ಚಾಮರಾಜನಗರ: ನಗರ, ಪಟ್ಟಣ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಒಳ ಚರಂಡಿ, ಕುಡಿಯುವ ನೀರು, ಬೀದಿ ದೀಪ, ಶುಚಿತ್ವ ಕಾಪಾಡುವುದು ಆಯಾ ಸ್ಥಳೀಯ ಸಂಸ್ಥೆಗಳ ಬಹುಮುಖ್ಯವಾದ ಜವಾಬ್ದಾರಿ. ಆದರೆ, ಜಿಲ್ಲೆಯಲ್ಲಿ ಸ್ಥಳೀಯ ಆಡಳಿತಗಳು ಹೊಣೆಗಾರಿಕೆ ಮರೆತ ಪರಿಣಾಮ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ಚಾಮರಾಜನಗರ ಸ್ವತಂತ್ರ ಜಿಲ್ಲೆಯಾಗಿ ರೂಪುಗೊಂಡು ಬರೋಬ್ಬರಿ ಎರಡೂವರೆ ದಶಕಗಳು ಕಳೆದರೂ ಸಮರ್ಪಕವಾದ ಬೀದಿದೀಪಗಳ ವ್ಯವಸ್ಥೆ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಗೆ ಮಾದರಿಯಾಗಬೇಕಾಗಿದ್ದ ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಬೀದಿದೀಪಗಳ ಸಮಸ್ಯೆ ಗಂಭೀರವಾಗಿದೆ. ರಾತ್ರಿಯ ಹೊತ್ತು ಹೊರ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳಿಂದ ಚಾಮರಾಜನಗರ ಪ್ರವೇಶಿಸುವ ವಾಹನಗಳಿಗೆ ‘ಕಗ್ಗತ್ತಲಿನ’ ಸ್ವಾಗತ ಸಿಗುತ್ತದೆ. ವಾಹನ ಸವಾರರಿಗೆ ‘ನಗರ’ ಪ್ರವೇಶಿಸಿದ್ದೇವೋ ಅಥವಾ ‘ಅರಣ್ಯ’ ಹಾದಿ ಹಿಡಿದಿದ್ದೇವೋ ಎಂಬ ಗೊಂದಲ ಅರೆಕ್ಷಣ ಕಾಡದಿರದು. ಚಾಮರಾಜನಗರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಸತ್ಯಮಂಗಲ ರಾಷ್ಟ್ರೀಯ ಹೆದ್ದಾರಿ ಬೀದಿ ದೀಪಗಳನ್ನೇ ಕಂಡಿಲ್ಲ !
ಭಾರಿ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಕಗ್ಗತ್ತಲು ಕವಿಯುತ್ತದೆ. ಪ್ರತಿದಿನ ಸಾವಿರಾರು ಸರಕು ಸಾಗಣೆ ವಾಹನಗಳು, ಬಸ್‌ಗಳು, ಪ್ರಯಾಣಿಕ ವಾಹನಗಳು ಈ ರಸ್ತೆಯಲ್ಲಿ ಸಾಗುತ್ತಿದ್ದು ಸವಾರರು ಜೀವ ಕೈಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಹೆದ್ದಾರಿಯಲ್ಲಿ ಎದರು ಬದುರಾಗಿ ವೇಗವಾಗಿ ಬರುವ ವಾಹನಗಳು ಹೊರಸೂಸುವ ಪ್ರಖರ ಬೆಳಕಿನಿಂದ ಚಾಲಕರು ಗೊಂದಲಕ್ಕೆ ಸಿಲುಕುತ್ತಿದ್ದು ವಾಹನಗಳು ಡಿವೈಡರ್‌ಗಳಿಗೆ ಡಿಕ್ಕಿ ಹೊಡೆಯುತ್ತಿರುವ, ಚಾಲಕರ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುತ್ತಿರುವ ಘಟನೆಗಳು ನಡೆಯುತ್ತಿವೆ.
ಬೈಕ್ ಸವಾರರ ಪಾಡಂತೂ ಹೇಳತೀರದು. ವಾಹನಗಳ ಪ್ರಖರ ಬೆಳಕಿನಿಂದ ಕಣ್ಣು ಮಂಜಾಗಿ ಹೆದ್ದಾರಿಯಲ್ಲಿರುವ ದೈತ್ಯ ಗುಂಡಿಗಳಿಗೆ ವಾಹನಗಳನ್ನು ಇಳಿಸಿ ಗಂಭೀರವಾದ ಪೆಟ್ಟು ಮಾಡಿಕೊಂಡಿದ್ದಾರೆ. ನಗರಸಭೆ ವ್ಯಾಪ್ತಿಗೊಳಪಡುವ ಸುಲ್ತಾನ್ ಷರೀಫ್ ರಸ್ತೆಯಿಂದ ಸೋಮವಾರ ಪೇಟೆಯವರೆಗೂ ಬೀದಿದೀಪಗಳಿಲ್ಲದೆ ಕತ್ತಲಿನಲ್ಲಿಯೇ ಸಂಚರಿಸಬೇಕಾಗಿದೆ. ಈ ರಸ್ತೆಯಲ್ಲಿ ಅರಣ್ಯ ಇಲಾಖೆ ಕಚೇರಿಗಳು, ಪ್ರವಾಸಿ ಮಂದಿರ, ಎಪಿಎಂಸಿ, ಶಾಲಾ, ಕಾಲೇಜುಗಳು, ತಾಲ್ಲೂಕು ಪಂಚಾಯಿತಿ ಕಚೇರಿಗಳಿವೆ.
ಮತ್ತೊಂದೆಡೆ, ಪಚ್ಚಪ್ಪ ಸರ್ಕಲ್‌ನಿಂದ ಆರಂಭವಾಗುವ ಡಿವಿಯೇಷನ್ ರಸ್ತೆಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ನಂಜನಗೂಡು, ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲೂ ಬೀದಿದೀಪಗಳಿಲ್ಲ. ರಸ್ಯೆ ಮಧ್ಯೆ ಡಿವೈಡರ್ ನಿರ್ಮಾಣ ಮಾಡಿದ್ದರೂ ಬೀದಿದೀಪಗಳನ್ನು ಅಳವಡಿಸುವ ಗೋಜಿಗೆ ಹೆದ್ದಾರಿ ಪ್ರಾಧಿಕಾರವಾಗಲಿ, ನಗರಸಭೆಯಾಗಲಿ ಹೋಗಿಲ್ಲ. ಇದೇ ರಸ್ತೆಯಿಂದ ಕೊಳ್ಳೇಗಾಲ ತಾಲ್ಲೂಕಿಗೆ ಸಂಪರ್ಕಿಸುವ ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದರೂ ಬೀದಿದೀಪಗಳನ್ನು ಹಾಕಲು ಅಧಿಕಾರಿಗಳು ಮರೆತುಬಿಟ್ಟಿದ್ದಾರೆ !
ನಗರದ ಹೃದಯಭಾಗದಲ್ಲಿರುವ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಬೀದಿದೀಪಗಳಿದದ್ದರೂ ಅವುಗಳಿಗೆ ಮಂಕು ಕವಿದಿದೆ. ನಿಗದಿಗಿಂತ ಎತ್ತರದಲ್ಲಿರುವ ಅಳವಡಿಸಿರುವ ದೀಪಗಳು ಪ್ರಖರವಾದ ಬೆಳಕು ಹೊರಸೂಸದೆ ರಸ್ತೆಯ ಮೇಲೆ ಬೆಳಕು ಚೆಲ್ಲುತ್ತಿಲ್ಲ. ಜತೆಗೆ ಅಲ್ಲಲ್ಲಿ ಬೀದಿ ದೀಪಗಳು ಕೆಟ್ಟುನಿಂತಿವೆ.
ಟಾಟಾ ಮೋಟರ್ಸ್ ಮಳಿಗೆಯಿಂದ ಸೇಂಟ್ ಪಾಲ್ ಚರ್ಚ್‌ವರೆಗೂ ಬೀದಿದೀಪಗಳು ಉರಿಯುತ್ತಿಲ್ಲ. ರಸ್ತೆಯ ವಿಭಜಕದ ಮೇಲೆ ಅಳವಡಿಸಿರುವ ವಿದ್ಯುತ್ ಕಂಬಗಳು ಅಲ್ಲಲ್ಲಿ ನೆಲಕ್ಕುರುಳಿವೆ. ಗಾಳಿ ಮಳೆಗೆ ಅಪಾಯ ತಂದೊಡ್ಡುವ ಆತಂಕ ಕಾಡುತ್ತಿದೆ.
ನಗರದ ಡಿವೈಎಸ್‌ಪಿ ಕಚೇರಿ ಎದುರು ಇರುವ ಹೈಮಾಸ್ಟ್ ಹಾಗೂ ಪಚ್ಚಪ್ಪ ಸರ್ಕಲ್‌ನಲ್ಲಿರುವ ಹೈಮಾಸ್ಟ್‌ನಲ್ಲಿ ಕೆಲವು ದೀಪಗಳು ಉರಿದರೆ, ಕೆಲವು ಕೆಟ್ಟಿವೆ. ಹೆದ್ದಾರಿಯಲ್ಲಿರುವ ಬಹುತೇಕ ಹೈಮಾಸ್ಟ್‌ಗಳದ್ದು ಇದೇ ಕಥೆ.
ನಗರದ ಪ್ರಮುಖ ಬಡಾವಣೆಗಳಲ್ಲೂ ಬೀದಿದೀಪಗಳ ಸಮಸ್ಯೆ ಕಾಣುತ್ತದೆ. ರಾಮಸಮುದ್ರದ ಕುಲುಮೆ ರಸ್ತೆಯಲ್ಲಿ ಬೀದಿದೀಪಗಳು ಉರಿಯುವುದಿಲ್ಲ. ಹೊಸ ಹೌಸಿಂಗ್ ಬೋರ್ಡ್ ಬಡಾವಣೆ ವ್ಯಾಪ್ತಿಯ ಬಡಾವಣೆಗಳಲ್ಲಿ ಅಲ್ಲೊಂದು ಇಲ್ಲೊಂದು ಬೀದಿದೀಪಗಳನ್ನು ಹಾಕಲಾಗಿದೆ.
ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ರಸ್ತೆ, ಪ್ರಗತಿ ನಗರ, ರೇಷ್ಮೆ ಮಾರುಕಟ್ಟೆ ಬಳಿ, ಕರಿನಂಜನಪುರ ರಸ್ತೆ, ಬುದ್ಧ ನಗರ, ಕೆಎಸ್‌ಆರ್‌ಟಿಸಿ ನಿಲ್ದಾಣದ ಹಿಂಭಾಗದ ಮೊಹಲ್ಲ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಬಡಾವಣೆಗಳಲ್ಲಿ ಸರಿಯಾಗಿ ಬೀದಿದೀಪಗಳು ಉರಿಯುತ್ತಿಲ್ಲ. ನಗರಕ್ಕೆ ಹೊಂದಿಕೊಂಡು ನಿರ್ಮಾಣವಾಗುತ್ತಿರುವ ಹೊಸ ಬಡಾವಣೆಗಳಲ್ಲಿ ಸಮಸ್ಯೆ ಗಂಭೀರವಾಗಿದೆ.
ಕೊಳ್ಳೇಗಾಲ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ದೀಪಗಳ ಕೊರತೆ ಇದೆ. ನಗರಸಭೆ ಸಾರ್ವಜನಿಕರಿಗೆ ಕತ್ತಲಲ್ಲಿ ಸಂಚರಿಸುವ ಭಾಗ್ಯ ನೀಡಿದೆ. ನಗರದೊಳಗೆ ನೆಪಮಾತ್ರಕ್ಕೆ ಬೀದಿದೀಪಗಳಿದ್ದರೂ ಒಂದು ದಿನ ಉರಿದರೆ ಮತ್ತೊಂದು ದಿನ ಉರಿಯುವುದಿಲ್ಲ. ಕೆಲವು ಕಂಬಗಳಿಂದ ನೇತಾಡುತ್ತಿದ್ದು ಈಗಲೋ, ಆಗಲೋ ಬೀಳುವಂತಿವೆ. ಹೊಸ ಬಡಾವಣೆಗಳಲ್ಲಿ ಬೀದಿ ದೀಪಗಳೇ ಇಲ್ಲ. ಪರಿಣಾಮ ಇಲ್ಲಿನ ನಿವಾಸಿಗಳ ಪಾಡು ಹೇಳುತೀರದಂತಾಗಿದೆ. ಕೆಲಸ ಕಾರ್ಯಗಳನ್ನು ಮುಗಿಸಿ ಮನೆಗೆ ಹೋಗುವವರು ಕತ್ತಲಲ್ಲೇ ಸಂಚರಿಸಬೇಕಾಗಿದೆ.
ನಗರಸಭೆ ಅಥವಾ ಸಂಬಂಧಿಸಿದ ಪ್ರಾಧಿಕಾರ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ನೀಡುವಾಗ ಬೀದಿದೀಪಗಳು ಸೇರಿದಂತೆ ಮೂಲಸೌಕರ್ಯಗಳು ಇವೆಯೇ ಎಂದು ಪರಿಶೀಲಿಸಿ ಅನುಮತಿ ನೀಡಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಅಕ್ರಮವಾಗಿ ಅನುಮತಿ ನೀಡಿರುವುದರಿಂದ ಹೊಸ ಬಡಾವಣೆಗಳು ಕಗ್ಗತ್ತಲಿನಲ್ಲಿವೆ.ಸಮಸ್ಯೆ ಬಗೆಹರಿಯದಿದ್ದರೆ ನಗರಸಭೆ ಮುಂದೆ ನಿವಾಸಿಗಳೆಲ್ಲ ಒಟ್ಟಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ ಹೊಸ ಬಡಾವಣೆ ನಿವಾಸಿ ಮಹಮ್ಮದ್ ಮತಿನ್.
ಗುಂಡ್ಲುಪೇಟೆ ಪಟ್ಟಣದಲ್ಲಿ ಕೇರಳ ಹಾಗೂ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತದೆ. ತಾಲ್ಲೂಕು ಕೇಂದ್ರ ಗುಂಡ್ಲುಪೇಟೆ ಪಟ್ಟಣದಲ್ಲಿ ಸಂಜೆಯಾಗುತ್ತಿದ್ದಂತೆ ಕತ್ತಲು ಆವರಿಸುತ್ತದೆ. ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಳವಡಿಕೆ ಮಾಡಿರುವ ವಿದ್ಯುತ್ ದೀಪಗಳು ಕೆಟ್ಟು ನಿಂತು ಬಹಳ ಸಮಯವಾಗಿದೆ. ರಾತ್ರಿಯ ಹೊತ್ತು ವಾಹನಗಳ ಬೆಳಕಿನಲ್ಲಿ ಸಾರ್ವಜನಿಕರು ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ. ಚಾಮರಾಜನಗರ -ಸುಲ್ತಾನ್ ಬತ್ತೆರಿ ರಸ್ತೆ ಹಾಗೂ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ವಿಭಜಕಗಳಲ್ಲಿ ಅಳವಡಿಸಿರುವ ದೀಪಗಳು ಸರಿಯಾಗಿ ಉರಿಯುತ್ತಿಲ್ಲ.
ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಹಾಕಿರುವ ಬಹುತೇಕ ಹೈಮಾಸ್ಟ್ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಲೆಡ್ ಬಲ್ಬ್ ಬಳಕೆ ಮಾಡಿ ದೀಪ ಉರಿಸಲಾಗುತ್ತಿದೆ. ಹೈ ಮಾಸ್ಟ್ ವಿದ್ಯುತ್ ದೀಪಗಳ ನಿರ್ವಹಣೆ ದುಬಾರಿ ಕಾರಣವೊಡ್ಡಿ ಸರಿಯಾಗಿ ನಿರ್ವಹಣೆ ನಡೆಯುತ್ತಿಲ್ಲ. ಬಹುತೇಕ ಬಡಾವಣೆಗಳಲ್ಲಿ ಬೀದಿ ದೀಪಗಳ ಕೊರತೆ ಕಾಡಿದೆ.
ಯಳಂದೂರು ಬಸ್ ನಿಲ್ದಾಣದ ಸಮೀಪ ಅಳವಡಿಸಿರುವ ಹೈಮಾಸ್ಟ್ ದೀಪಗಳು ವರ್ಷದಿಂದ ಬೆಳಕು ಬೀರುತ್ತಿಲ್ಲ. ಕತ್ತಲೆಯಲ್ಲಿ ಸವಾರರು ಹಾಗೂ ಸಾರ್ವಜನಿಕರು ಸಂಚರಿಸಬೇಕಿದೆ.
ಪೂರಕ ಮಾಹಿತಿ: ಅವಿನ್ ಪ್ರಕಾಶ್ ವಿ, ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ, ಮಹದೇವ್ ಹೆಗ್ಗವಾಡಿಪುರ
ಕೊಳ್ಳೇಗಾಲ ನಗರಸಭೆಯಲ್ಲಿ ಬೀದಿ ದೀಪಗಳ ಕೊರತೆ ಇದೆ. ಹೆಸರಿಗೆ ಮಾತ್ರ ನಗರಸಭೆಯಾದರೂ ಕುಗ್ರಾಮಕ್ಕಿಂತಲೂ ಕಡೆಯಾದ ವ್ಯವಸ್ಥೆ ಇದೆ. ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಬೇಕು.
– ವಿನಯ್ ಕೊಳ್ಳೇಗಾಲ
ಕೊಳ್ಳೇಗಾಲ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲೂ ಬೀದಿ ದೀಪಗಳ ಸಮಸ್ಯೆ ಇದೆ. ಮುಖ್ಯ ಜಾಗಗಳ ಹೊರತಾಗಿ ಬೇರೆಲ್ಲೂ ಬೀದಿದೀಪಗಳು ಕಾಣುವುದಿಲ್ಲ. ಹಲವು ಬಾರಿ ಪಂಚಾಯತಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸ್ಪಂದನೆ ದೊರೆತಿಲ್ಲ.
–ಶಿವಕುಮಾರ್ ಕೆಂಪನಪಾಳ್ಯ
ಗುಂಡ್ಲುಪೇಟೆಯಲ್ಲಿ ರಾತ್ರಿಯ ವೇಳೆ ಬೆಳಕಿಲ್ಲದೆ ಅನೇಕರು ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ಪುರಸಭೆ ಬಜೆಟ್‌ನಲ್ಲಿ ಬೀದಿ ದೀಪಗಳ ನಿರ್ವಹಣೆಗೆ ಹಣ ಮೀಸಲಿಟ್ಟರೂ ನಿರ್ವಹಣೆ ಕೊರತೆಯಿಂದ ದೀಪಗಳು ಬೆಳಗುತ್ತಿಲ್ಲ. ವೆಂಕಟೇಶ್ ಸ್ಥಳೀಯ ಗುಂಡ್ಲುಪೇಟೆಯ ಮೇಲೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿರುವ ಬೀದಿದೀಪಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಿರ್ವಹಣೆ ಮಾಡಬೇಕು.
–ವಸಂತಕುಮಾರಿ ಪುರಸಭೆ ಮುಖ್ಯಾಧಿಕಾರಿ
ಸಂತೇಮರಹಳ್ಳಿಯ ಕುದೇರು ರಸ್ತೆಯಲ್ಲಿರುವ ಕಾವಿ ಬಸವೇಶ್ವರ (ರಾಘಪ್ಪ) ಬಡಾವಣೆಗೆ ಮೂಲಸೌಕರ್ಯಗಳಿಲ್ಲ. ಬೀದಿ ದೀಪಗಳ ವ್ಯವಸ್ಥೆ ಇಲ್ಲದೆ ರಾತ್ರಿ ಸಂಚಾರ ದುಸ್ತರವಾಗಿದೆ.
–ಶಿವಕುಮಾರ್ ನಿವಾಸಿ ಯಳಂದೂರು
ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಅಳವಡಿಸಿರುವ ಮಿನಿ ಹೈಮಾಸ್ಟ್ ದೀಪಗಳು ಹುರಿಯುತ್ತಿಲ್ಲ. ಬಸ್ ನಿಲ್ದಾಣ ಮತ್ತು ಜನದಟ್ಟಣೆ ಹೆಚ್ಚಿರುವ ಕಡೆ ಹೆಚ್ಚಿನ ಪ್ರಕಾಶ ಬೀರುವ ದೀಪಗಳನ್ನು ಅಳವಡಿಸಲಿ.
– ಶಾಜಿದ್ ಯಳಂದೂರು ಪಟ್ಟಣ
ಚಾಮರಾಜನಗರದ ಎಲ್ಲ ಬೀದಿದೀಪಗಳನ್ನು ಎಲ್‌ಇಡಿ ದೀಪಗಳಾಗಿ ಮಾರ್ಪಡಿಬೇಕು ಎಂಬ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ನಗರದ ಎಲ್ಲ ಬೀದಿದೀಪಗಳನ್ನು ಬದಲಿಸಿ ಹೆಚ್ಚು ಬೆಳಕು ಹೊರಸೂಸುವ ಎಲ್‌ಇಡಿ ದೀಪಗಳನ್ನು ಅಳವಡಿಸುವ ಯೋಜನೆ ಅನುಷ್ಠಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಅನುಮೋದನೆ ನೀಡಿದ್ದು ಶೀಘ್ರ ಅನುಷ್ಠಾನಗೊಳ್ಳಲಿದೆ. ಪಿಪಿಪಿ ಮಾದರಿಯ ಈ ಯೋಜನೆಯಡಿ ಅಗತ್ಯವಿರುವೆಡೆ ಎಲ್ಲೆಡೆ ಎಲ್‌ಇಡಿ ಬೀದಿದೀಪಗಳನ್ನ ಹಾಕಲಾಗುವುದು. ಹೆದ್ದಾರಿಯಲ್ಲಿ ನನೆಗುದಿಗೆ ಬಿದ್ದಿರುವ ಬೀದಿದೀಪಗಳ ಅಳವಡಿಕೆಯೂ ಶೀಘ್ರ ಆರಂಭವಾಗಲಿದೆ.ರಾಮದಾಸ್ ನಗರಸಭೆ ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.