ಚಾಮರಾಜನಗರ: ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣದ 26ನೇ ವರ್ಷಾಚಷರಣೆಯ ಅಂಗವಾಗಿ ಆಜಾದ್ ಹಿಂದೂ ಸೇನೆ ಹಾಗೂ ಸಂಘ ಪರಿವಾರದ ವಿವಿಧ ಸಂಘಟನೆಗಳು ನಗರದ ಹಳೇ ಬಸ್ ನಿಲ್ದಾಣದ ಮಾರಿಗುಡಿಯ ಆವರಣದಲ್ಲಿ ಶೌರ್ಯ ದಿವಸ ಆಚರಿಸಿದವು.
ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂದು ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಸಿಹಿ ಹಂಚಿಕೊಂಡು, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಆಜಾದ್ ಹಿಂದೂ ಸೇನೆಯ ಜಿಲ್ಲಾ ಅಧ್ಯಕ್ಷ ಎಂ.ಎಸ್. ಪೃಥ್ವಿರಾಜ್ ಮಾತನಾಡಿ, ‘ಬಾಬರನ ಕಾಲದಲ್ಲಿ ನಿರ್ಮಾಣವಾಗಿದ್ದ ಆ ಕಟ್ಟಡ ಮಸೀದಿ ಆಗಿರಲಿಲ್ಲ. ವಿವಾದಿತ ಕಟ್ಟಡವಾಗಿತ್ತು. 1992ರ ಡಿ.6ರಂದು ಕರಸೇವಕರು ಅದನ್ನು ಕೆಡವಿದ್ದರು. ಸ್ವಾಭಿಮಾನಿ ಹಿಂದೂಗಳು ಈ ದಿನವನ್ನು ಮರೆಯಲು ಸಾಧ್ಯವೇ ಇಲ್ಲ. ನಮ್ಮ ಶೌರ್ಯವನ್ನು ಪ್ರದರ್ಶಿಸಿದ ದಿನ ಇದು. ಹಾಗಾಗಿ ಶೌರ್ಯ ದಿವಸವಾಗಿ ಆಚರಿಸುತ್ತಿದ್ದೇವೆ’ ಎಂದರು.
ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಕೆ. ಸೋಮನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಸ್ವಾಮಿ, ನಗರಸಭಾ ಸದಸ್ಯರಾದ ಸುದರ್ಶನ ಗೌಡ, ಗಾಯತ್ರಿ ಚಂದ್ರಶೇಖರ್, ಸಿ.ಎಂ. ಶಿವರಾಜ್, ರಾಘವೇಂದ್ರ, ಆರ್‌ಎಸ್‌ಎಸ್‌ನ ಜಿಲ್ಲಾ ಕಾರ್ಯವಾಹ ಚಿಕ್ಕರಾಜು, ಬಿಜೆಪಿ ನಗರ ಘಟಕ ಅಧ್ಯಕ್ಷ ಸುಂದರರಾಜ್, ಮುಖಂಡ ಪುರುಷೋತ್ತಮ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.