ಹನೂರು/ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಹನೂರು ತಾಲ್ಲೂಕಿನ ಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರು ಮತ್ತು ಪಕ್ಕದ ಮೆಂದಾರೆ ಗ್ರಾಮಸ್ಥರ ನಡುವೆ ಘರ್ಷಣೆ ನಡೆದಿದ್ದು, ಉದ್ರಿಕ್ತರು ಮತಗಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿ, ಮತಯಂತ್ರಗಳಿಗೆ ಹಾನಿ ಮಾಡಿದ್ದಾರೆ.
ಮತದಾನ ಮಾಡುವಂತೆ ಮನವೊಲಿಸಲು ಗ್ರಾಮಕ್ಕೆ ಹೋಗಿದ್ದ ಹನೂರು ತಹಶೀಲ್ದಾರ್ ಗುರುಪ್ರಸಾದ್, ಮಹದೇಶ್ವರ ಬೆಟ್ಟ ಠಾಣೆಯ ಇನ್‌ಸ್ಪೆಕ್ಟರ್ ಜಗದೀಶ್ ಸೇರಿದಂತೆ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
‘ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿರುವ ಗ್ರಾಮಕ್ಕೆ ರಸ್ತೆ, ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳಿಲ್ಲ’ ಎಂದು ದೂರಿದ್ದ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದರು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದರು.
ಇಂಡಿಗನತ್ತ ಗ್ರಾಮದ ಮತಗಟ್ಟೆ ಯಲ್ಲಿ ಸಮೀಪದ ಮೆಂದಾರೆ ಗ್ರಾಮದವರೂ ಮತದಾನ ಮಾಡುತ್ತಾರೆ. ಎರಡೂ ಗ್ರಾಮಗಳಲ್ಲಿ 528 ಮತದಾರರಿದ್ದಾರೆ. ಶುಕ್ರವಾರ ಬೆಳಿಗ್ಗೆ ಮತದಾನ ಆರಂಭವಾಗಿದ್ದರೂ, ಗ್ರಾಮಸ್ಥರು ಮತಗಟ್ಟೆಗೆ ಬಂದಿರಲಿಲ್ಲ. ತಹಶೀಲ್ದಾರ್ ಗುರುಪ್ರಸಾದ್, ಇನ್‌ಸ್ಪೆಕ್ಟರ್ ಜಗದೀಶ್ ಸೇರಿದಂತೆ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರೂ, ಅವರು ಪಟ್ಟು ಸಡಿಸಲಿಲ್ಲ. ಪಕ್ಕದ ಮೆಂದಾರೆಗೂ ತೆರಳಿ ಮತದಾರರ ಮನವೊಲಿಸಿದರು. ಅವರು ಮತದಾನ ಮಾಡಲು ಒಪ್ಪಿದರು.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೆಂದಾರೆಯ ಮತದಾರರು ಮತಗಟ್ಟೆಗೆ ಬಂದು ಮತದಾನಕ್ಕೆ ಮುಂದಾದಾಗ ಇಂಡಿಗನತ್ತ ಗ್ರಾಮಸ್ಥರು ಆಕ್ಷೇಪಿಸಿದರು. ಆ ವೇಳೆಗಾಗಲೇ ಒಂಬತ್ತು ಮಂದಿ ಹಕ್ಕು ಚಲಾಯಿಸಿದ್ದರು.
‘ನೀವು ಜನರನ್ನು ಹೆದರಿಸಿ, ಬೆದರಿಸಿ ಮತ ಹಾಕಿಸುತ್ತಿದ್ದೀರಿ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಆ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪೊಲೀಸರು ಲಾಠಿ ಪ್ರಹಾರಕ್ಕೆ ಮುಂದಾದಾಗ ಉದ್ರಿಕ್ತರು ಮತಗಟ್ಟೆ ಮೇಲೆ ಕಲ್ಲು ತೂರಾಟ ನಡೆಸಿದರು. ಮತಗಟ್ಟೆಯ ಒಳಕ್ಕೆ ನುಗ್ಗಿ ಇವಿಎಂ ಹಾಗೂ ಇತರ ಪರಿಕರಗಳನ್ನು ಕೆಳಕ್ಕೆ ಎಸೆದು ಹಾನಿ ಮಾಡಿದರು. ಇವಿಎಂಗೆ ಬೆಂಕಿ ಹಚ್ಚಲೂ ಯತ್ನಿಸಿದರು. ವಿಷಯ ತಿಳಿಯುತ್ತಲೇ ಹೆಚ್ಚಿನ ಪೊಲೀಸ್ ಸಿಬ್ಬಂದಿ ರವಾನಿಸಲಾಗಿದ್ದು, ಪರಿಸ್ಥಿತಿ ಶಾಂತವಾಗಿದೆ.
ಎಸ್‌ಪಿ ಭೇಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೂ ಚರ್ಚೆ ನಡೆಸಿದ್ದಾರೆ.
ಘಟನೆ ಸಂಬಂಧ ಗ್ರಾಮದ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಚುನಾವಣಾಧಿಕಾರಿ ಸಿ.ಟಿ.ಶಿಲ್ಪಾ ನಾಗ್, ‘ಘಟನೆಯನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ. ಅಲ್ಲಿ ಮರು ಮತದಾನ ನಡೆಯುವ ನಿರೀಕ್ಷೆ ಇದೆ. ಘಟನೆಯ ಕುರಿತಾಗಿ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.
20ಕ್ಕೂ ಹೆಚ್ಚು ಜನರಿಗೆ ಗಾಯ
ಘಟನೆಯಲ್ಲಿ ಮೆಂದಾರೆ ಗ್ರಾಮದ 20ಕ್ಕೂ ಹೆಚ್ಚು ನಿವಾಸಿಗಳಿಗೆ ಗಾಯಗಳಾಗಿವೆ.
‘ಮೂಲಸೌಕರ್ಯಗಳು ಇಲ್ಲದಿರುವ ಕಾರಣಕ್ಕೆ ಈ ಬಾರಿ ಮತದಾನ ಬಹಿಷ್ಕಾರ ಮಾಡುವ ಬಗ್ಗೆ ಇಂಡಿಗನತ್ತ ಗ್ರಾಮದವರು ನಮ್ಮೊಂದಿಗೆ ಚರ್ಚಿಸಿ ತೀರ್ಮಾನ ಮಾಡಿದ್ದರು. ಅದರಂತೆ ನಾವು ಶುಕ್ರವಾರ ಮತದಾನಕ್ಕೆ ಹೋಗಿರಲಿಲ್ಲ. ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಪೊಲೀಸ್ ಅಧಿಕಾರಿಗಳು ಬಂದು ಮತ ಚಲಾಯಿಸುವಂತೆ ಮನವಿ ಮಾಡಿದರು. ಮತದಾನದ ಮಹತ್ವ ತಿಳಿಸಿದರು’ ಎಂದು ಮೆಂದಾರೆ ಗ್ರಾಮದ ಸೋಲಿಗ ಮುಖಂಡರಾದ ಮಾದಯ್ಯ ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪೊಲೀಸ್ ಭದ್ರತೆಯಲ್ಲಿ ಮತದಾನಕ್ಕೆ ನಾವು ಮುಂದಾದಾಗ ಇಂಡಿಗನತ್ತ ಗ್ರಾಮಸ್ಥರು ರೊಚ್ಚಿಗೆದ್ದು, ದೊಡ್ಡ ಗಾತ್ರದ ಕಲ್ಲುಗಳನ್ನು ಅಧಿಕಾರಿಗಳು ಮತ್ತು ನಮ್ಮ ತೂರಿದ್ದಾರೆ. ನಮ್ಮ ಗ್ರಾಮದ ಬೇರಪ್ಪ, ಮಾದಯ್ಯ ಎಂಬುವವರ ತಲೆಗೆ ಪೆಟ್ಟಾಗಿದ್ದು, ಶಿವಕುಮಾರ್ ಎಂಬಾತನ ಸೊಂಟಕ್ಕೆ ಏಟಾಗಿದೆ. 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ವಿವರಿಸಿದರು.
‘ಇಂಡಿಗನತ್ತದಿಂದ ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿರುವ ಕುಡಿಯುವ ನೀರಿನ ಪೈಪ್‌ಗಳನ್ನೂ ಕಿತ್ತು ಹಾಕಲಾಗಿದೆ. ಅಧಿಕಾರಿಗಳು ನಮಗೆ ರಕ್ಷಣೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.