ಚಾಮರಾಜನಗರ: ‘ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮನುಷ್ಯರಿಗೆ ಹಿಂಸೆ ಮಾಡುತ್ತಿರುವುದು ದುರ್ದೈವದ ಸಂಗತಿ’ ಎಂದು ಮೈಸೂರಿನ ಕ್ರಿಶ್ಚಿಯನ್ ಧರ್ಮಗುರು ಫಾದರ್‌ಜಾನ್ ಎಫ್. ಟೆಕ್ಸೆರಾ ಹೇಳಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂತ ಪೌಲರ ದೇವಾಲಯದಲ್ಲಿ ಶುಕ್ರವಾರ ನಡೆದ ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಸಂದೇಶ ನೀಡಿದರು.
‘50 ವರ್ಷಗಳ ಹಿಂದೆ ಹೀಗಿರಲಿಲ್ಲ. ಶಾಂತಿ, ನೆಮ್ಮದಿ ನೆಲೆಯೂರಿತ್ತು. ಈಗ ಯುದ್ಧ, ಸಂಘರ್ಷ, ಮಾನವ ಸೃಷ್ಟಿಸಿರುವ ಅನಾಹುತಗಳು ತಾಂಡವವಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಸ್ವಾರ್ಥ ಹೆಚ್ಚುತ್ತಿದೆ. ಅವನ ಕ್ರೂರತೆಗೆ ಮುಗ್ಧ ಜನ ತತ್ತರಿಸುತ್ತಿದ್ದಾರೆ’ ಎಂದರು.
‘ಯಾವುದೇ ಮಾಂಸಹಾರಿ ಪ್ರಾಣಿ ತನ್ನ ಜಾತಿಯ ಪ್ರಾಣಿಗೆ ಹಿಂಸೆ ನೀಡುವುದಿಲ್ಲ. ತನಗೆ ಬೇಕಾದ ಆಹಾರ ಪಡೆದು ಸುಮ್ಮನಾಗುತ್ತವೆ. ಆದರೆ ಮನುಷ್ಯ ಮಾತ್ರ ಮನುಷ್ಯರಿಗೆ ಹಿಂಸೆ ನೀಡುವ ಕೆಟ್ಟ ಪ್ರವೃತ್ತಿ ಬೆಳೆಸಿಕೊಂಡಿದ್ದಾನೆ. ಆಧ್ಯಾತ್ಮಿಕ ಶಕ್ತಿಯಿಂದ ಮಾತ್ರ ಇದನ್ನು ತಡೆಯಲು ಸಾಧ್ಯ. ಮಾನವನ ಬಳಿ ಅಧ್ಯಾತ್ಮಕ್ಕೆ ಸಮಯವಿಲ್ಲ. ಹಣ ಸಂಪಾದನೆಯೇ ಗುರಿಯಾಗಿದೆ. ಶೀಘ್ರ ಹಣ ಸಂಪಾದನೆಗಾಗಿ ಕೆಟ್ಟ ಕೆಲಸಗಳಿಗೆ ಮುಂದಾಗುತ್ತಿದ್ದಾನೆ. ಶಾಂತಿ, ನೆಮ್ಮದಿಗೆ, ಸಹಬಾಳ್ವೆಗೆ ಒಗ್ಗೂಡದ ಮನುಷ್ಯ ಮಾದಕ ದ್ರವ್ಯ ಸೇವನೆಗೆ ಒಟ್ಟಾಗುತ್ತಾನೆ. ಮಾನವನ ಪ್ರವೃತ್ತಿ ಎಲ್ಲಿ ಹೋಯಿತು? ಬೇಡವಾದದನ್ನು ಬಹುಬೇಗ ಪಡೆಯುತ್ತಿದ್ದಾನೆ. ಬೇಕಾದುದನ್ನು ತಿರಸ್ಕರಿಸುತ್ತಿದ್ದಾನೆ’ ಎಂದರು.
ಪ್ರಾರ್ಥನೆ: ಇದೇ ಸಂದರ್ಭದಲ್ಲಿ ಮೃತಪಟ್ಟರಿಗೆ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿ ಪ್ರಾರ್ಥನೆ ಮಾಡಲಾಯಿತು.
ದೊಡ್ಡರಾಯಪೇಟೆ ಸಂತಪೌಲರ ದೇವಾಲಯದ ಧರ್ಮಗುರು ಅರುಳ ಸೆಲ್ವ ಕುಮಾರ್, ಕೋಡಿ ಉಗನೆಯ ಫಾಲ್ ಡಿ’ಸಾ, ಧರ್ಮಗುರುಗಳಾದ ಜಾನ್ ಡಿ ಸಾ, ಜೋಸೆಫ್ ರಾಜ್, ಸಿಸ್ಟರ್ ಪರಿಮಳಾ ಹಾಗೂ ಚಾಮರಾಜನಗರ, ನಾಗವಳ್ಳಿ, ಕೋಡಿಉಗನೆ, ದೊಡ್ಡರಾಯಪೇಟೆ ಹಾಗೂ ನಂಜನಗೂಡಿನ ಕ್ರಿಶ್ಚಿಯನ್ ಸಮುದಾಯದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.