ADVERTISEMENT

ಚಾಮರಾಜನಗರ | ಜೂ. 3ರಂದು ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ನಿಷೇಧಾಜ್ಞೆ

​ಪ್ರಜಾವಾಣಿ ವಾರ್ತೆ
Published 19 ಮೇ 2024, 14:32 IST
Last Updated 19 ಮೇ 2024, 14:32 IST

ಚಾಮರಾಜನಗರ: ಕರ್ನಾಟಕ ವಿಧಾನ ಪರಿಷತ್ತಿಗೆ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನವು ಜೂನ್ 3ರಂದು ನಡೆಯಲಿರುವುದರಿಂದ ಮತದಾನ ಕೇಂದ್ರದಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜೂನ್ 2ರ ಮಧ್ಯರಾತ್ರಿ 12 ಗಂಟೆಯಿಂದ ಜೂನ್ 3ರ ಮಧ್ಯರಾತ್ರಿ 12 ಗಂಟೆಯವರೆಗೆ ಮತಗಟ್ಟೆಗಳ ಸುತ್ತಲ 100 ಮೀ ಅಂತರದೊಳಗೆ ಕೆಲ ಷರತ್ತುಗಳನ್ನು ವಿಧಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ನಿಷೇಧಾಜ್ಞೆ ಹೊರಡಿಸಿ ಆದೇಶಿಸಿದ್ದಾರೆ.

ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಆಡಳಿತ ಸೌಧ ಕೊಠಡಿ ಸಂಖ್ಯೆ 17, ಚಾಮರಾಜನಗರ ಪಟ್ಟಣದ ತಾಲೂಕು ಆಡಳಿತ ಸೌಧ ನೆಲಮಹಡಿ, ಮೀಟಿಂಗ್ ಹಾಲ್, ಯಳಂದೂರು ಪಟ್ಟಣದ ತಾಲ್ಲೂಕು ಆಡಳಿತ ಸೌಧ, ನೆಲಮಹಡಿ ಕೊಠಡಿ ಸಂಖ್ಯೆ 1, ಮೀಟಿಂಗ್ ಹಾಲ್, ಕೊಳ್ಳೇಗಾಲ ಪಟ್ಟಣದ ತಾಲ್ಲೂಕು ಆಡಳಿತ ಸೌಧ, ನೆಲಮಹಡಿಯ ಕೇಸ್ವಾನ್ ಕೊಠಡಿ ಸಂಖ್ಯೆ 2, ಹನೂರಿನ ಪಶು ವೈದ್ಯಕೀಯ ಆಸ್ಪತ್ರೆ ಸಭಾಂಗಣ ಮತಗಟ್ಟೆ ಕೇಂದ್ರಗಳಾಗಿವೆ.

  • ಮತಗಟ್ಟೆಗಳ ಸುತ್ತ 100 ಮೀ ಅಂತರದೊಳಗೆ ಮೆರವಣಿಗೆ ಅಥವಾ 5 ಜನರಿಗಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಲಾಗಿದೆ.

    ADVERTISEMENT
  • ಯಾವುದೇ ರೀತಿಯ ಮಾರಕಾಸ್ತ್ರ, ಶಸ್ತ್ರಾಸ್ತ್ರ, ಸ್ಪೋಟಕ ವಸ್ತುಗಳನ್ನು ಒಯ್ಯವಂತಿಲ್ಲ.

  • ಪ್ರತಿಕೃತಿ ಪ್ರದರ್ಶನ, ದಹನ ಮಾಡುವುದು ಮತ್ತು ಬಹಿರಂಗ ಘೋಷಣೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ.

  • ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಡುವುದು, ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ, ಸಾರ್ವಜನಿಕರ ಗಾಂಭೀರ್ಯ, ನೈತಿಕತೆಗೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.

  • ಮತಗಟ್ಟೆಯ 100 ಮೀ ಅಂತರದೊಳಗಿರುವ ಪ್ರದೇಶದಲ್ಲಿ ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಪ್ರಚಾರ ನಡೆಸದಂತೆ, ಯಾವುದೇ ಉಮೇದುವಾರರಿಗೆ, ಅಭ್ಯರ್ಥಿಗೆ ಮತ ನೀಡುವಂತೆ ಕೇಳುವುದು, ಅಭ್ಯರ್ಥಿಗೆ ಮತ ಹಾಕದಂತೆ ಹಾಗೂ ಚುನಾವಣೆಗೆ ಮತ ಚಲಾಯಿಸದಂತೆ ಪ್ರೇರೇಪಿಸುವುದು ಮತ್ತು ಯಾವುದೇ ಪಕ್ಷದ ಚೆಹ್ನೆಯನ್ನು ಪ್ರದರ್ಶಿಸುವುದು ಇತ್ಯಾದಿಗಳನ್ನು ನಿರ್ಬಂಧಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.