ಯಳಂದೂರು: ಮತ್ತೆ ಕನ್ನಡದ ತೇರು ಬಣ್ಣಬಣ್ಣದ ಪತಾಕೆ ತೊಟ್ಟು ಹಾರಾಡುವ ಹೊತ್ತು ಬಂದಿದೆ. ಸೋದರ ಭಾಷೆಗಳ ಹಾದಿಯಲ್ಲಿ ನುಡಿ ಪಯಣದ ಚೆಲುವು ಹಿಮ್ಮಡಿಸಿದೆ. ಹಚ್ಚುವ ಕನ್ನಡ ದೀಪದಿಂದ, ಧರಿಸುವ ವಸ್ತ್ರಗಳಲ್ಲೂ ಹಳದಿ, ಕೆಂಬಣ್ಣ ನಾಡು-ನುಡಿ ರೂಪಕವಾಗಿ ರಾರಾಜಿಸುತ್ತದೆ. ಭೂ ಮಂಡಲದ ಸಕಲ ಜೀವರಾಶಿಗಳಲ್ಲೂ ಕರ್ನಾಟಕದ ಸಂಕೇತ ಸಾರುವ ಪುಷ್ಪ, ಹಕ್ಕಿ, ಸೂರ್ಯಾಸ್ತದ ಬಣ್ಣ ಕನ್ನಡ ಧ್ವಜಕ್ಕೆ ಸಂವಾದಿಯಾಗಿ ಇಲ್ಲಿನ ನಿಸರ್ಗದಲ್ಲಿ ಪಲ್ಲವಿಸಿದೆ.
ಕನ್ನಡದ ಚೆಲುವು ಮತ್ತು ಸಮೃದ್ಧತೆಯು ಪಂಪನಿಂದ ಕುವೆಂಪುವರೆಗೂ ವರ್ಣಿಸಲ್ಪಟ್ಟಿದೆ. ಅಮೋಘ ವರ್ಷನಿಂದ ಷಡಕ್ಷರರವರೆಗೆ ವೈವಿಧ್ಯಮಯ ಕಾವ್ಯ ಕೈಂಕರ್ಯದ ಹಣತೆ ಹಚ್ಚುತ್ತಲೇ ಬಂದಿದ್ದಾರೆ. ಹಾಗೆಯೇ ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಪ್ರಕೃತಿಯೂ ನಾಡು-ನುಡಿಯ ಪ್ರೇಮ ಪ್ರಕಟಿಸುತ್ತಿವೆ.
ಕನ್ನಡ ಧ್ವಜಕ್ಕೆ ಅಸ್ಮಿತೆಯ ಸಂತೇತವಾಗಿ ಹಳದಿ ಮತ್ತು ಕೆಂಪು ಬಣ್ಣವನ್ನು ನೀಡಲಾಗಿದೆ. ಕನ್ನಡ ಭಾಷೆಯ ಅಭಿಮಾನಿಗಳು, ಕನ್ನಡ ಪರ ಹೋರಾಟಗಾರರು, ಸಂಘ-ಸಂಸ್ಥೆಗಳು ಭಾಷೆಯ ಹೆಮ್ಮೆಯ ಸಂಕೇತವಾಗಿ ಹಳದಿ ಕೆಂಪನ್ನು ಆರಾಧಿಸುತ್ತಿವೆ. ಇದರ ಜೊತೆಗೆ ನಮ್ಮ ಸುತ್ತಲೂ ಆವರಿಸಿರುವ ಜೀವಾವರಗಳು ಕೂಡ ಕೆಂಪು ಹಳದಿ ಬಣ್ಣಗಳಿಂದ ಕಣ್ಮನ ಸೆಳೆಯುತ್ತಿವೆ.
ಕನ್ನಡದ ಹಣತೆ ಎನ್ನುವುದು ಹಲವು ನುಡಿಗಳ ಬೆಳಕಿನ ಸಂಕಲನ. ನಾಡಿನ ಬಹು ಭಾಷೆಗಳ ಬಹುತ್ವವನ್ನು ಹಿಡಿದಿಟ್ಟಂತೆ ತಮ್ಮ ಸುತ್ತಮುತ್ತಲ ಪರಿಸರದಲ್ಲಿರುವ ತರು ಲತೆಗಳು ಬಣ್ಣಗಳೊಂದಿಗೆ ಕಂಗೊಳಿಸುತ್ತಿವೆ ಎನ್ನುತ್ತಾರೆ ಟಗರಪುರದ ಕನ್ನಡ ಪಂಡಿತರಾದ ಜಯಶೇಖರ್.
ಇಳಿ ಸಂಜೆಯ ಸೂರ್ಯ ಸಂಜೆ ಸೊಗಸಿನಲ್ಲಿ ಕನ್ನಡ ಬಣ್ಣ ಚೆಲ್ಲುತ್ತಲೇ ಜಾರುತ್ತಾನೆ. ಹಕ್ಕಿಯ ಜೊಟ್ಟು, ಕೊರಳು, ಬೆನ್ನು, ರಕ್ಕೆಯಲ್ಲೂ ಕೆಂಪು ಮತ್ತು ಹಳದಿ ಮೂಡಿದೆ. ಅರಿಶಿನ ಕುಂಕುಮ ಬಣ್ಣದಲ್ಲಿ ಹೆಲಿಕೊನಿಯಾ ಪುಷ್ಪದ ಅಂದ ಕೈಬೀಸಿ ಕರೆಯುತ್ತದೆ. ಬೇಲಿ ಬದಿಯ ಹೂಗಳು ತನ್ನ ಸುತ್ತ ದ್ವಿವರ್ಣ ಬಳಿದುಕೊಂಡು ಕಾಣುವಾಗ ಕನ್ನಡತನ ಜಾಗೃತಗೊಳ್ಳದೆ ಇರಲಾರದು.
ಇನ್ನೂ ಕಾಡಂಚಿನಲ್ಲಿ ಮೆಲ್ಲನೆ ಅರಳುವ ಗೌರಿ ಹೂವಿನ ಹಳದಿ, ಕೆಂಪು ಮನ ಸೆಳೆಯುತ್ತದೆ. ಕುಟುರ ಹಕ್ಕಿಯ ಕೊರಳು ಕೊಂಕುವಾಗ ಶಿರದ ಮೇಲೆ ನಾಡ ಬಣ್ಣ ಮಿಂಚುತ್ತದೆ. ಮೆಕ್ಸಿಕೊ ಪ್ರಭೇದದ ಹೂ ಕೆಂಪು ಟೊಪ್ಪಿಗೆ ತೊಟ್ಟು ಹಳದಿ ಬಟ್ಟಲು ಇಟ್ಟುಕೊಂಡು ‘ದೀಪ ಬೆಳಗೋಣ ಬಾ’ ಎಂದು ಕನ್ನಡಿಗರನ್ನು ಕರೆಯುವಂತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.