ಚಾಮರಾಜನಗರ: ಶುಕ್ರವಾರ ನಡೆದ ಎಸ್ಸೆಸ್ಸೆಲ್ಸಿ ಹಿಂದಿ ಭಾಷಾ ಪರೀಕ್ಷೆಯಲ್ಲಿ (ಮೂರನೇ ಭಾಷೆ) ಯಳಂದೂರು ಪಟ್ಟಣದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯೊಬ್ಬಳು ನಕಲು ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾಳೆ.
ಮೈಸೂರಿನ ಶಿಕ್ಷಣ ಶಿಕ್ಷಕ ವಿದ್ಯಾಲಯದ (ಸಿಟಿಇ) ಪ್ರಾಂಶುಪಾಲರಾದ ಗೀತಾಂಬ ಅವರು ತಪಾಸಣೆಗಾಗಿ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಾಲ್ಲೂಕಿನ ಪ್ರೌಢಶಾಲೆಯೊಂದರ ವಿದ್ಯಾರ್ಥಿನಿ ಪಠ್ಯಪುಸ್ತಕ ಹಿಡಿದುಕೊಂಡು ಪರೀಕ್ಷೆ ಬರೆಯುತ್ತಿದ್ದನ್ನು ಗಮನಿಸಿದ್ದಾರೆ.
‘ಈ ಸಂದರ್ಭದಲ್ಲಿ ಪರೀಕ್ಷಾ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡ ಅವರು, ವಿದ್ಯಾರ್ಥಿನಿಯ ಉತ್ತರ ಪತ್ರಿಕೆಯಲ್ಲಿ ನಕಲು ಮಾಡಲಾಗಿದೆ ಎಂದು ಉಲ್ಲೇಖಿಸಿ, ಪರೀಕ್ಷೆ ಬರೆಯಲು ಅವಕಾಶ ಕೊಡಲಿಲ್ಲ’ ಎಂದು ಖಚಿತ ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.
ಈ ಬೆಳವಣಿಗೆಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ದೃಢಪಡಿಸಿಲ್ಲ. ಆದರೆ, ವಿಷಯ ಗೊತ್ತಾಗುತ್ತಿದ್ದಂತೆಯೇ, ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ಅವರು ಗೀತಾಂಬ ಅವರಿಗೆ ಕರೆ ಮಾಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೇ, ವಿದ್ಯಾರ್ಥಿನಿಗೆ ಮುಂದಿನ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಕ್ರಮ ವಹಿಸುವಂತೆ ಕೇಳಿಕೊಂಡಿದ್ದಾರೆ.
ಇದನ್ನು ಸ್ವತಃ ಶ್ರೀಕಂಠೇಗೌಡ ಅವರು ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.
ಅಲ್ಲಗಳೆದ ಅಧಿಕಾರಿಗಳು: ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎನ್.ಮಂಜುನಾಥ್ ಅವರ ಕರೆ ಮಾಡಿದಾಗ, ‘ಅಂತಹದ್ದೇನು ನಡೆದಿಲ್ಲ. ವಿಚಾರಿಸಿ ತಿಳಿಸುತ್ತೇನೆ’ ಎಂದವರು ಮತ್ತೆ ಸಂಪರ್ಕಕ್ಕೆ ಸಿಗಲಿಲ್ಲ.
ಯಳಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜ್ ಅವರಿಗೆ ಕರೆ ಮಾಡಿದಾಗ, ‘ನಕಲು ಮಾಡಿದ ಪ್ರಕರಣ ನಡೆದಿಲ್ಲ’ ಎಂದು ಮಾಹಿತಿ ನೀಡಿದರು.
ಗೀತಾಂಬ ಅವರನ್ನು ಸಂಪರ್ಕಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.