಿ ತಾರತಮ್ಯ ಅರಿಯದೆ ಮಾರಿಗೆ ತಂಪಿನ ಹರಕೆ ಒಪ್ಪಿಸಿ ಪುನೀತರಾಗುತ್ತಾರೆ.

ADVERTISEMENT

ಹಬ್ಬಕ್ಕೆ ಸಿದ್ಧತೆ: 3 ತಿಂಗಳ ಕಾಲ ಜರುಗುವ ಉತ್ಸವಕ್ಕೆ ಫೆ.12 ರಂದು ಹಾಲರವಿ ಉತ್ಸವದ ಮೂಲಕ ಚಾಲನೆ ಸಿಗಲಿದೆ. ಗ್ರಾಮದ 12 ಸಮುದಾಯಗಳ ಭಕ್ತರು ಅಂದು ಮಿಂದು ಮಡಿಯುಟ್ಟು ಕಟ್ಟುನಿಟ್ಟಾಗಿ ಉಪವಾಸ ಇದ್ದು, ದೇವರ ಆರಾಧನೆಗೆ ಮುಂದಾಗುತ್ತಾರೆ. ಫೆ.13 ತಟ್ಟೆ (ಬಿದಿರು ಕೊಂಬು) ಕಟ್ಟಿ ಅಲ್ಲಿ ಗ್ರಾಮ ದೇವತೆಯನ್ನು ಕೂರಿಸಿ ಉಯ್ಯಾಲೆ ಆಡಿಸುತ್ತಾರೆ. 

ಮಾರ್ಚ್ 8ರ ಶಿವರಾತ್ರಿಯಂದು ಮಾರಮ್ಮ ಸಮೇತ ಬಸವೇಶ್ವರ, ಮಂಟೇಸ್ವಾಮಿ ಕಂಡಾಯ ಮೆರವಣಿಗೆ ನಡೆಯಲಿದೆ. 22ರಂದು ದಂಡಿನ ಮಾರಿಗೆ ಪ್ರತ್ಯೇಕ ಹಬ್ಬ, 24ಕ್ಕೆ ತಟ್ಟೆ ತರಿದು, ಕರಕಲು ಇಡುವುದು, 26ರಂದು ವದೆ ಮತ್ತು ಹೆಬ್ರೆಗಳ ಮದುವೆ ಹಾಗೂ ಜನಿವಾರ ಧಾರಣೆ, 28ರಂದು ಮೊದಲ ಮಸಿ ಮತ್ತು ಮಾರಿಕೇಲು ಉತ್ಸವ, ಮಾರ್ಚ್31ಕ್ಕೆ ಅವರಗಡೆ, ಏ.2ರಂದು ಗ್ರಾಮಸ್ಥರಿಂದ ತಂಪು, 3ರಂದು ಎದ್ದ ಬಲಿ ಮತ್ತು ತಲೆ ಮೇಲೆ ಕಾಯಿ ಒಡೆಯುವ ಕಾರ್ಯಕ್ರಮ, ಮಡೆ, ಏ.4ಕ್ಕೆ ದೊಡ್ಡ ಹಬ್ಬದಲ್ಲಿ ಓಕುಳಿ, ಕೋಲಾಟ, ಕುದುರೆ ಕುಣಿತ, ವಿವಿಧ ಸಂಸ್ಕೃತಿಗಳ ಅನಾವರಣ, 5ಕ್ಕೆ ಜುಟ್ಟು ಕುಣಿಸುವುದು, 9ರಂದು ಯುಗಾದಿ ಉತ್ಸವ ಹಾಗೂ ಕಾವೇರಿ ನದಿಯಿಂದ ದೇವರನ್ನು ಹೊತ್ತು ಮೆರವಣಿಗೆ, 16ರಂದು  ಚಿಲಕವಾಡಿಯಲ್ಲಿ ಧಾರ್ಮಿಕ ಕಾರ್ಯ, 22ಕ್ಕೆ ಕೊಂಡಬಂಡಿ ಉತ್ಸವ, 23ರಂದು ಕೊಂಡೋತ್ಸವ, ವೈದ್ಯನಾಥೇಶ್ವರ ಪೂಜೆ, 24ಕ್ಕೆ ಕಡೇ ಕುಣಿತ, ಏ.26ಕ್ಕೆ  ಬಲಿದೇವರ ಮನೆಯ ಕಾರ್ತಿಕ ಮಹೋತ್ಸವದ ನಂತರ ಹಬ್ಬ ಸಂಪನ್ನಗೊಳ್ಳುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಗ್ರಾಮದ ಎಲ್ಲ ಸಮುದಾಯದವರೂ ಭಾಗಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ಹಬ್ಬ
ಜನಪದ ತವರು ಕೆಸ್ತೂರು
‘ಹತ್ತೂರು ನೋಡುವುದಕ್ಕಿಂದ ಕೆಸ್ತೂರು ಮಾರಿ ಹಬ್ಬ ನೋಡು’ ಎಂಬ ಮಾತು ಸುತ್ತಮುತ್ತಲ ತಾಲ್ಲೂಕುಗಳಲ್ಲಿ ಜನಜನಿತವಾಗಿದೆ. ನಾಡಿನ ಸಂಸ್ಕೃತಿ ಬಿಂಬಿಸುವ ದೊಣ್ಣೆ ವರಸೆ ದೇವತೆ ಜೊತೆ ಸಾಗುವ ಸತ್ತಿಗೆ ಸೂರಿಪಾನಿ ಮೆರವಣಿಗೆ ಹೆಬ್ರೆ ಬಾರಿಸುವವರ ಕರಾಮತ್ತು ಸಾಲಂಕೃತ ಹೆಣ್ಣು ಮಕ್ಕಳ ಹಾಲರವೆ ಮಾರಿ ಕುಣಿತ ಉಯ್ಯಾಲೆಯ ಲಾಸ್ಯ ಬಿದುರು ಕಡಿಯುವಾಟ ಸುಮಂಗಲೆಯರ ತಂಪಿನಾರತಿ ಸಾಗುವಾಗಿನ ಚೆಲುವು ನೋರೆಂಟು ಜನಪದ ಸಾಂಸ್ಕೃತಿಕ ಲೋಕವನ್ನು ಕಟ್ಟಿಕೊಡುತ್ತದೆ. ಗ್ರಾಮದ ನಾಡ ಗೌಡರು ಎಲ್ಲ ಸಮಾಜದ ಯಜಮಾನರು ಒಟ್ಟಾಗಿ ಗ್ರಾಮ ಪರಂಪರೆಯನ್ನು ಯುವ ಜನಾಂಗಕ್ಕೆ ಕಟ್ಟಿಕೊಡುವ ಮೂಲಕ ಹೊಸತನದ ಅರಿವು ಮೂಡಿಸುತ್ತದೆ’ ಎಂದು ಉಪನ್ಯಾಸಕ ಪ್ರಸನ್ನ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.