ಕೊಳ್ಳೇಗಾಲ: 2019–20ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಆಗಸ್ಟ್ 6 ಅಥವಾ 8ರೊಳಗೆ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಫಲಿತಾಂಶ ಪ್ರಕಟಣೆಗೆ ಸಿದ್ಧತೆ ನಡೆಯುತ್ತಿದೆ’ ಎಂದರು.
‘ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ ರಾಜ್ಯದಲ್ಲಿ ಆಗಸ್ಟ್ ತಿಂಗಳಲ್ಲಿ ಶಾಲೆಗಳನ್ನು ಆರಂಭಿಸುವುದಿಲ್ಲ. ಪರಿಸ್ಥಿತಿ ನೋಡಿಕೊಂಡು ಮುಂದೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವೈಜ್ಞಾನಿಕವಾಗಿ ಪಠ್ಯ ಕಡಿತ: ಪಠ್ಯಪುಸ್ತಕಗಳಲ್ಲಿ ಕೆಲವು ಭಾಗಗಳನ್ನು ಕಡಿತಗೊಳಿಸಿ, ನಂತರ ಅದನ್ನು ತಡೆ ಹಿಡಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಪಠ್ಯ ಪುಸ್ತಕದಲ್ಲಿ ಕೆಲವು ಭಾಗಗಳನ್ನು ಕೈ ಬಿಟ್ಟಿರುವ ಬಗ್ಗೆ ಸಾರ್ವಜನಿಕರಲ್ಲಿ ಬೇಸರ ಹಾಗೂ ಗೊಂದಲ ಉಂಟು ಮಾಡಿರುವುದರಿಂದ ನಿರ್ಧಾರ ತಡೆ ಹಿಡಿಯಲಾಗಿದೆ. ಈ ವಿಚಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಡಿಎಸ್‌ಇಆರ್‌ಟಿಯ ಪಠ್ಯ ಪುಸ್ತಕ ಸಮಿತಿಗೆ ಸೂಚನೆ ನೀಡಲಾಗಿದೆ.ಪ್ರತಿ ವರ್ಷ ಶೈಕ್ಷಣಿಕ ವರ್ಷದಲ್ಲಿ 240 ದಿನ ಇರುತ್ತಿತ್ತು. ಈ ಬಾರಿ ಗರಿಷ್ಠ ಎಂದರೆ 140 ದಿನ ಸಿಗಬಹುದು. ಹಾಗಾಗಿ, ಶೇ 30ರಷ್ಟು ಪಠ್ಯ ಕಡಿತಗೊಳಿಸಲು ನಿರ್ಧರಿಸಲಾಗಿತ್ತು. ಅದರಂತೆ ಮತ್ತೆ ಮತ್ತೆ ಕಲಿಯುವಂತಹ ವಿಷಯಗಳನ್ನು ಕೈ ಬಿಡಲಾಗಿತ್ತು. ಈ ವಿಚಾರವನ್ನು ಮತ್ತೊಮ್ಮೆ ಪರಿಶೀಲಿಸಿ, ವೈಜ್ಞಾನಿಕವಾಗಿ ಪಠ್ಯ ಕಡಿತಗೊಳಿಸಲು ತೀರ್ಮಾನಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.