ADVERTISEMENT

ಶೀತ ಹವೆಯಿಂದ ಹಿಪ್ಪುನೇರಳೆ ಬೆಳವಣಿಗೆ ಕುಂಠಿತ: ರೇಷ್ಮೆ ಹುಳು ಸಾಕಣೆಗೆ ಹಿಂದೇಟು

ಯಳಂದೂರು: 10 ಹೆಕ್ಟೇರ್‌ಗೆ ಮಿತಿಗೊಂಡ ರೇಷ್ಮೆ ಬೆಳೆ , ಶೀತ ಹವೆಯಿಂದ ಹಿಪ್ಪುನೇರಳೆ ಬೆಳವಣಿಗೆ ಕುಂಠಿತ

ನಾ.ಮಂಜುನಾಥ ಸ್ವಾಮಿ
Published 20 ಡಿಸೆಂಬರ್ 2022, 5:18 IST
Last Updated 20 ಡಿಸೆಂಬರ್ 2022, 5:18 IST
ಯಳಂದೂರು ತಾಲ್ಲೂಕಿನ ಅಂಬಳೆ ಹೊರ ವಲಯದಲ್ಲಿ ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಯಾಲದ ಹಿಪ್ಪುನೇರಳೆ ಗಿಡಗಳು 
ಯಳಂದೂರು ತಾಲ್ಲೂಕಿನ ಅಂಬಳೆ ಹೊರ ವಲಯದಲ್ಲಿ ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಯಾಲದ ಹಿಪ್ಪುನೇರಳೆ ಗಿಡಗಳು    

ಯಳಂದೂರು:ತುಂತುರು ಮಳೆ, ಮೋಡ ಮುಸುಕಿದ ವಾತಾವರಣ, ದಟ್ಟೈಸಿದ ಮಂಜು, ಚಳಿಯಿಂದ ಹಿಪ್ಪು ನೇರಳೆ ಗಿಡಗಳ ಬೆಳವಣಿಗೆ ವೇಗವನ್ನು ತಗ್ಗಿಸಿದರೆ, ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ಪ್ರಮಾಣದಲ್ಲಿ ಸೊಪ್ಪು ಸಿಗದಿರುವುದರಿಂದ ಹುಳು ಸಾಕಣೆಯೂ ಕುಂಠಿತವಾಗಿದೆ.

ತಾಲ್ಲೂಕಿನಲ್ಲಿ ಹಿಪ್ಪು ನೇರಳೆಯನ್ನು ಬೆಳೆದು, ರೇಷ್ಮೆ ಸಾಕಣೆ ಮಾಡುವವರ ಸಂಖ್ಯೆಯೂ ಕುಸಿಯುತ್ತಿದೆ. ಸೊಪ್ಪಿಗೆ ಬೇಡಿಕೆ ಇರುವುದರಿಂದ ಕೆಲವು ಕೃಷಿಕರು ಸೊಪ್ಪನ್ನು ಮಾರಾಟ ಮಾಡುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ.

ಒಂದು ಮೂಟೆ ಸೊಪ್ಪಿನ ಬೆಲೆ ₹ 750 ರಿಂದ ₹ 850ರ ಏರಿಕೆ ಕಂಡಿದೆ. ಸೊಪ್ಪು ಖರೀದಿ ಮಾಡಿ ರೇಷ್ಮೆ ಹುಳು ಸಾಕಣೆ ಮಾಡುವುದು ಹೊರೆಯಾಗುತ್ತಿದೆ. ಬೇಸಾಯಗಾರರು ಸಾಕಾಣಿಕೆ ಸ್ಥಗಿತ ಮಾಡಿದರೆ ರೇಷ್ಮೆ ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದು ನೂಲು ಬಿಚ್ಚಾಣಿಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಜೂನ್‌ನಿಂದ ಉತ್ತಮ ಮಳೆಯಾಗಿದೆ. ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದೆ. ಕೊಳವೆಬಾವಿ, ಕಾಲುವೆ ನೀರಿನಲ್ಲೂ ಏರಿಕೆಯಾಗಿದೆ. ಹಲವರು ಹನಿ ನೀರಾವರಿ ವ್ಯವಸ್ಥೆ ಮೂಲಕ ಹಿಪ್ಪುನೇರಳೆ ಬೆಳೆಯುತ್ತಿದ್ದು, ರೇಷ್ಮೆ ಇಲಾಖೆಯ ಒತ್ತಾಸೆಯಿಂದ ಹಿಪ್ಪುನೇರಳೆ ಗಿಡಗಳತ್ತ ಆಸಕ್ತಿ ಹೆಚ್ಚಾಗುತ್ತಿದೆ.

ಚಳಿಯ ಕಾರಣದಿಂದ 40 ದಿನಗಳಿಗೆ ಕಟಾವಿಗೆ ಬರಬೇಕಾದ ಸೊಪ್ಪು, 60 ದಿನಗಳಾದರೂ ಬರುತ್ತಿಲ್ಲ. ಶೀತ ಹೆಚ್ಚಾದ ಕಾರಣ ಎಲೆಗಳ ಮೇಲೆ ತೇವ ಆವರಿಸುತ್ತದೆ. ಇಂತಹ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ಹಾಕಿದರೂ ಸುಣ್ಣಕಟ್ಟು ರೋಗ ಬರುವ ಸಾಧ್ಯತೆ ಇರುವುದರಿಂದ ಸಾಕಣೆದಾರರು ರೇಷ್ಮೆ ಬೆಳೆಯಲು ಆತಂಕ ಪಡುವಂತಾಗಿದೆ.

‘ಅಂಬಳೆ, ಕೆಸ್ತೂರು, ಗೌಡಹಳ್ಳಿ ಸುತ್ತಮುತ್ತ ಸ್ವಂತ ಹಿಪ್ಪುನೇರಳೆ ತೋಟ ಮಾಡಿ, ರೇಷ್ಮೆಹುಳು ನಂಬಿದವರು ಇದ್ದಾರೆ. ಕುಟುಂಬಸ್ಥರು ವೈಜ್ಞಾನಿಕ ರೇಷ್ಮೆ ಹುಳು ಸಾಕಣಗೆ ಒಲವು ತೋರಿದ್ದಾರೆ. ಇಂತಹವರು ಗೂಡನ್ನು ಮಾರುಕಟ್ಟಗೆ ಸಾಗಣೆ ಮಾಡಿ, ಹುಳು ಸಾಕಣೆಯನ್ನು ಲಗಾಯ್ತಿನಿಂದ ಪೋಷಿಸಿಕೊಂಡು ಬರುತ್ತಿದ್ದಾರೆ’ ಎಂದು ಅಂಬಳೆ ನಂಜಪ್ಪ ಹೇಳಿದರು.

ಪರಿಹಾರ ನೀಡಲಿ:

‘ಹುಳುಗಳಿಗೆ ಹಾಕುವ ಹಿಪ್ಪುನೇರಳೆ ಸೊಪ್ಪಿನ ಕಡ್ಡಿ, ಹುಳಗಳ ಹಿಕ್ಕೆ ಹೊಲ, ಗದ್ದೆ, ತೋಟಗಳಿಗೆ ಉತ್ತಮ ಗೊಬ್ಬರವಾಗುತ್ತದೆ. ಹೆಚ್ಚುವರಿ ರಸಗೊಬ್ಬರ ನೀಡದೆ ಭೂಮಿ ಫಲವತ್ತನ್ನು ಹೆಚ್ಚಿಸಬಹುದು.ಆದರೆ, ಸೊಪ್ಪು ಖರೀದಿ ಮಾಡಿ ಹುಳು ಸಾಕಣೆ ಮಾಡುವವರ ಪರಿಸ್ಥಿತಿ ತುಂಬಾ ಕಷ್ಟ, ಸೊಪ್ಪು ಖರೀದಿ ಮಾಡಿ ಕಟಾವು ಮಾಡಿದ ಕೂಡಲೇ ತೋಟದ ಮಾಲೀಕರಿಗೆ ಹಣ ಕೊಡಬೇಕು. ಬೆಳೆ ಚೆನ್ನಾಗಿ ಬಂದು, ಮಾರುಕಟ್ಟೆಯಲ್ಲಿ ಗೂಡಿಗೆ ಉತ್ತಮ ಧಾರಣೆ ಸಿಕ್ಕರೆ ಲಾಭದ ಮುಖ ನೋಡಬಹುದು. ಭೂಮಿ ಇರುವವರಿಗೆ ಸರ್ಕಾರ ಸೌಲಭ್ಯ ನೀಡುತ್ತದೆ. ಆದರೆ, ಭೂಮಿ ಇಲ್ಲದೆ ರೇಷ್ಮೆ ಬೆಳೆಯುವವರ ಪರ ನಿಲ್ಲುವವರು ಯಾರು’ ಎಂದು ಹೊನ್ನೂರು ಪ್ರಗತಿಪರ ರೈತ ಪ್ರಕಾಶ್ ಪ್ರಶ್ನಿಸಿದರು.

‘ರೇಷ್ಮೆ ಹುಳುಗಳ ಆರೈಕೆ ಕೂಡ ತುಂಬಾ ಕಷ್ಟದ ಕೆಲಸ, ಮನೆಗಳಲ್ಲಿ ಉಷ್ಣಾಂಶ ಕಾಪಾಡುವುದು ದೊಡ್ಡ ಸವಾಲು. ಬೆಳೆ ಕೈಕೊಟ್ಟರೆ ರೈತರೇ ಹೊರೆ ಹೊರಬೇಕಿದೆ. ಹಾಗಾಗಿ, ಸಾಕಾಣಿಕೆ ಸಮಯದಲ್ಲಿ ಸರ್ಕಾರ ನಮಗೆ ಪರಿಹಾರ ಕೊಡಬೇಕು. ಸೊಪ್ಪು ಖರೀದಿ ಮಾಡಿ ಹುಳು ಸಾಕಾಣಿಕೆ ಮಾಡುವವರಿಗೆ ನಷ್ಟ ಪರಿಹಾರ ನೀಡಬೇಕು’ ಎಂದು ಅಂಬಳೆ ಶಿವಶಂಕರಮೂರ್ತಿ ಒತ್ತಾಯಿಸಿದರು.

‘ಸಹಾಯಧನ ಸೌಲಭ್ಯ ವಿಸ್ತರಣೆ’

‘ತಾಲ್ಲೂಕಿನಲ್ಲಿ ಹಿಪ್ಪುನೇರಳೆ ವಿಸ್ತೀರ್ಣ 10 ಹೆಕ್ಟೇರ್‌ಗೆ ಕುಸಿದಿದೆ. ತಿಂಗಳಿಗೆ 15 ರೇಷ್ಮೆಹುಳು ಸಾಕಣೆದಾರರು 750 ಮರಿಗಳನ್ನು ಚಾಕಿ ಮಾಡುತ್ತಿದ್ದಾರೆ. ರೇಷ್ಮೆ ಉತ್ಪಾದನೆ 600-700 ಕೆಜಿ ಇದೆ. ನರೇಗಾದಡಿ ಹಿಪ್ಪುನೇರಳೆ ಕಡ್ಡಿ ನಾಟಿ, ನರ್ಸರಿ, ಮರ ಪದ್ಧತಿಗೆ ಕೂಲಿ ವೆಚ್ಚ ಭರಿಸಲಾಗುತ್ತದೆ. ಜಿಲ್ಲಾ ಪಂಚಾಯಿತಿಯಲ್ಲೂ ಅನುದಾನ ಪಡೆಯಬಹುದು. ರೇಷ್ಮೆ ಕೃಷಿಕರು 1 ಎಕರೆ ಭೂಮಿ ಇದ್ದರೆ, 600 ಚದರ ಅಡಿ ಮನೆ ನಿರ್ಮಿಸಬಹುದು. ಸಾಮಾನ್ಯ ವರ್ಗದವರಿಗೆ ₹2.25 ಲಕ್ಷ ಹಾಗೂ ಎಸ್‌ಸಿ, ಎಸ್‌ಟಿಗಳಿಗೆ ₹2.70 ಲಕ್ಷ ಸಹಾಯಧನದ ನೆರವು ಸಿಗಲಿದೆ. 20 ಗುಂಟೆ ಇರುವವರಿಗೂ ಶೆಡ್ಡು ಇಲ್ಲವೇ ಮನೆ ಕಟ್ಟಿ ರೇಷ್ಮೆ ಬೆಳೆಯಬಹುದು. ಹನಿ ನೀರಾವರಿಗೂ ಸಹಾಯಧನ ಸೌಲಭ್ಯ ಸಿಗಲಿದೆ’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕಿ ಸರಿತಾಕುಮಾರಿ 'ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.