ADVERTISEMENT

ಚಾಮರಾಜನಗರ | ಉದ್ಯಾನಗಳ ಅಧ್ವಾನ: ನೆಮ್ಮದಿ ಹರಣ

ಬೆರಳೆಣಿಕೆ ಉದ್ಯಾನಗಳ ನಿರ್ವಹಣೆ ಕೊರತೆ: ಮೂಲಸೌಕರ್ಯ ಇಲ್ಲದೆ ಸೊರಗಿದ ಪಾರ್ಕ್‌ಗಳು

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 6:20 IST
Last Updated 8 ಜುಲೈ 2024, 6:20 IST
ಚಾಮರಾಜನಗರದಲ್ಲಿರುವ ಅಂಬೇಡ್ಕರ್ ಉದ್ಯಾನದಲ್ಲಿರುವ ಪ್ರವೇಶದ್ವಾರ ಹಾಳಾಗಿರುವುದು      ಪ್ರಜಾವಾಣಿ ಚಿತ್ರ: ವೆಂಕಟರಾಮ್
ಚಾಮರಾಜನಗರದಲ್ಲಿರುವ ಅಂಬೇಡ್ಕರ್ ಉದ್ಯಾನದಲ್ಲಿರುವ ಪ್ರವೇಶದ್ವಾರ ಹಾಳಾಗಿರುವುದು      ಪ್ರಜಾವಾಣಿ ಚಿತ್ರ: ವೆಂಕಟರಾಮ್   

ಚಾಮರಾಜನಗರ: ದೈನಂದಿನ ಕಾರ್ಯದೊತ್ತಡ, ಜೀವನದ ಜಂಜಾಟಗಳ ಮಧ್ಯೆ ನೆಮ್ಮದಿ ಅರಸಿ ಉದ್ಯಾನಗಳತ್ತ ಮುಖಮಾಡುವ ಸಾರ್ವಜನಿಕರಿಗೆ ಅಲ್ಲಿಯೂ ನೆಮ್ಮದಿ ಸಿಗದಂತಹ ವಾತಾವರಣ ಜಿಲ್ಲೆಯ ಉದ್ಯಾನಗಳಲ್ಲಿದೆ. ದಣಿದ ಮನಸ್ಸುಗಳನ್ನು ಉಲ್ಲಸಿತಗೊಳಿಸಬೇಕಾಗಿದ್ದ ಉದ್ಯಾನಗಳು ಬೇಸರ ಮೂಡಿಸುವಂತಿವೆ.

ಜಿಲ್ಲಾ ಕೇಂದ್ರವಾಗಿರುವ ಚಾಮರಾಜನಗರದಲ್ಲಿ ನಗರಸಭೆಯ ದಾಖಲೆಗಳ ಪ್ರಕಾರ 22 ಉದ್ಯಾನಗಳು ಅಸ್ತಿತ್ವದಲ್ಲಿವೆ. ಇವುಗಳ ನಿರ್ವಹಣೆಗೆ ಕಾಲಕಾಲಕ್ಕೆ ಹಣವೂ ಖರ್ಚಾಗುತ್ತಿದೆ. ವಾಸ್ತವವಾಗಿ ಉದ್ಯಾನಗಳು ಇವೆಯೇ ಎಂದು ಹುಡುಕಲು ಹೊರಟರೆ ಕಾಣಸಿಗುವುದು ಬೆರಳೆಣಿಕೆಯ ಉದ್ಯಾನಗಳು ಮಾತ್ರ.

ಖಾಸಗಿ ಬಡಾವಣೆಗಳನ್ನು ನಿರ್ಮಾಣ ಮಾಡುವಾಗ ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನು ‘ಉದ್ಯಾನ’ ಎಂದೇ ಪರಿಗಣಿಸಿರುವುದು ಈ ಗೊಂದಲಗಳಿಗೆ ಕಾರಣ. ನಗರಸಭೆಯ ಕಡತಗಳಲ್ಲಿ ‘ಉದ್ಯಾನ’ಗಳು ಇದ್ದರೂ ಬಹುತೇಕ ಕಡೆಗಳಲ್ಲಿ ಖಾಲಿ ನಿವೇಶನಗಳೇ ‘ಉದ್ಯಾನ’ ಗಳಾಗಿವೆ. ಗಿಡಗಂಟಿಗಳು ಬೆಳೆದು ನಿಂತಿದ್ದು ನಿರ್ವಹಣೆ ಇಲ್ಲದೆ ಸೊರಗಿವೆ.

ADVERTISEMENT

ಅಂಬೇಡ್ಕರ್ ಉದ್ಯಾನಕ್ಕೆ ಬೇಕು ಕಾಯಕಲ್ಪ: ಚಾಮರಾಜನಗರದ ಹಳೆಯ ಹೌಸಿಂಗ್ ಬೋರ್ಡ್ ಕಾಲೋನಿ ಸಮೀಪದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯನ ಸೌಲಭ್ಯಗಳ ಕೊರತೆಯಿಂದ ನರಳುತ್ತಿದೆ. ಉದ್ಯಾನಕ್ಕೆ ಅಗತ್ಯವಾಗಿ ಬೇಕಿದ್ದ ಶೌಚಾಲಯ ವ್ಯವಸ್ಥೆಯೇ ಇಲಿಲ್ಲ. ಉದ್ಯಾನಕ್ಕೆ ಬರುವವರಿಗೆ ಪ್ರಕೃತಿ ಕರೆ ಬಂದರೆ ನೇರವಾಗಿ ಮನೆಗೆ ಹೋಗಬೇಕು.

ದಾಹ ನೀಗಿಸಿಕೊಳ್ಳಲು ಉದ್ಯಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಉದ್ಯಾನದಲ್ಲಿರುವ ಮಕ್ಕಳ ಆಟಿಕೆಗಳು ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ಜಾರುಬಂಡೆಗಳು ಮುರಿದಿವೆ. ಕಬ್ಬಿಣದ ಆಟಿಕೆಗಳು ತುಕ್ಕು ಹಿಡಿದು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಸುಸ್ಥಿತಿಯಲ್ಲಿರುವ ಬೆರಳೆಣಿಕೆ ಆಟಿಕೆಗಳಲ್ಲಿ ಆಟವಾಡಲು ಮಕ್ಕಳ ಸಂಖ್ಯೆ ದೊಡ್ಡದಾಗಿದೆ.

ಉದ್ಯಾನದೊಳಗೆ ಕೂರಲು ಹಾಕಲಾಗಿರುವ ಆಸನಗಳು ಅಲ್ಲಲ್ಲಿ ಒಡೆದು ಹೋಗಿವೆ. ಗಿಡಗಳು ನಿರ್ವಹಣೆ ಇಲ್ಲದೆ ಸೊರಗಿವೆ. ಪ್ಲಾಸ್ಟಿಕ್ ಕವರ್‌ಗಳ ಕಸದ ರಾಶಿ ಬಿದ್ದಿದೆ. ಉದ್ಯಾನಕ್ಕೆ ಅಳವಡಿಸಿರುವ ಸೋಲಾರ್ ದೀಪಗಳು ಕೆಟ್ಟುನಿಂತಿವೆ. ಸುತ್ತಮುತ್ತಲಿರುವ ಹಲವು ಬಡಾವಣೆಗಳಿಗೆ ಇರುವ ಒಂದೇ ಉದ್ಯಾನದಲ್ಲಿ ವಿಪರೀತ ದಟ್ಟಣೆ ಇದೆ.  ನಗರಸಭೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಸಾರ್ವಜನಿಕ ಆಗ್ರಹ

ಚಾಮರಾಜೇಶ್ವರ ದೇವಸ್ಥಾನ ಬಳಿಯ ಉದ್ಯಾನವೂ ಅವ್ಯವಸ್ಥೆಯ ಆಗರವಾಗಿದೆ. ಇಲ್ಲೂ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಉದ್ಯಾನದೊಳಗೆ ಕಸದ ರಾಶಿ ಬಿದ್ದಿದೆ. ಚಹಾ‌ ಕುಡಿದು ಬಿಸಾಡಿರುವ ಕಪ್‌ಗಳು ಎಲ್ಲೆಡೆ ಬಿದ್ದಿವೆ. ಕೂಗಳತೆ ದೂರದಲ್ಲಿ ನಗರಸಭೆ ಇದ್ದರೂ ನಿರ್ವಹಣೆ ಸಮರ್ಪಕವಾಗಿ ನಡೆಯದಿರುವ ಬಗ್ಗೆ ಸಾರ್ವಜನಿಕರು ದೂರುತ್ತಾರೆ. ಉದ್ಯಾನದಲ್ಲಿರುವ ಆಟಿಕೆಗಳನ್ನು ಮಕ್ಕಳಿಗಿಂತ ವಯಸ್ಕರೇ ಹೆಚ್ಚು ಬಳಸುವುದು ಕಂಡುಬರುತ್ತದೆ.

ಗುಂಡ್ಲುಪೇಟೆ ಸ್ಥಿತಿ:

ಗುಂಡ್ಲುಪೇಟೆ ಪಟ್ಟಣದಲ್ಲಿ ಪುರಸಭೆ ವ್ಯಾಪ್ತಿಗೆ 23 ಉದ್ಯಾನಗಳಿದ್ದರೂ ಹೆಚ್ಚಿನವು ಪರಿಸರ ಸ್ನೇಹಿಯಾಗಿಲ್ಲ. ನಿರ್ವಹಣೆ ಕೊರತೆಯಿಂದ ಜನರು ಉದ್ಯಾನಗಳಿಂದಲೇ ದೂರ ಉಳಿದಿದ್ದಾರೆ. ಪಟ್ಟಣದ ಹೃದಯ ಭಾಗದಲ್ಲಿರುವ ಜವಾಹರ್‌ಲಾಲ್ ನೆಹರೂ ಪಾರ್ಕ್ ತಕ್ಕ ಮಟ್ಟಿಗೆ ನಿರ್ವಹಣೆಯಿಂದ ಕೂಡಿದೆ. ಆದರ,ಎ ಉದ್ಯಾನ ಸಣ್ಣದಾಗಿದ್ದು ಸಾರ್ವಜನಿಕರಿಗೆ ಪ್ರವೇಶ ಇಲ್ಲದೆ ಸದಾ ಕಾಲ ಗೇಟಿಗೆ ಬೀಗ ಹಾಕಲಾಗಿರುತ್ತದೆ.

14ನೇ ವಾರ್ಡಿನ ಉದಯ ರವಿ ಉದ್ಯಾನಕ್ಕೆ ಹೆಚ್ಚನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಮಕ್ಕಳು ಬರುತ್ತಾರೆ. ಉಳಿದಂತೆ ಎಲ್ಲ ಉದ್ಯಾನಗಳು ನಿರ್ವಹಣೆ ಕೊರತೆ ಕಾಣುತ್ತಿದ್ದು ಪುರಸಭೆ ಅಧಿಕಾರಿಗಳು ಅನುದಾನ ಕೊರತೆ ಕಾರಣ ನೀಡುತ್ತಾರೆ.

ಉದ್ಯಾನವನ ನಿರ್ವಹಣೆ ಅನುದಾನಕ್ಕಾಗಿ ಶಾಸಕರು ಹಾಗೂ ಸಚಿವರಿಗೆ ಮನವಿ ಮಾಡಲಾಗಿದೆ.  ಹೊಸದಾಗಿ ನಿರ್ಮಾಣವಾಗಿರುವ ಖಾಸಗಿ ಬಡಾವಣೆಗಳಲ್ಲಿ ಉದ್ಯಾನಗಳು ಉತ್ತಮ ಸ್ಥಿತಿಯಲ್ಲಿವೆ. ಪಟ್ಟಣದ ಉಳಿದ ಉದ್ಯಾನಗಳನ್ನು ಶೀಘ್ರ ನಿರ್ವಹಣೆ ಮಾಡುತ್ತೇವೆ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ.

ಕೊಳ್ಳೇಗಾಲದಲ್ಲಿ ನಿರ್ವಹಣೆ ಕೊರತೆ:

ಕೊಳ್ಳೇಗಾಲ ನಗರಸಭಾ ವ್ಯಾಪ್ತಿಯಲ್ಲಿ ಮಕ್ಕಳ ಪಾರ್ಕ್ ಹಾಗೂ ಪೀಸ್ ಪಾರ್ಕ್ ಎಂಬ ಎರಡು ಉದ್ಯಾನಗಳಿದ್ದು ಪಾದಾಚಾರಿ ಮಾರ್ಗಗಳು ಉತ್ತಮವಾಗಿದೆ. ಆದರೆ, ಎರಡೂ ಉದ್ಯಾನಗಳಲ್ಲಿ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ‌. ಕಸಕಡ್ಡಿಗಳು ಹರಡಿಕೊಂಡಿವೆ.

ವೃಕ್ಷವನ ಮರಡಿಗುಡ್ಡ:

ವೃಕ್ಷ ವನ ಅರಣ್ಯ ಇಲಾಖೆಗೆ ಸೇರಿದ ಜಾಗವಾಗಿದ್ದು ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಅರಣ್ಯ ಇಲಾಖೆ ಉದ್ಯಾನ ಪ್ರವೇಶಕ್ಕೆ ಪ್ರವೇಶ ಶುಲ್ಕ ನಿಗದಿಮಾಡಿದ್ದರೂ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಳಿತುಕೊಳ್ಳಲು ಜಾಗ ಇದ್ದರೂ ಸರಿಯಾಗಿಲ್ಲ. ಮಕ್ಕಳು ಆಟವಾಡುವ ವಸ್ತುಗಳು ಹಾಳಾಗಿವೆ. ಜಾರು ಬಂಡೆ, ಉಯ್ಯಾಲೆ ಇನ್ನಿತರ ಸಾಮಗ್ರಿಗಳು ಮುರಿದಿವೆ.

ಜಿಮ್ ಪರಿಕರಗಳು ತುಕ್ಕು ಹಿಡಿದಿದ್ದು ವಾಯುವಿಹಾರಿಗಳಿಗೆ ತೊಂದರೆಯಾಗಿದೆ. ಅರಣ್ಯ ಇಲಾಖೆ ಉದ್ಯಾನ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸುತ್ತಾರೆ ವಾಯುವಿಹಾರಿ ಪವನ್.

ನಿರ್ವಹಣೆ ಇಲ್ಲದೆ ಸೊರಗಿದ ಉದ್ಯಾನ

ಯಳಂದೂರು: ತಾಲ್ಲೂಕು ಕಚೇರಿ ಮುಂಭಾಗ ನಿರ್ಮಿಸಿದ್ದ ಉದ್ಯಾನ ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೆ ಸೊರಗಿದೆ. ರಜಾ ದಿನಗಳಲ್ಲಿ ಜಾನುವಾರುಗಳು ಸಂಚರಿಸುತ್ತಿದ್ದು ಸಾರ್ವಜನಿಕರ ಬಳಕೆಗೆ ಇಲ್ಲದಂತಾಗಿದೆ. ಪಟ್ಟಣದ ಜಾಗೀರ್ಕಾರ್ ಮುಂಭಾಗ ನಿರ್ಮಿಸಲು ಯೋಜನೆ ರೂಪಿಸಿದ್ದ ಉದ್ಯಾನ ಗಗನಕುಸುಮವಾಗಿದೆ. ಜನರು ಸಂಜೆ ಮತ್ತು ಮುಂಜಾನೆ ಉದ್ಯಾನ ಇಲ್ಲದ ಕಾರಣ ರಸ್ತೆಯಲ್ಲಿ ವಾಯುವಿಹಾರ ಮಾಡಬೇಕಾಗಿದೆ.

ಚಾಮರಾಜನಗರದ ಪ್ರಮುಖ ಉದ್ಯಾನಗಳು

  • ಚಾಮರಾಜನಗರ ದೇವಸ್ಥಾನದ ಉದ್ಯಾನ

  • ಪುಟ್ಟಮ್ಮಣ್ಣಿ ಪಾರ್ಕ್‌

  • ಹೌಸಿಂಗ್ ಬೋರ್ಡ್ ಅಂಬೇಡ್ಕರ್ ಉದ್ಯಾನ

‘ಕೂಡಲೇ ದುರಸ್ತಿಗೊಳಿಸಿ’

ವೃಕ್ಷವನವನ್ನು ಸಾರ್ವಜನಿಕರ ಬಳಕೆಗೆ ಯೋಗ್ಯವಾಗುವಂತೆ ದುರಸ್ತಿಗೊಳಿಸಬೇಕು. ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಜಿಮ್ ಪರಿಕಗಳನ್ನು ಹಾಕಲಾಗಿದ್ದು ತುಕ್ಕು ಹಿಡಿಯುತ್ತಿವೆ. ಕೂಡಲೇ ದುರಸ್ತಿಗೊಳಿಸಿ ಜನರ ಬಳಕೆಗೆ ಕೊಡಬೇಕು. –ಜಯ ಶಂಕರ್ ವಾಯು ವಿಹಾರಿ

‘ಸರಿಯಾದ ಪಥವಿಲ್ಲ’

ಚಾಮರಾಜನಗರದ ಪ್ರಮುಖ ಉದ್ಯಾನಗಳಲ್ಲಿ ಒಂದಾಗಿರುವ ಪುಟ್ಟಮ್ಮಣ್ಣಿ ಪಾರ್ಕ್ ಕೂಡ ನಿರ್ವಹಣೆ ಕೊರತೆಯಿಂದ ಸೊರಗಿದೆ. ವಾಕಿಂಗ್ ಮಾಡಲು ಸರಿಯಾದ ಪಥವಿಲ್ಲ -ವಿದ್ಯಾಧರ್ ಸ್ಥಳೀಯ

‘ಉದ್ಯಾನ ನಿರ್ವಹಣೆ ಮಾಡಿ’

ಗುಂಡ್ಲುಪೇಟೆ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಹಿಂಭಾಗದಲ್ಲಿರುವ ಚಿಕ್ಕ ಕೆರೆ ಹಾಗೂ ದೊಡ್ಡಕೆರೆ ಸುತ್ತಲೂ ಉದ್ಯಾನ ನಿರ್ವಹಣೆ ಮಾಡಿದರೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅನುಕೂಲವಾಗುತ್ತದೆ – ಮುನೀರ್ ಪಾಷ ಸ್ಥಳೀಯ

‘ಹಾವು ಚೇಳು ಕಾಟ’

ಸಂತೇಮರಹಳ್ಳಿಯ ಮಹದೇಶ್ವರ ಸ್ವಾಮಿ ದೇವಸ್ಥಾನ ಹಿಂಭಾಗದಲ್ಲಿ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಿರುವ ಉದ್ಯಾನ ನಿರ್ವಹಣೆ ಇಲ್ಲದೆ ಹಾಳಾಗಿದೆ. ತಂತಿ ಬೇಲಿ ಸುತ್ತುಗೋಡೆ ನಿರ್ಮಿಸಿಲ್ಲ. ಉದ್ಯಾನದಲ್ಲಿ ಕಳೆ ಗಿಡಗಳು ಬೆಳೆದು ಹಾವು ಚೇಳುಗಳ ಕಾಟ ಇದೆ. ಉದ್ಯಾನ ನಿರ್ವಹಣೆ ಮಾಡಿ ಸಾರ್ವಜನಿಕರ ವಿಶ್ರಾಂತಿಗೆ ಅವಕಾಶ ಮಾಡಿಕೊಡಬೇಕು – ಎಂ.ಪಿ.ತಮ್ಮಣ್ಣ. ಸಂತೇಮರಹಳ್ಳಿ

‘ಉದ್ಯಾನ ಬಣಗುಡುತ್ತಿದೆ’

ಯಳಂದೂರು ತಾಲ್ಲೂಕು ಕಚೇರಿ ಬಳಿ ನಿರ್ಮಿಸಿದ್ದ ಉದ್ಯಾನ ಬಣಗುಡುತ್ತಿದೆ. ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರು ಕುಳಿತುಕೊಳ್ಳಲು ಸ್ಥಳವಿಲ್ಲದೆ ಪರದಾಡಬೇಕಿದೆ. ಪಟ್ಟಣಕ್ಕೆ ಚಂದದ ಮನುವನ ನಿರ್ಮಿಸಲಿ - ಲಿಂಗರಾಜು ಯಳಂದೂರು ಪಟ್ಟಣ

‘ಪಾರ್ಕ್ ಅಭಿವೃದ್ಧಿಗೆ ಕ್ರಮ’

ಕುವೆಂಪು ಬಡಾವಣೆ ಉದ್ಯಾನ ವಾರ್ಡ್ ನಂಬರ್ 26ರಲ್ಲಿರುವ ಅಂಬೇಡ್ಕರ್ ಪಾರ್ಕ್ ಹಾಗೂ ಚಾಮರಾಜೇಶ್ವರ ದೇವಸ್ತಾನದ ಪಾರ್ಕ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಉದ್ಯಾನದಲ್ಲಿರುವ ಆಟಿಕೆಗಳನ್ನು ದುರಸ್ತಿಗೊಳಿಸಲಾಗುವುದು. ಸಂಘ ಸಂಸ್ಥೆಗಳು ಉದ್ಯಾನದ ನಿರ್ವಹಣೆಗೆ ಮುಂದೆ ಬಂದರೆ ವಹಿಸಲಾಗುವುದು – ರಾಮದಾಸ್ ನಗರಸಭೆ ಆಯುಕ್ತ

ನಿರ್ವಹಣೆ: ಬಾಲಚಂದ್ರ ಎಚ್‌.

ಪೂರಕ ಮಾಹಿತಿ: ಅವಿನ್ ಪ್ರಕಾಶ್‌, ಮಹದೇವ್‌ ಹೆಗ್ಗವಾಡಿಪುರ, ನಾ.ಮಂಜುನಾಥ್‌, ಮಲ್ಲೇಶ್‌

ಯಳಂದೂರು ಪಟ್ಟಣದಲ್ಲಿ ನಿರ್ಮಿಸಿರುವ ಉದ್ಯಾನ ಗಿಡಗಂಟಿಗಳಿಂದ ಆವೃತವಾಗಿದೆ

ಕೊಳ್ಳೇಗಾಲ ತಾಲ್ಲೂಕಿನ ವೃಕ್ಷ ವನದಲ್ಲಿರುವ ಮಕ್ಕಳ ಆಟಿಕೆ ಹಾಳಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.