ಹನೂರು: ಮುಂಗಾರು ಮಳೆ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ಜಾನುವಾರುಗಳು ಮೇವು ನೀರಿಗಾಗಿ ಪರದಾಡುವಂತಾಗಿದ್ದು, ಆಹಾರ ಹಾಗೂ ನೀರು ಒದಗಿಸಲಾಗದೆ ರೈತರು ತಮ್ಮ ಜಾನುವಾರುಗಳ ಜೊತೆಗೆ ವಿವಿಧ ಕಡೆಗಳಿಗೆವಲಸೆ ಹೋಗುತ್ತಿದ್ದಾರೆ.
ಮುಂಗಾರುಕೈಕೊಟ್ಟ ಪರಿಣಾಮ ಅರಣ್ಯದೊಳಗೂ ಮೇವಿಗೆ ಕೊರತೆ ಉಂಟಾಗಿದ್ದು, ವನ್ಯಪ್ರಾಣಿಗಳು ನೀರು ಹಾಗೂ ಮೇವನ್ನರಸಿ ನಾಡಿನತ್ತ ಬರುತ್ತಿವೆ. ಜಾನುವಾರುಗಳಿಗೂ ಇದರ ಬಿಸಿ ತಟ್ಟಿದೆ. ಜಾನುವಾರು ಸಾಕಣಿಕೆಯನ್ನು ಜೀವನಾಧಾರವಾಗಿ ಮಾಡಿಕೊಂಡಿದ್ದ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
‘ಪ್ರತಿ ವರ್ಷ ತಮಿಳುನಾಡಿನ ಬರಗೂರಿನಲ್ಲಿ ನಡೆಯುವ ಹಾಡಿ ಜಾತ್ರೆಯಲ್ಲಿ ಇಲ್ಲಿನ ಜಾನುವಾರುಗಳನ್ನು ಕೊಂಡುಹೋಗಿ ಮಾರಲಾಗುತ್ತಿತ್ತು. ಆದರೆ, ಮೇವು ಕಡಿಮೆಯಾಗಿರುವುದರಿಂದ ಜಾನುವಾರುಗಳು ದೈಹಿಕವಾಗಿ ಕುಗ್ಗಿವೆ. ಅವುಗಳನ್ನು ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಮಾರಾಟವಾಗದೆ ಇರುವುದರಿಂದ ಮನೆಯಲ್ಲಿ ಉಳಿಸಿಕೊಂಡಿರುವ ಜಾನುವಾರುಗಳಿಗೆ ಮೇವು ಹಾಗೂ ನೀರು ಒದಗಿಸಲು ಆಗುತ್ತಿಲ್ಲ. ಏನು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ’ ಎಂದು ಕೌದಳ್ಳಿ ಗ್ರಾಮದ ರೈತ ಸಿದ್ದಮಾದು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.
ಕೌದಳ್ಳಿ, ಮಲ್ಲಯ್ಯನಪುರ, ಕುರಟ್ಟಿಹೊಸೂರು, ಕೆಂಚಯ್ಯನದೊಡ್ಡಿ, ಪುದುನಗರ ಮುಂತಾದ ಕಡೆ ಮೇವಿನ ಕೊರತೆಯಿಂದಾಗಿ ಜಾಗೇರಿ, ಲೊಕ್ಕನಹಳ್ಳಿ ಭಾಗಕ್ಕೆ ರೈತರು ಜಾನುವಾರುಗಳ ಜೊತೆ ವಲಸೆ ಹೋಗುತ್ತಿದ್ದಾರೆ. ಕೆಲ ರೈತರು ದಿನ್ನಳ್ಳಿ ಭಾಗದ ತಮ್ಮ ಸಂಬಂಧಿಕರು ಹಾಗೂ ಪರಿಚಯ ಇರುವವರ ಹತ್ತಿರ ಜಾನುವಾರುಗಳನ್ನು ಬಿಟ್ಟು ಬರುತ್ತಿದ್ದಾರೆ. ಅವರು ಕೆಲವು ತಿಂಗಳು ಜಾನುವಾರುಗಳನ್ನು ಮೇಯಿಸಿ ಗೊಬ್ಬರ ಮಾರಾಟ ಮಾಡಿಕೊಂಡು ನಂತರ ಜಾನುವಾರುಗಳನ್ನು ಹಿಂದಿರುಗಿಸುತ್ತಾರೆ.
‘ಎರಡು ವರ್ಷಗಳ ಹಿಂದೆ ಇದೇ ರೀತಿ ಬರದ ಛಾಯೆ ಆವರಿಸಿತ್ತು. ಜಿಲ್ಲಾಡಳಿತ ರಾಮಾಪುರದ ಗೆಜ್ಜಲನತ್ತ ಗ್ರಾಮದಲ್ಲಿ ಗೋಶಾಲೆಯನ್ನು ತೆರೆದು ಜಾನುವಾರುಗಳಿಗೆ ನೀರು, ಮೇವಿನ ಅನುಕೂಲ ಕಲ್ಪಿಸಿತ್ತು. ಆದರೆ, ಈ ಬಾರಿ ಕೇವಲ ಮೇವಿನ ಬ್ಯಾಂಕ್ ಮಾತ್ರ ತೆರೆದಿದೆ. ಆದರೆ, ಆ ಮೇವನ್ನು ನಾವು ಪ್ರತಿದಿನ ಗ್ರಾಮಕ್ಕೆ ತೆಗೆದುಕೊಂಡು ಹೋಗುವುದು ಹೇಗೆ’ ಎಂದು ರೈತ ರುದ್ರಪ್ಪ ಪ್ರಶ್ನಿಸಿದರು.
‘ರೈತರು ಜಾನುವಾರುಗಳೊಂದಿಗೆ ಬೇರೆಡೆ ವಲಸೆ ಹೋಗುತ್ತಿದ್ದರೂ ಅಧಿಕಾರಿಗಳು ಮೇವು ವಿತರಣೆಗೆ ಮುಂದಾಗಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮೇವು ವಿತರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ರೈತರು ಒತ್ತಾಯಿಸಿದ್ದಾರೆ.
21 ಟನ್ ಮೇವು ಸಂಗ್ರಹ
ಹನೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ 21 ಟನ್ ಜೋಳದ ಮೇವು ದಾಸ್ತಾನು ಮಾಡಲಾಗಿದೆ. 20 ದಿನಗಳ ಹಿಂದೆಯೇ ದಾಸ್ತಾನು ಮಾಡಿದ್ದರೂ ಇದುವರೆಗೆ ರೈತರಿಗೆ ವಿತರಣೆಯಾಗಿಲ್ಲ ಎಂಬುದು ರೈತರ ಆರೋಪ.
ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿಗಳು ಮೇವಿನ ಗುಣಮಟ್ಟವನ್ನು ಪರೀಕ್ಷಿಸಿ, ಒಂದು ಟನ್ ಮೇವು ಜಾನುವಾರುಗಳ ಸೇವನೆಗೆ ಯೋಗ್ಯವಾಗಿಲ್ಲ ಎಂದು ತಹಶೀಲ್ದಾರ್ ಅವರಿಗೆ ವರದಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.