ಚಾಮರಾಜನಗರ: ತೋಟಗಾರಿಕೆ ಇಲಾಖೆಯು ಕೃಷಿ ಹೊಂಡದ ಮಾದರಿ ಯಲ್ಲೇ, ಅದಕ್ಕೆ ಪರ್ಯಾಯವಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಯಡಿ ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕಾಗಿ ಸಹಾಯಧನ ನೀಡುವ ಯೋಜನೆ ಆರಂಭಿಸಿದೆ.
ಈ ಯೋಜನೆಯಡಿಯಲ್ಲಿ ಕೃಷಿ ಜಮೀನಿನಲ್ಲಿ ವ್ಯವಸಾಯದ ಉದ್ದೇಶ ಕ್ಕಾಗಿ ಉಕ್ಕಿನ (ಸ್ಟೀಲ್) ಟ್ಯಾಂಕ್ (ಪೋರ್ಟಬಲ್ ಮಾಡ್ಯುಲರ್ ಸ್ಟೀಲ್ ಟ್ಯಾಂಕ್) ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಟ್ಯಾಂಕ್ ನಿರ್ಮಾಣಕ್ಕೆ ಆಗುವ ಒಟ್ಟು ವೆಚ್ಚದ ಶೇ 50 ಮೊತ್ತವನ್ನು ಸಬ್ಸಿಡಿ ರೂಪದಲ್ಲಿ ಇಲಾಖೆ ನೀಡಲಿದೆ.
ವ್ಯವಸಾಯಕ್ಕೆ ನೀರಿನ ಸೌಕರ್ಯ ಇಲ್ಲದಿದ್ದ ಕಡೆ ಅಥವಾ ಲಭ್ಯವಿರುವ ಹೆಚ್ಚುವರಿ ನೀರನ್ನು ಸಂಗ್ರಹಿಸಿಟ್ಟುಕೊಂಡು ತೋಟಗಾರಿಕೆ ಬೆಳೆಗಳಿಗೆ ಅಗತ್ಯವಿದ್ದಾಗ ನೀರು ಒದಗಿಸುವ ಉದ್ದೇಶ ಈ ಯೋಜನೆ ಯದ್ದು ಎನ್ನುತ್ತಾರೆ ಅಧಿಕಾರಿಗಳು.
ಯೋಜನೆಯಡಿಯಲ್ಲಿ ಒಂದು ಲಕ್ಷ, ಎರಡು ಲಕ್ಷ ಹಾಗೂ ಐದು ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ಸ್ಥಾಪಿಸುವುದಕ್ಕೆ ಅವಕಾಶ ಇದೆ.
ಸುಲಭ ಸ್ಥಾಪನೆ, ಸಾಗಣೆ: ಉಕ್ಕಿನ ಈ ಟ್ಯಾಂಕ್ ಅನ್ನು ಸುಲಭವಾಗಿ ಸ್ಥಾಪಿಸಬಹುದು. ಬೇರೆ ಕಡೆಗೂ ಸ್ಥಳಾಂತರಿಸಬಹುದು. ಸದ್ಯ ಇದನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅಲ್ಲಿಂದ ಬರುವುದಕ್ಕೆ ಒಂದರಿಂದ ಒಂದೂವರೆ ತಿಂಗಳು ಬೇಕಾಗುತ್ತದೆ.ಕೃಷಿ ಜಮೀನು ಅಥವಾ ಯಾವುದೇ ಸ್ಥಳದಲ್ಲಿ ಅತ್ಯಂತ ಸುಲಭವಾಗಿ, ವೇಗವಾಗಿ ಸ್ಥಾಪಿಸಬಹುದು. ಒಂದು ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ಅಳವಡಿಸಲು ಎರಡು ದಿನ ಸಾಕು ಎನ್ನುತ್ತಾರೆ ಅಧಿಕಾರಿಗಳು.
‘ಟ್ಯಾಂಕ್ ಕನಿಷ್ಠ 10 ವರ್ಷ ಬಾಳಿಕೆ ಬರುತ್ತದೆ. ನಿರ್ವಹಣೆ ಚೆನ್ನಾಗಿದ್ದರೆ, ಇನ್ನೂ ಹೆಚ್ಚು ಸಮಯಬಳಸಬಹುದು. ಪಾಚಿಗಟ್ಟುವುದಿಲ್ಲ. ಹಾಗಾಗಿ, ನೀರಿನ ಗುಣಮಟ್ಟ ಉತ್ತಮವಾಗಿರುತ್ತದೆ. ಸುಲಭವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಬಹುದು. ಟ್ಯಾಂಕ್ ಅಳವಡಿಸಲು ಹೆಚ್ಚು ಜಾಗವೂ ಅಗತ್ಯವಿಲ್ಲ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಎಲ್.ಶಿವಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನೀರಿನ ಸಂಗ್ರಹಣಾ ಘಟಕ ಖರೀದಿಸುವ ಮೊದಲು ನಮ್ಮಲ್ಲಿಂದ ಕಡ್ಡಾಯವಾಗಿ ಕಾರ್ಯಾದೇಶ ಪಡೆದಿರಬೇಕು. ಇಲಾಖೆ ಅನುಮೋದಿಸಿದ ಏಜೆನ್ಸಿ, ಸಂಸ್ಥೆಗಳಿಂದ ಮಾತ್ರ ಘಟಕ ಖರೀದಿಸಲು ಅವಕಾಶ ನೀಡಲಾಗಿದೆ’ ಎಂದರು.
ಅರ್ಜಿ ಸಲ್ಲಿಸುವ ರೈತರುಎರಡು ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಮ್ಯುಟೇಷನ್, ಚೆಕ್‌ಬಂದಿ, ಜಮೀನಿನಲ್ಲಿ ತೋಟಗಾರಿಕೆ ಬೆಳೆಯಿರುವ ತಾಕಿನ ಫೋಟೊ, ಗಣಕೀಕೃತ ಬೆಳೆ ದೃಢೀಕರಣ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಅನುಮೋದಿತ ಕಂಪನಿ, ಸಂಸ್ಥೆಯಿಂದ ಅಂದಾಜು ಪಟ್ಟಿ, ಪರಿಶಿಷ್ಟ ಜಾತಿ/ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಅವರು ಮಾಹಿತಿ ನೀಡಿದರು.
ವೆಚ್ಚದ ಅರ್ಧದಷ್ಟು ಸಬ್ಸಿಡಿ
ಕನಿಷ್ಠ ಒಂದು ಹೆಕ್ಟೇರ್‌ನಲ್ಲಿ (2.5 ಎಕರೆ) ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರು ಒಂದು ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ಖರೀದಿಸಲು ಅವಕಾಶ ಇದೆ. ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ಸ್ಥಾಪನೆಗೆ 22 ಚದರ ಅಡಿ ಜಾಗ ಇದ್ದರೆ ಸಾಕು. ಅಂದಾಜು ₹ 6.5 ಲಕ್ಷ ವೆಚ್ಚಾಗುತ್ತದೆ. ಇದರಲ್ಲಿ ಶೇ 50 ಅಂದರೆ, ₹ 3.25 ಲಕ್ಷ ಹಣ ರೈತರಿಗೆ ಸಬ್ಸಿಡಿ ಸಿಗುತ್ತದೆ.
28 ಚದರ ಅಡಿ ಜಾಗದಲ್ಲಿ ಎರಡು ಲಕ್ಷ ಲೀಟರ್‌ನ ಟ್ಯಾಂಕ್ ನಿರ್ಮಿಸಬಹುದು. ಇದಕ್ಕೆ ಅಂದಾಜು ₹ 10 ಲಕ್ಷ ವೆಚ್ಚವಾಗುತ್ತದೆ. ಈ ಮೊತ್ತದಲ್ಲಿ ₹ 5 ಲಕ್ಷವನ್ನು ಇಲಾಖೆ ನೀಡುತ್ತದೆ. ಎರಡು ಲಕ್ಷ ಲೀಟರ್‌ನ ಟ್ಯಾಂಕ್ ಅಳವಡಿಸಲು ಬಯಸುವ ರೈತರು ಕನಿಷ್ಠ ಎರಡು ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡುತ್ತಿರಬೇಕು.
ಕನಿಷ್ಠ 4 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯುವವರು ಐದು ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ಸ್ಥಾಪಿಸಲು ಅರ್ಹರು. ಇದಕ್ಕೆ ₹ 15 ಲಕ್ಷ ವೆಚ್ಚವಾಗುತ್ತದೆ. ಈ ಪೈಕಿ ₹ 7.5 ಲಕ್ಷ ಸಬ್ಸಿಡಿ ದೊರೆಯುತ್ತದೆ. ಈ ಟ್ಯಾಂಕ್ ನಿರ್ಮಿಸಲು 45 ಚದರ ಅಡಿ ಜಾಗ ಸಾಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.