ADVERTISEMENT

ಗುಂಡ್ಲುಪೇಟೆ | ಕಿರು ಸೇತುವೆ ಕುಸಿತ; ಸಂಚಾರಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 14:03 IST
Last Updated 27 ಜುಲೈ 2024, 14:03 IST
ಗುಂಡ್ಲುಪೇಟೆ ತಾಲ್ಲೂಕಿನ ಕೆಲಸೂರುಪುರಕ್ಕೆ ಸಂಪರ್ಕ ರಸ್ತೆಯಲ್ಲಿ ಕಿರು ಸೇತುವೆ ಕುಸಿದು ಸಂಚಾರಕ್ಕೆ ಅಡಚಣೆಯಾಗಿದೆ
ಗುಂಡ್ಲುಪೇಟೆ ತಾಲ್ಲೂಕಿನ ಕೆಲಸೂರುಪುರಕ್ಕೆ ಸಂಪರ್ಕ ರಸ್ತೆಯಲ್ಲಿ ಕಿರು ಸೇತುವೆ ಕುಸಿದು ಸಂಚಾರಕ್ಕೆ ಅಡಚಣೆಯಾಗಿದೆ   

ಗುಂಡ್ಲುಪೇಟೆ: ಕಿರು ಸೇತುವೆ ಕುಸಿದ ಪರಿಣಾಮ ತಾಲ್ಲೂಕಿನ ಶಿಂಡನಪುರದ ಗೇಟಿನಿಂದ ಕೆಲಸೂರುಪುರಕ್ಕೆ ಹೋಗುವ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ವರ್ಷದ ಹಿಂದೆ ನಿರ್ಮಾಣವಾಗಿರುವ ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿರುವುದು ಕಿರು ಸೇತುವೆ ಕುಸಿಯಲು ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಸೇತುವೆ ಮೇಲೆ ಸಣ್ಣದಾಗಿ ಕುಳಿ ಕಾಣಿಸಿಕೊಂಡಿತು. ನಂತರದಲ್ಲಿ ವಾಹನಗಳ ಓಡಾಟದಿಂದ ಕುಸಿಯಲಾರಂಭಿಸಿತು.  ಈಗ ಬಹುಭಾಗ ಕುಸಿದಿರುವ ಕಾರಣ ವಾಹನ ಚಾಲಕರು, ಸವಾರರು ಇನ್ನುಳಿದ ಸೇತುವೆ ಅರ್ಧ ಭಾಗದಲ್ಲಿ ಸಂಚರಿಸುತ್ತಿದ್ದು, ಮಳೆ ಕಾರಣ ಅಲ್ಲಿಯೂ ಕೆಸರಿನ ಗುಂಡಿ ಉಂಟಾಗಿದೆ. ಕಡಿದಾದ ಸೇತುವೆ ಭಾಗವನ್ನು ಏರಿಳಿಯಲು ಪ್ರಯಾಸಪಡಬೇಕಿದೆ.

ADVERTISEMENT

‘ಸೇತುವೆ ಕುಸಿದಿರುವ ಕಾರಣ ಅಪಾಯ ಸಂಭವಿಸದಿರಲೆಂದು ನಾವೇ ಕಲ್ಲು, ಮಣ್ಣು ಹಾಕಿ, ಟೇಪ್ ಕಟ್ಟಿದ್ದೇವೆ. ಆದರೆ, ರಾತ್ರಿ ವೇಳೆ ಕಲ್ಲು, ಟೇಪ್‌ಗಳು ಕಾಣುವುದಿಲ್ಲ. ಚಾಲಕರು ಅಥವಾ ವಾಹನ ಸವಾರರು ಮೈ ಮರೆತರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಪಟ್ಟವರು ತಾತ್ಕಾಲಿಕವಾಗಿ ಸಂಚಾರಕ್ಕೆ ಅನುಕೂಲ ಮಾಡಬೇಕು. ಸಂಭವನೀಯ ಅಪಾಯ ತಡೆಯಲು ಸೇತುವೆ ಕುಸಿದಿರುವ ಬಳಿ ಫಲಕ ಹಾಕಬೇಕು’ ಎಂಬುದು ಗ್ರಾಮಸ್ಥರ ಒತ್ತಾಯ.

‘ತಾಲ್ಲೂಕಿನ ಬೆಳವಾಡಿ, ಮಾಲಪುರ, ಶಿಂಡನಪುರದಿಂದ ಕೂಡಸೋಗೆ ಸಂಪರ್ಕ ರಸ್ತೆಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣಗೊಂಡಿವೆ. ಆದರೆ, ಕಳಪೆ ಕಾಮಗಾರಿ ರಸ್ತೆಗಳು ಹಾಳಾಗಿವೆ. ಆದ್ದರಿಂದ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಜತೆಗೆ ಪರವಾನಗಿಯನ್ನು ರದ್ದುಗೊಳಿಸಬೇಕು. ತನಿಖೆ ನಡೆಸಿ ಸಂಬಂಧಪಟ್ಟ ಎಂಜಿನಿಯರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸಿ.ಮಧು, ಕೆಲಸೂರುಪುರದ ಮಹದೇವಸ್ವಾಮಿ, ಮೂರ್ತಿ, ಚಂದ್ರು, ಮಹದೇವು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.