ADVERTISEMENT

ಏಕಕಾಲಕ್ಕೆ 2,200 ಲೈನ್‌ಮನ್‌ಗಳ ನೇಮಕಾತಿ: ಕೆ.ಜೆ. ಜಾರ್ಜ್‌

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 14:27 IST
Last Updated 19 ನವೆಂಬರ್ 2024, 14:27 IST
ಕೆ.ಜೆ.ಜಾರ್ಜ್‌, ಇಂಧನ ಸಚಿವ
ಕೆ.ಜೆ.ಜಾರ್ಜ್‌, ಇಂಧನ ಸಚಿವ   

ಚಾಮರಾಜನಗರ: ‘ರಾಜ್ಯದಾದ್ಯಂತ ಏಕಕಾಲದಲ್ಲಿ 2,200 ಲೈನ್‌ಮನ್‌ಗಳ ನೇಮಕಾತಿ ಪ್ರಕ್ರಿಯೆ ನಡೆಸಲು ಸರ್ಕಾರ ನಿರ್ಧರಿಸಿದ್ದು, ಸ್ಥಳೀಯರಿಗೆ ಹೆಚ್ಚು ಉದ್ಯೋಗ ದೊರೆಯಲಿದೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಹಿಂದೆ ಲೈನ್‌ಮನ್‌ಗಳ ನೇಮಕಾತಿ ಏಕಕಾಲದಲ್ಲಿ ನಡೆಯದೆ, ಒಂದು ಕಡೆ ಅರ್ಜಿ ಸಲ್ಲಿಸಿದವರು ಮತ್ತೊಂದು ಜಿಲ್ಲೆಗೂ ಅರ್ಜಿ ಹಾಕುತ್ತಿದ್ದರು. ಉದ್ಯೋಗ ಪಡೆದವರು ಕರ್ತವ್ಯಕ್ಕೆ ಗೈರಾಗುತ್ತಿದ್ದರು. ಮುಂದೆ, ಇಂತಹ ಸಮಸ್ಯೆಗಳು ತಲೆದೋರುವುದಿಲ್ಲ’ ಎಂದು ಸಚಿವರು ತಿಳಿಸಿದರು.

‘ಕೃಷಿ ಪಂಪ್‌ಸೆಟ್‌ನ ಆರ್‌ಆರ್‌ ನಂಬರ್‌ಗೆ ಆಧಾರ್ ಜೋಡಣೆ ಮಾಡಲು ರೈತರು ವಿರೋಧಿಸುವುದು ಸರಿಯಲ್ಲ. ಶೇ 98ರಷ್ಟು ಆಧಾರ್ ಜೋಡಣೆ ಮುಗಿದಿದ್ದು, ಪೂರ್ಣಗೊಂಡರೆ ವಿದ್ಯುತ್ ಬಳಕೆಯ ನಿಖರ ಲೆಕ್ಕ ಸಿಗಲಿದೆ. ರೈತರು ಭಯಪಡುವ ಅಗತ್ಯವಿಲ್ಲ. ಕೆಪಿಟಿಸಿಎಲ್‌ ಖಾಸಗೀಕರಣ ಪ್ರಸ್ತಾವ ಸರ್ಕಾರದ ಮುಂದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ವಿಜಯೇಂದ್ರ ಕೇಳಿ ಮುಖ್ಯಮಂತ್ರಿ ಮಾಡಿಲ್ಲ:

‘ವಿಧಾನಸಭಾ ಉಪ ಚುನಾವಣೆ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬುದು ಸುಳ್ಳು ಸುದ್ದಿ. ಬಿಜೆಪಿ ರಾಜ್ಯ ಘಟಕದ ಅದ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಕೇಳಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಮುಖ್ಯಮಂತ್ರಿ ಮಾಡಿಲ್ಲ. ಸಮರ್ಥವಾಗಿ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.