ADVERTISEMENT

ಚಾಮರಾಜನಗರ: ಅಭಿಮಾನಿ ಅಂಗಡಿಯಲ್ಲಿ ಚಹಾ ಕುಡಿದ ಶಿವಣ್ಣ

ಬೈರಾಗಿ ಚಿತ್ರದ ಪ್ರಚಾರಕ್ಕಾಗಿ ನಗರಕ್ಕೆ ಬಂದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 10:52 IST
Last Updated 5 ಜುಲೈ 2022, 10:52 IST
ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರು ಮಂಗಳವಾರ ಚಾಮರಾಜನಗರದಲ್ಲಿ ಅಭಿಮಾನಿ ಮಂಜುನಾಥ್‌ ಅವರ ಅಂಗಡಿಗೆ ಭೇಟಿ ಕೊಟ್ಟು ಚಹಾ ಕುಡಿದರು
ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರು ಮಂಗಳವಾರ ಚಾಮರಾಜನಗರದಲ್ಲಿ ಅಭಿಮಾನಿ ಮಂಜುನಾಥ್‌ ಅವರ ಅಂಗಡಿಗೆ ಭೇಟಿ ಕೊಟ್ಟು ಚಹಾ ಕುಡಿದರು   

ಚಾಮರಾಜನಗರ: ನಟ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರು ಮಂಗಳವಾರ ನಗರದಲ್ಲಿ ತಮ್ಮ ಅಭಿಮಾನಿ ಮಂಜುನಾಥ್‌ ಅವರ ಅಂಗಡಿಗೆ ಭೇಟಿ ನೀಡಿ ಚಹಾ ಕುಡಿದರು.

ಜುಲೈ 1ರಂದು ಬಿಡುಗಡೆಯಾಗಿರುವ ತಮ್ಮ ಬೈರಾಗಿ ಚಿತ್ರ ಪ್ರಚಾರಕ್ಕಾಗಿ ನಗರಕ್ಕೆ ಬಂದಿದ್ದ ಶಿವಣ್ಣ, ನೇರವಾಗಿ ಹಳೆ ಖಾಸಗಿ ಬಸ್‌ ನಿಲ್ದಾಣದ ಬಳಿ ಇರುವ ಮಂಜು ಅವರ ಅಂಗಡಿಗೆ ತೆರಳಿ ಚಹಾ ಸೇವಿಸಿದರು.

15 ವರ್ಷಕ್ಕೂ ಹೆಚ್ಚು ಸಮಯದಿಂದ ಶಿವರಾಜ್‌ ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಯಾಗಿರುವ ಮಂಜು ಅವರು, ತಮ್ಮ ಅಂಗಡಿಗೆ ಬರುವಂತೆ ಶಿವರಾಜ್‌ಕುಮಾರ್‌ ಅವರನ್ನು ಹಲವು ಬಾರಿ ಮನವಿ ಮಾಡಿದ್ದರು.

ADVERTISEMENT

‘ಎರಡು ವಾರಗಳ ಹಿಂದೆ ಬೈರಾಗಿ ಚಿತ್ರದ ಬಿಡುಗಡೆ ಪೂರ್ವ ಸಮಾರಂಭದಲ್ಲಿ ಭಾಗವಹಿಸಲು ಶಿವಣ್ಣ ಬಂದಿದ್ಧಾಗ, ಅಂಗಡಿಗೆ ಬರುವಂತೆ ಕೇಳಿಕೊಂಡಿದ್ದೆ. ಅಂದು ಬರುವುದಕ್ಕೆ ಅವರಿಗೆ ಆಗಿರಲಿಲ್ಲ. ಮುಂದಿನ ಬಾರಿ ಖಂಡಿತವಾಗಿ ಬರುವುದಾಗಿ ಹೇಳಿದ್ದರು. ಇಂದು ಬಂದಿದ್ದಾರೆ. ತುಂಬಾ ಸಂತೋಷವಾಗಿದೆ. ಚಹಾ ಚೆನ್ನಾಗಿತ್ತು ಎಂದು ಮೆಚ್ಚುಗೆ ಸೂಚಿಸಿದರು’ ಎಂದು ಮಂಜುನಾಥ್‌ ಮಾಧ್ಯಮಗಳಿಗೆ ತಿಳಿಸಿದರು.

2020ರ ಆಗಸ್ಟ್‌ನಲ್ಲಿ ಮಂಜು ಹುಟ್ಟುಹಬ್ಬಕ್ಕೆ ಪುನೀತ್‌ ರಾಜ್‌ಕುಮಾರ್‌ ಅವರು ಸ್ವತಃ ಹಾಡನ್ನು ಹಾಡಿ, ಅದನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದರು.ಮಂಜು ಮತ್ತು ಸ್ನೇಹಿತರು ಸೇರಿ ಶಿವ ಸೈನ್ಯ ಎಂಬ ತಂಡ ಕಟ್ಟಿಕೊಂಡಿದ್ದಾರೆ.

ಉತ್ತಮ ಪ್ರತಿಕ್ರಿಯೆ:ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್‌ಕುಮಾರ್‌, ‘ಬೈರಾಗಿ ಚಲನಚಿತ್ರಕ್ಕೆ ಚಾಮರಾಜನಗರ ಸೇರಿದಂತೆ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೊಂದು ವಿಭಿನ್ನವಾದ ಸಿನಿಮಾ. ಅಂತಹ ಚಿತ್ರಕ್ಕೆ ಜನರಿಂದ ಪ್ರೋತ್ಸಾಹ ಸಿಕ್ಕಿದರೆ ನಮಗೆ ಧೈರ್ಯ ಬರುತ್ತದೆ. ಬೈರಾಗಿಯಲ್ಲಿ ಸಾಮಾಜಿಕ ಸಂದೇಶ ಇರುವ ವಿಷಯ ಇದೆ. ಚಿತ್ರದ ಎಲ್ಲ ಪಾತ್ರಗಳಿಗೆ ಪ್ರಾಮುಖ್ಯ ಇದೆ. ನನಗೆ ಅಂತಹ ಪಾತ್ರಗಳನ್ನು ಮಾಡುವುದು ಇಷ್ಟ. ‘ಒನ್‌ ಮ್ಯಾನ್‌ ಶೋ’ ಸಿನಿಮಾಗಳನ್ನು ಮಾಡುವುದು ದೊಡ್ಡ ವಿಚಾರ ಅಲ್ಲ’ ಎಂದರು.

‘ಇದುವರೆಗೂ ಪುನೀತ್‌ ರಾಜ್‌ಕುಮಾರ್‌ ಅವರು ಚಾಮರಾಜನಗರ ಜಿಲ್ಲೆಯ ರಾಯಭಾರಿ ಆಗಿದ್ದರು. ಈಗ ನಿಮಗೆ ಆಹ್ವಾನ ಬಂದರೆ ಒಪ್ಪಿಕೊಳ್ಳುತ್ತೀರಾ’ ಎಂದು ಕೇಳಿದ್ದಕ್ಕೆ, ‘ಅವಕಾಶ ಸಿಕ್ಕಿದರೆ ಯಾರು ಒಪ್ಪಿಕೊಳ್ಳುವುದಿಲ್ಲ ಹೇಳಿ? ಖಂಡಿತವಾಗಿ ಒಪ್ಪಿಕೊಳ್ಳುತ್ತೇನೆ’ ಎಂದು ಉತ್ತರಿಸಿದರು.

ಇದಕ್ಕೂ ಮೊದಲು, ಶಿವರಾಜ್‌ಕುಮಾರ್‌ ಅವರು ಕೊಳ್ಳೇಗಾಲದಲ್ಲಿ ಬೈರಾಗಿ ಚಿತ್ರ ಪ್ರದರ್ಶನ ನಡೆಯುತ್ತಿದ್ದ ಶ್ರೀನಿವಾಸ ಚಿತ್ರಮಂದಿರಕ್ಕೆ ಭೇಟಿ ನೀಡಿ, ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಚಾಮರಾಜನಗರ ಭ್ರಮರಾಂಬ ಚಿತ್ರ ಮಂದಿರಕ್ಕೂ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.