ಚಾಮರಾಜನಗರ: ‘ಸಿನಿಮಾ, ಸಾಂಸ್ಕೃತಿಕ ಕ್ಷೇತ್ರಕ್ಕೆ ಶಂಕರ್‌ನಾಗ್ ಕೊಡುಗೆ ಅಪಾರ. ಅವರ ನೆನಪಿಸಿಕೊಳ್ಳುವ ಯಾವುದೇ ಕಾರ್ಯಕ್ರಮ ನೂರಾರು ಜನರಿಗೆ ಸ್ಫೂರ್ತಿ, ಚೈತನ್ಯ ಹಾಗೂ ಶ್ರೇಯಸ್ಸು ಕೊಡುವ ಕಾರ್ಯಕ್ರಮ’ ಎಂದು ನಟ ರಮೇಶ್ ಭಟ್ ಶನಿವಾರ ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟ, ಜಿಲ್ಲಾ ಜನಪದ ಪರಿಷತ್‌ಗಳು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಂಕರ್‌ನಾಗ್ ನೆನಪು ಕಾರ್ಯಕ್ರಮ ಉದ್ದೇಶಿಸಿ ವರ್ಚುವಲ್ (ವಿಡಿಯೊ ಕಾನ್ಫರೆನ್ಸ್) ಆಗಿ ಅವರು ಮಾತನಾಡಿದರು.
ಶಂಕರ್‌ನಾಗ್ ಅವರಲ್ಲಿ ಅಪಾರ ಪ್ರತಿಭೆ ಮತ್ತು ವಿಶೇಷ ಗುಣಗಳು ಇತ್ತು. 16 ಗಂಟೆ ಕೆಲಸ ಮಾಡುತ್ತಿದ್ದ ಅವರು, ‘ಸತ್ತ ಮೇಲೆ ಮಲಗಿರುವುದು ಇದ್ದೇ ಇರುತ್ತದೆ. ಬದುಕಿದಾಗ ಕೆಲಸ ಮಾಡೋಣ’ ಎಂಬ ಚಿಂತನೆಯ ಮೂಲಕ ಮೈತುಂಬ ಕೆಲಸ ಹಚ್ಚಿಕೊಳ್ಳುತ್ತಿದ್ದರು. ಪ್ರತಿಯೊಬ್ಬರನ್ನೂ ಅರ್ಥಮಾಡಿಕೊಂಡು ಅವರ ತಪ್ಪುಗಳನ್ನು ತಿದ್ದಿ ಒಳ್ಳೆಯತನದ ಗುಣವನ್ನು ಬೆಳೆಸುತ್ತಿದ್ದ ವ್ಯಕ್ತಿ’ ಎಂದು ಬಣ್ಣಿಸಿದರು.
ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ‘ಶಂಕರ್‌ನಾಗ್ ಅಭಿಮಾನಿಗಳ ಒಕ್ಕೂಟವು ಹಲವು ದಶಕಗಳಿಂದ ಶಂಕರ್‌ನಾಗ್ ಅವರ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜದ ಗಣ್ಯರನ್ನು ಹಾಗೂ ಆಟೊ ಚಾಲಕರನ್ನು ಗೌರವಿಸುವ ಕೆಲಸವನ್ನು ಮಾಡುತ್ತಿದೆ’ ಎಂದು ಮೆಚ್ಚುಗೆ ಸೂಚಿಸಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಸುರೇಶ್ ಋಗ್ವೇದಿ ಮಾತನಾಡಿ, ‘ಶಂಕರ್‌ನಾಗ್ ಅದ್ಭುತ ಪ್ರತಿಭೆ. ದೂರ ದೃಷ್ಟಿ, ವಿಶಾಲ ದೃಷ್ಟಿ, ಜ್ಞಾನ ದೃಷ್ಟಿ, ವಿವೇಕ ದೃಷ್ಟಿ, ಸಂಕಲ್ಪ ದೃಷ್ಟಿ ದುಡಿಮೆಯ ದೃಷ್ಟಿಕೋನದಿಂದ ಹೆಮ್ಮರವಾಗಿ ಬೆಳೆದ ಮಹಾನ್ ವ್ಯಕ್ತಿ. ತಂತ್ರಜ್ಞಾನವಿಲ್ಲದ ಕಾಲದಲ್ಲಿ ಅವರು ಮಾಡಿದ್ದ ಚಿತ್ರಗಳು ಇಂದಿಗೂ ತಾಂತ್ರಿಕವಾಗಿ ಶ್ರೀಮಂತ ಚಿತ್ರಗಳು’ ಎಂದರು.
ಸಾನಿಧ್ಯ ವಹಿಸಿದ್ದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಸಂಚಾಲಕಿ ದಾನೇಶ್ವರಿ, ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಸುರೇಶ್ ನಾಗ್ ಮಾತನಾಡಿದರು.
ಚಾಮರಾಜನಗರದ ರಾಮಸಮುದ್ರ ಪೂರ್ವ ಠಾಣೆಯ ಇನ್‌ಸ್ಪೆಕ್ಟರ್ ಶ್ರೀಕಾಂತ್, ಕಲಾವಿದ ಘಟಂ ಕೃಷ್ಣ, ಆಟೊ ಚಾಲಕರಾದ ಸುಬ್ರಹ್ಮಣ್ಯ, ಶಿವಣ್ಣಗೌಡ ಅವರನ್ನು ಸನ್ಮಾನಿಸಲಾಯಿತು.
ಪ್ರಾಧ್ಯಾಪಕ ಜಯಣ್ಣ, ಉದ್ಯಮಿ ಜಯಸಿಂಹ, ಸುರೇಶ್ ಗೌಡ, ಲಕ್ಷ್ಮಿ ನರಸಿಂಹ, ಆಟೊ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯಕ, ರಾಮಸಮುದ್ರದ ನಂಜುಂಡಸ್ವಾಮಿ, ಶಾಹಿದ ಬೇಗಂ, ರಂಗನಾಥ್, ಪದ್ಮಾಕ್ಷಿ ,ರವಿಚಂದ್ರ ಪ್ರಸಾದ್ , ಬಿ.ಕೆ.ಆರಾಧ್ಯ, ಶ್ರೀನಿವಾಸ್ ಗೌಡ, ಸರಸ್ವತಿ, ಶಿವ ಮಲ್ಲೇಗೌಡ, ರಾಮಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.