ADVERTISEMENT

ಯಳಂದೂರು: ಅಳಿವಿನಂಚಿನ ಉರಗ ಪ್ರಭೇದ ಉಳಿಯಲಿ...

'ಹಾವು ನಾವು" ಕಾರ್ಯಕ್ರಮದಲ್ಲಿ ಉರಗ ತಜ್ಞ ಸ್ನೇಕ್ ಮಹೇಶ್ ಅಭಿಮತ

ಎನ್.ಮಂಜುನಾಥಸ್ವಾಮಿ
Published 17 ಜುಲೈ 2024, 4:49 IST
Last Updated 17 ಜುಲೈ 2024, 4:49 IST
ಯಳಂದೂರು ತಾಲ್ಲೂಕಿನಲ್ಲಿ ಪೊಟರೆಯಲ್ಲಿ ವಿಶೇಷವಾಗಿ ಕಂಡುಬರುವ  ವಿಷ ರಹಿತ ಬೆಕ್ಕು ಕಣ್ಣಿನ ಹಾವು.
ಯಳಂದೂರು ತಾಲ್ಲೂಕಿನಲ್ಲಿ ಪೊಟರೆಯಲ್ಲಿ ವಿಶೇಷವಾಗಿ ಕಂಡುಬರುವ  ವಿಷ ರಹಿತ ಬೆಕ್ಕು ಕಣ್ಣಿನ ಹಾವು.   

ಯಳಂದೂರು: ಹಾವು ಎಂದರೆ ಬೆಚ್ಚಿ ಬೀಳುವವರೇ ಎಲ್ಲ. ಆದರೆ. ಹಾವುಗಳು ಕಾಡು ಮತ್ತು ನಾಡಿನ ಪರಿಸರದ ಜೀವಜಾಲದ ಬಹು ಮುಖ್ಯ ಭಾಗ ಎಂಬ ಸತ್ಯ ಬಹಳಷ್ಟು ಮಂದಿಗೆ ತಿಳಿದಿಲ್ಲ. ಹಾವುಗಳ ಬಗ್ಗೆ ಅರಿವು ಮೂಡಿದರೆ ನಿರುಪದ್ರವಿ ಹಾಗೂ ಉಪಕಾರಿ ಉರಗಗಳ ರಕ್ಷಣೆ ಸಾಧ್ಯವಿದೆ, ಅಪರೂಪದ ವಿಶಿಷ್ಟ ಪ್ರಭೇದದ ಹಾವುಗಳ ಜೀವ ರಕ್ಷಿಸಿ, ಅಳಿನಂಚಿನ ಉರಗ ಕುಲ ಉಳಿಸಬಹುದು ಎನ್ನುತ್ತಾರೆ ಉರಗತಜ್ಞ ಮಹೇಶ್‌.

'ಹಾವು ನಾವು" ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಹಂಚಿಕೊಂಡ ಅವರು, ತಾಲ್ಲೂಕಿನಲ್ಲಿ 25ಕ್ಕೂ ಹೆಚ್ಚಿನ ಜಾತಿಯ ಹಾವುಗಳು ಕಾಣಸಿಕಿದ್ದು ಬಣ್ಣ, ಆಕಾರ, ತೂಕ, ಉದ್ದ ಮತ್ತು ವೈವಿಧ್ಯತೆಯಲ್ಲಿ ವಿಭಿನ್ನವಾಗಿವೆ. ಸುಮಾರು 175 ದಶಲಕ್ಷ ವರ್ಷಗಳಿಂದ ಇವುಗಳು ಭೂಮಿ ಮೇಲೆ ಜೀವಿಸುತ್ತಿವೆ.

ಕಿತ್ತಲೆ, ಹಸಿರು, ಕಪ್ಪು, ಬಿಳಿ ಹಾಗೂ ಹಳದಿ ವರ್ಣಗಳ ಸಂಯೋಜನೆಯಿಂದ ಆಕರ್ಷಿಸುವ ಉರಗಗಳು ಇಲ್ಲಿನ ಪ್ರಾಕೃತಿಕ ಚೆಲುವಿನ ಭಾಗವಾಗಿದೆ. ಕಾನನದಂಚಿನ ಸುತ್ತಮುತ್ತ ಹೆಬ್ಬಾವುಗಳು ಹೆಚ್ಚಾಗಿ ದರ್ಶನ ಕೊಟ್ಟರೆ, ಗ್ರಾಮೀಣ ಭಾಗಗಳಲ್ಲಿ ನಾಗರಹಾವುಗಳು ಕಂಡುಬರುತ್ತವೆ. ವಿಷರಹಿತ ಹಸಿರು ಹಾವು, ಪಟ್ಟೆ ಕುಕ್ರಿ, ತೋಳಹಾವು ಸಂಕುಲಗಳನ್ನು ಕಾಣಬಹುದು ಎನ್ನುತ್ತಾರೆ ಅವರು.

ADVERTISEMENT

ಈಚೆಗೆ ಹೊಲ, ಗದ್ದೆಗಳಲ್ಲಿ ಕೀಟ ಮತ್ತು ಕಳೆ ನಾಶಕ ಸಿಂಪರಣೆ ಹೆಚ್ಚಾಗುತ್ತಿದ್ದು ಹಾವುಗಳ ಜೀವಕ್ಕೆ ಕಂಟಕವಾಗಿದೆ. ಹಾವುಗಳ ವಿಷ ಸಂಗ್ರಹ ಹಾಗೂ ಅವುಗಳ ಆವಾಸಸ್ಥಾನ ನಾಶ, ಹವಾಮಾನ ಬದಲಾವಣೆ, ಹಾವುಗಳ ಚರ್ಮ ಸುಲಿಯುವಂತಹ ಕೃತ್ಯಗಳಿಂದ ಸರ್ಪ ಸಂಕುಲ ಅಳಿವಿನಂಚಿನಲ್ಲಿದೆ ಎನ್ನುತ್ತಾರೆ ಅವರು.

ಗ್ರಾಮೀಣ ಪ್ರದೇಶಗಳಲ್ಲಿ ಹಾವುಗಳಿಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವ ಇದೆ. ದೇವಾಲಯಗಳಲ್ಲಿ ನಾಗನ ಮೂರ್ತಿ ನಿರ್ಮಿಸಿ ಪೂಜೆ ಪುನಸ್ಕಾರಗಳು ನಡೆದರೂ ಕೆಲವು ಮೌಢ್ಯಗಳು ಅವುಗಳ ಜೀವಕ್ಕೆ ಸಂಚಕಾರ ತರುತ್ತಿವೆ.

ಭಕ್ತರು ಹುತ್ತಕ್ಕೆ ಹಾಲು ಸುರಿದು ಭಕ್ತಿ ಮೆರೆಯುವಂತಹ ನಂಬಿಕೆಗಳೇ ಸರ್ಪಗಳ ಜೀವಕ್ಕೆ ಎರವಾಗುತ್ತಿದೆ. ಶೀತ ರಕ್ತ ಪ್ರಾಣಿಗಳಾದ ಹಾವುಗಳು ಹಾಲು ಮತ್ತು ಹಣ್ಣು ಸೇವಿಸುವುದಿಲ್ಲ. ಹಾಗಾಗಿ, ಅನಗತ್ಯವಾಗಿ ಉರಗಗಳ ಹಾದಿಯಲ್ಲಿ ಕುಂಕುಮ, ಅರಿಶಿನ  ಸುರಿಯಬಾರದು ಎನ್ನುತ್ತಾರೆ ಉರಗ ತಜ್ಞರು ಅವರು.

ಹಾವು ಉಳಿಸಲು ಸರಳ ಮಾರ್ಗ

ಹಾವುಗಳು ನಿರುಪದ್ರವಿಗಳಾಗಿದ್ದು ಕೆಲವು ಮೊಟ್ಟೆ ಇಟ್ಟರೆ ಕೆಲವು ಮರಿಗಳಿಗೆ ಜನ್ಮ ನೀಡುತ್ತವೆ. ಮಾನವ ಅಥವಾ ಪ್ರಾಣಿಗಳಿಂದ ತೊಂದರೆಯಾದಾಗ ಮಾತ್ರ ಪ್ರತಿದಾಳಿಗೆ ಮುಂದಾಗುತ್ತವೆ. ಜನಸಾಮಾನ್ಯರು ಹಾವನ್ನು ಕಂಡರೆ ಕೊಲ್ಲಬಾರದು, ಹಿಡಿಯುವ ಪ್ರಯತ್ನವೂ ಅಪಾಯಕಾರಿಯಾಗಿದ್ದು ಮಾಡಬಾರದು.

ಉರಗ ತಜ್ಞರಿಗೆ ಮಾಹಿತಿ ನೀಡಿದರೆ ರಕ್ಷಿಸಿ ಸುರಕ್ಷಿತ ನೆಲೆಗೆ ಬಿಡುತ್ತಾರೆ. ಹಾವು ಕಚ್ಚಿದರೆ ಭಯ ಬೇಡ; ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಕಚ್ಚಿದ ಹಾವಿನ ಲಕ್ಷಣ ತಿಳಿಸಿದರೆ ವೈದ್ಯರಿಗೆ ಶುಶ್ರೂಷೆಯೂ ಸುಲಭವಾಗುತ್ತದೆ ಎನ್ನುತ್ತಾರೆ ಉರಗ ತಜ್ಞ ಸಂತೇಮರಹಳ್ಳಿ ಸ್ನೇಕ್ ಮಹೇಶ್.

ಉರಗತಜ್ಞ ಸಂತೇಮರಹಳ್ಳಿ ಸ್ನೇಕ್ ಮಹೇಶ್ ಹೆಬ್ಬಾವನ್ನು ಸಂರಕ್ಷಿಸಿರುವುದು

ಇಂದು ವಿಶ್ವ ಹಾವು ದಿನ

ಪ್ರಪಂಚದಾದ್ಯಂತ ಜುಲೈ 16 ರಂದು ಉರಗ ದಿನ ಆಚರಿಸಲಾಗುತ್ತದೆ. ವಿಶ್ವದಲ್ಲಿ 3500ಕ್ಕೂ ಹೆಚ್ಚಿನ ಜಾತಿಯ ಹಾವುಗಳು ಇವೆ ಎನ್ನಲಾಗಿದೆ. ಭಾರತದಲ್ಲಿ 4 ಮಾತ್ರ ವಿಷಕಾರಿ ಹಾವುಗಳಿದ್ದು ಉಳಿದ ಜಾತಿಯ ಹಾವುಗಳು ಪರಿಸರ ಸ್ನೇಹಿ. ರೈತರಿಗೆ ಕಂಠಕವಾದ ಇಲಿ ಹೆಗ್ಗಣಗಳನ್ನು ಭಕ್ಷಿಸಿ ಆಹಾರ ಉತ್ಪಾದನೆ ಸಹಾಯ ಮಾಡುತ್ತವೆ. ಅಂಟಾರ್ಟಿಕ ಹೊರತು ಪಡಿಸಿ ಎಲ್ಲ ಹವಾಮಾನದಲ್ಲೂ ಹಾವುಗಳು ಬದುಕಿ ಉಳಿಯುವ ಸಾಮರ್ಥ್ಯ ಹೊಂದಿವೆ ಎನ್ನುತ್ತಾರೆ ಉರಗತಜ್ಞ ಮಹೇಶ್.     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.