ADVERTISEMENT

World Migratory Bird Day | ವಲಸೆ ಬಾನಾಡಿಗಳಿಗೆ ತಲ್ಲಣ ಸೃಷ್ಟಿಸಿದ ಬರ

‘ಕೀಟಗಳ ಮೇಲೆ ಕೇಂದ್ರೀಕರಣ’ ಧ್ಯೇಯವಾಕ್ಯ: ನೀರಿನ ಕೊರತೆಯಿಮದ ಜೈವಿಕ ಸೂಚಕ ಪ್ರತಿನಿಧಿಗಳ ಗೈರು

​ಪ್ರಜಾವಾಣಿ ವಾರ್ತೆ
Published 11 ಮೇ 2024, 6:01 IST
Last Updated 11 ಮೇ 2024, 6:01 IST
<div class="paragraphs"><p>ಯಳಂದೂರು ತಾಲ್ಲೂಕಿನ ಸುತ್ತಮುತ್ತ ಕಂಡುಬರುತ್ತಿದ್ದ ವಲಸೆ ಹಕ್ಕಿ ರೋಸಿ ಪೆಲಿಕಾನ್ </p></div>

ಯಳಂದೂರು ತಾಲ್ಲೂಕಿನ ಸುತ್ತಮುತ್ತ ಕಂಡುಬರುತ್ತಿದ್ದ ವಲಸೆ ಹಕ್ಕಿ ರೋಸಿ ಪೆಲಿಕಾನ್

   

ಚಿತ್ರ: ನವೀನ್ ಜಗಲಿ

ಯಳಂದೂರು: ತಾಲ್ಲೂಕು ಜೀವವೈವಿಧ್ಯದ ತಾಣ. ವನ ಸುಮಗಳ ತಂಪು ಆವರಣ. ನೆರೆಹೊರೆ ದೇಶಗಳ ಹಕ್ಕಿಗಳ ಸುಂದರ ನಲ್ದಾಣ. ಈ ನೆಲೆಗಳಿಗೆ ನೂರಾರು ಪಕ್ಷಿಗಳು ವಲಸೆ ಬರುತ್ತವೆ. ವಿದೇಶಿ ಮತ್ತು ಸ್ವದೇಶಿ ಬಾನಾಡಿಗಳು ಜೀವಜಲ ಮತ್ತು ಆಹಾರಕ್ಕೆ ಇಲ್ಲಿನ ಆವಾಸ ಗುರುತಿಸಿಕೊಂಡಿವೆ. ಆದರೆ, ಈ ಬಾರಿ ವಲಸೆ ಹಕ್ಕಿಗಳ ಸಂಚಾರಕ್ಕೆ ಬರ ಕಂಟಕವಾಗಿ ಕಾಡಿದೆ. ನಿಸರ್ಗದ ಆರೋಗ್ಯಕರ ವಾತಾವರಣದ ಜೈವಿಕ ಸೂಚಕಗಳಾದ ಪಕ್ಷಿ ಪ್ರಭೇದಗಳ ಹಾರಾಟವೂ ಈ ವರ್ಷ ತಗ್ಗಿದೆ.

ADVERTISEMENT

ಕಾನನ ಹಾಗೂ ಗ್ರಾಮೀಣ ಭಾಗಗಳ ಕೆರೆ ಕಟ್ಟೆಗಳಲ್ಲಿ ಈ ವರ್ಷ ಹಿನ್ನೀರು ಕಡಿಮೆಯಾಗಿದೆ. ಕೆರೆ, ಕಾಲುವೆಗಳಲ್ಲಿ ಜೀವಜಲ ಬಸಿದಿದೆ. ಜನವರಿ-ಮೇ ನಡುವೆ ಬಹಳಷ್ಟು ಜಲಮೂಲ ಒಣಗಿದೆ. ಇದು ವಲಸೆ ಹಕ್ಕಿಗಳ ಆಹಾರ ಮತ್ತು ಆರೋಗ್ಯಕರ ಪರಿಸರ ಕಡಿತಕ್ಕೆ ಕಾರಣವಾದರೆ, ಕೆಸರು ಮಣ್ಣಿನಲ್ಲಿ ಜಲಚರ ಜೀವಿಗಳನ್ನು ಹುಡುಕತ್ತ, ನಿಸರ್ಗದ ತುಂಬ ನಿನಾದ ಹೊಮ್ಮಿಸುತ್ತಿದ್ದ ಬಕ, ಗೊರವಂಕ, ಬಣ್ಣದ ಗೂಸ್‌ಗಳ ಸದ್ದು ಕೇಳದಾಗಿದೆ.

ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತ 270ಕ್ಕೂ ಹೆಚ್ಚಿನ ಹಕ್ಕಿ ಪ್ರಭೇದಗಳನ್ನು ಗುರುತಿಸಲಾಗಿದೆ. ದೇಶದ ಹಿಮಾಲಯ ಹಾಗೂ ಹೊರ ದೇಶಗಳಿಂದಲೂ ಪಕ್ಷಿಗಳು ವಲಸೆ ಬರುತ್ತವೆ.

‘ರೋಸಿ ಪೆಲಿಕಾನ್, ಬಾತಿನ ಜಾತಿಯ ಹಕ್ಕಿಗಳು ಏಪ್ರಿಲ್ ವೇಳೆಗೆ ಕಾಣ ಸಿಗುತ್ತಿತ್ತು. ಹೊಳೆ ಸಾಲಿನ ಮರಗಳಲ್ಲಿ ಗೂಡು ಕಟ್ಟಿ ವಾಸಿಸುತ್ತಿತ್ತು. ಮೇ ನಂತರ ತೆರಳುತ್ತಿತ್ತು. ನೆರೆಹೊರೆ ದೇಶಗಳಿಂದ ಬರುವ ಸಸ್ಯ ಸಂಕುಲಗಳು ಫಲವತ್ತತೆ, ಕೀಟ ನಿಯಂತ್ರಣ ಮಾಡುತ್ತಿದ್ದವು. ಮಳೆ ಕೊರತೆ ಮತ್ತು ನೀರಿನ ಅಭಾವ ಇವುಗಳ ಸಂಚಾರಕ್ಕೆ ತಡೆ ನೀಡಿದೆ’ ಎಂದು ಹೇಳುತ್ತಾರೆ ವನ್ಯ ಪ್ರೇಮಿಗಳು.  

ಹಕ್ಕಿಗಳ ವಲಸೆ ವಿಸ್ಮಯ: ಚಳಿಗಾಲದ ಋತುವಿನಲ್ಲಿ ಯೂರೋಪ್, ಮಂಗೋಲಿಯಾ, ಸೈಬೀರಿಯಾ, ಆಸ್ಟ್ರೇಲಿಯಗಳಿಂದ ಬಿಆರ್‌ಟಿ  ಪರಿಸರಕ್ಕೆ ವಲಸೆ ಹಕ್ಕಿ ಸಂಭ್ರಮ ಕಾಣಿಸುತ್ತಿತ್ತು. ಪಟ್ಟೆ ಹೆಬ್ಬಾತು, ಉಲಿಯಕ್ಕಿ, ಕಂದುಬಾತು, ಚಲುಕ ಮತ್ತು ಗೊರವಗಳನ್ನು ವೀಕ್ಷಿಸಬಹುದು. ಪಾಕ್, ಬರ್ಮಾ, ಬಾಂಗ್ಲಾ, ಆಪ್ಘನ್ ಸುತ್ತಲ ಫೆಲಿಕಾನ್ ಪಕ್ಷಿಗಳು ಬರುತ್ತಿದ್ದವು. ಕೆಲವು ಉತ್ತರದ ಗೋಳದ ಧ್ರುವಪ್ರದೇಶದಿಂದ ಸಮಭಾಜಕ ವೃತ್ತದ ಸುತ್ತಲ ಆವಾಸಕ್ಕೆ ಸಾವಿರಾರು ಮೈಲಿ ಕ್ರಮಿಸಿ ಬರುವ ವಿಸ್ಮಯವನ್ನು ಅರಿಯಲು ಪಕ್ಷಿ ಶಾಸ್ತ್ರಜ್ಞರು  ಕಾಯುತ್ತಾರೆ. ಹವಾಮಾನದ ಬದಲಾವಣೆ ಮತ್ತು ಬಿಸಿಗಾಳಿ ಅಬ್ಬರವೂ ಪಕ್ಷಿಗಳ ಹಿಮ್ಮುಖ ಚಲನೆಗೆ ಕಾರಣ’  ಎಂದು ಪರಿಸರ ಪ್ರೇಮಿ ನವೀನ್ ಜಗಲಿ ‘‌ಪ್ರಜಾವಾಣಿ’ಗೆ ತಿಳಿಸಿದರು.

ಹೊಳೆ, ಅಣೆಕಟ್ಟೆ ಭಣಭಣ: ಆಹಾರ ಮತ್ತು ಸುರಕ್ಷಿತ ತಾಣ ಹುಡುಕುವ ಬಾನಾಡಿಗಳಿಗೆ ಈ ಸಲ ಜಲಸಂಪತ್ತಿನ ಕೊರತೆ ಕಾಡಿದೆ. ದೊಡ್ಡಕೆರೆ, ಅಣೆಕಟ್ಟೆ, ಹೊಳೆ ಸುತ್ತಮುತ್ತಲ ಹಿನ್ನೀರು ಬತ್ತಿದ್ದು ಏಡಿ, ಸಿಗಡಿ, ಚಿಕ್ಕಮೀನು ಮತ್ತಿತರ ಜಲಚರ ಜೀವಿ ಸಿಗುತ್ತಿಲ್ಲ. ನೀರಿನ ದಂಡೆ ಮತ್ತು ಅಣೆಕಟ್ಟೆಯ ಸಮೀಪದ ಎತ್ತರದ ಮರಗಳಲ್ಲಿ ಗೂಡು ಕಟ್ಟಿ ಜೀವಿಸುತ್ತಿದ್ದ ಹಕ್ಕಿಗಳಿಗೆ ತಾಳೆ, ಆಲ, ಅರಳಿ ಸಂಖ್ಯೆಯೂ ಕುಸಿದು ವಲಸೆ ಪಕ್ಷಿಗಳ ವೀಕ್ಷಣೆಗೆ ಹಿನ್ನಡೆಯಾಗಿದೆ’ ಎಂದು ಅವರು ಹೇಳಿದರು.

ಇಂದು ವಿಶ್ವ ವಲಸೆ ಪಕ್ಷಿ ದಿನ  ‘ಕೀಟಗಳನ್ನು ಸಂರಕ್ಷಿಸಿ: ಪಕ್ಷಿ ಸಂಕುಲ ಉಳಿಸಿ’ ಎಂಬುದು ವಿಶ್ವ ಹಕ್ಕಿ ದಿನದ 2024ರ ಧ್ಯೇಯವಾಗಿದೆ. ಕೀಟ ಪಕ್ಷಿಗಳಿಗೆ ಶಕ್ತಿಯ ಮೂಲ. ಸಂತಾನೋತ್ಪತಿ ಋತು ಹೊರತುಪಡಿಸಿ ಪಕ್ಷಿಗಳ ವಲಸೆ ಸಮಯದಲ್ಲಿ ಹೊಲ ಗದ್ದೆ ಕಾಡು ಜೌಗು ಹಾಗೂ ಹುಲ್ಲುಗಾವಲಿನಲ್ಲಿ ಗರಿಷ್ಠ ಕೀಟಗಳನ್ನು ಸೇವಿಸಿ ಪ್ರಯಾಣಿಸುತ್ತವೆ. ಜಾಗತೀಕರಣ ಅತಿಯಾದ ತಾಪ ಕೀಟನಾಶಕ ಬಳಕೆ ಹಾಗೂ ಜಲ ಮೂಲಗಳ ಮಾಲಿನ್ಯ ವಲಸೆ ಹಕ್ಕಿಗಳು ಗಮ್ಯ ತಲುಪಲು ಅಡತಡೆಯಾಗಿ ಪರಿಣಮಿಸಿದೆ. ಹಾಗಾಗಿ ಮೇ 11 ಮತ್ತು ಅಕ್ಟೋಬರ್ 12ರಂದು ಅಮೆರಿಕ ಪಕ್ಷಿ ಸಂರಕ್ಷಣಾ ತಂಡದ ಸದಸ್ಯರು ವಲಸೆ ಹಕ್ಕಿ ದಿನ ಆಚರಣೆಗೆ ಕರೆಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.