ಚಾಮರಾಜನಗರ: 2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿಸಲು ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು ಸೆ.2ರಿಂದ ರೈತರು ನೋಂದಣಿ ಮಾಡಿಕೊಳ್ಳಬಹುದು.
ಚಾಮರಾಜನಗರ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣ, ಗುಂಡ್ಲುಪೇಟೆ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣ, ತೆರಕಣಾಂಬಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣ ಹಾಗೂ ಹನೂರು ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು ರೈತರು ನೋಂದಣಿ ಮಾಡಿಕೊಳ್ಳಬೇಕಿದೆ.
ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿಸಲು ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್‌ಗೆ ₹ 7,280 ದರ ನಿಗದಿ ಮಾಡಿದೆ. ಬೆಂಗಳೂರಿನ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತ ಸಂಸ್ಥೆಯ ವತಿಯಿಂದ ಖರೀದಿ ಮಾಡಲಾಗುವುದು.
ನೋಂದಣಿ ಪ್ರಕ್ರಿಯೆಗೆ ರೈತರು ಪಹಣಿ (ಆರ್,ಟಿ.ಸಿ.), ಆಧಾರ್ ಸಂಖ್ಯೆ, ಬ್ಯಾಂಕ್ ಪುಸ್ತಕದ ಜೆರಾಕ್ಸ್ (ಆಧಾರ್ ಜೋಡಣೆ ಕಡ್ಡಾಯ), ಪ್ರೂಟ್ಸ್ ತಂತ್ರಾಂಶದ ರೈತರ ನೋಂದಣಿ ಸಂಖ್ಯೆ (ಎಫ್.ಐ.ಡಿ.)ಯನ್ನು ಕಡ್ಡಾಯವಾಗಿ ತರಬೇಕು. ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ, ತಾಲ್ಲೂಕಿನ ಕೃಷಿ ಇಲಾಖೆಯಿಂದ ಫ್ರೂಟ್ಸ್ ತಂತ್ರಾಂಶದಿಂದ ರೈತರ ನೋಂದಣಿ ಸಂಖ್ಯೆಯನ್ನು ಪಡೆಯಬೇಕು.
ಸೂರ್ಯಕಾಂತಿ ಬೆಳೆದು ಬೆಳೆ ಸಮೀಕ್ಷೆಯಲ್ಲಿ ಸೂರ್ಯಕಾಂತಿ ಬೆಳೆ ಎಂದು ಆರ್.ಟಿ.ಸಿಯಲ್ಲಿ ನಮೂದಾಗಿರುವ ರೈತರು ಮಾತ್ರ ಯೋಜನೆಗೆ ಅರ್ಹರಾಗಿರುತ್ತಾರೆ. ಪ್ರತಿ ಎಕರೆಗೆ 3 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಸೂರ್ಯಕಾಂತಿ ಖರೀದಿಸಲಾಗುವುದು.
ರೈತರ ಹೆಸರಿನ ಆಧಾರ್ ಸಂಖ್ಯೆಗೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಡಿ.ಬಿ.ಟಿ ಮುಖಾಂತರ ಹಣ ಪಾವತಿಸಲಾಗುವುದು. ಸೆ.2 ರಿಂದ ನೋಂದಣಿ ಪ್ರಾರಂಭಗೊಳ್ಳಲಿದ್ದು ಜಿಲ್ಲೆಯ ಸೂರ್ಯಕಾಂತಿ ಬೆಳೆದಿರುವ ರೈತರು ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸುವ ಮೂಲಕ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ, ಕೃಷಿ ಮಾರಾಟ ಇಲಾಖೆ, ಸಹಕಾರ ಇಲಾಖೆ ಹಾಗೂ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ನಿಯಮಿತವನ್ನು ಸಂಪರ್ಕಿಸಬಹುದಾಗಿದೆ.
ದೂರವಾಣಿ: ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆ: 8277930760, ಸಹಾಯಕ ನಿರ್ದೇಶಕರು ಕೃಷಿ ಮಾರಾಟ ಇಲಾಖೆ 9916643000, ಕಾರ್ಯದರ್ಶಿ ಎಪಿಎಂಸಿ ಗುಂಡ್ಲುಪೇಟೆ 9844211885, ಕಾರ್ಯದರ್ಶಿ ಎಪಿಎಂಸಿ ಹನೂರು 9686707090, ಸಹಾಯಕ ವ್ಯವಸ್ಥಾಪಕ ಕೆ.ಒ.ಎಫ್ 8073093473 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.