ADVERTISEMENT

ಜಿಲ್ಲಾಧಿಕಾರಿ ಕರ್ತವ್ಯ ತಿಳಿದ ವಿದ್ಯಾರ್ಥಿನಿ

ಕೊಳ್ಳೇಗಾಲದ ಅಗ್ನೀಶ್‌ ಸಾರಗೆ ಅಪರೂಪದ ಅವಕಾಶ, ಸಭೆಗಳಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 14:11 IST
Last Updated 15 ಸೆಪ್ಟೆಂಬರ್ 2022, 14:11 IST
ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಜೊತೆ ಅಗ್ನೀಶ್‌ ಸಾರ
ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಜೊತೆ ಅಗ್ನೀಶ್‌ ಸಾರ   

ಚಾಮರಾಜನಗರ: ಕೊಳ್ಳೇಗಾಲದ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಜೆ.ಅಗ್ನೀಶ್‌ ಸಾರ ಅವರಿಗೆ ಗುರುವಾರ ಅಪೂರ್ವವಾದ ಅವಕಾಶವೊಂದು ಸಿಕ್ಕಿತ್ತು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರೊಂದಿಗೆ ಇಡೀ ದಿನ ಇದ್ದು, ಅವರ ಕರ್ತವ್ಯಗಳನ್ನು ತಿಳಿಯುವ ಅವಕಾಶ.

ಬೆಳಿಗ್ಗೆಯಿಂದ ಸಂಜೆಯವರೆಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದ ಸಾರ, ಜಿಲ್ಲಾಧಿಕಾರಿಯವರ ಕಾರ್ಯ ವಿಧಾನಗಳನ್ನು ತಿಳಿದುಕೊಂಡರು. ಚಾರುಲತಾ ಸೋಮಲ್‌ ನಡೆಸಿದ ಸಭೆಗಳಲ್ಲಿ, ಅವರ ಪಕ್ಕದಲ್ಲೇ ಕುಳಿತುಕೊಂಡು ಗಮನಿಸಿದರು.

ವಿಶ್ವ ಯುವ ಕೌಶಲ ದಿನಾಚರಣೆ ಅಂಗವಾಗಿ ನಡೆಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಅಗ್ನೀಶ್‌ ಸಾರ ಪಡೆದಿದ್ದರು. ಹಾಗಾಗಿ, ಜಿಲ್ಲಾಧಿಕಾರಿ ಅವರೊಂದಿಗೆ ಇದ್ದು, ಜಿಲ್ಲಾಡಳಿತದ ಕಾರ್ಯ ವೈಖರಿ ವೀಕ್ಷಣೆಗೆ ಅವಕಾಶ ಸಿಕ್ಕಿತ್ತು. ಜಿಲ್ಲಾ ಕೌಶಲ ಅಭಿವೃದ್ದಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಈ ಕಾರ್ಯಕ್ರಮ ರೂಪಿಸಿತ್ತು.

ADVERTISEMENT

ಗುರುವಾರ ಬೆಳಿಗ್ಗೆ ತಂದೆ ಜೋಸೆಫ್‌ ಅಲೆಕ್ಸಾಂಡರ್‌ ಹಾಗೂ ತಾಯಿ ಶರ್ಮಿಳಾ ಅವರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದ ಸಾರ ಅವರನ್ನು ಚಾರುಲತಾ ಸೋಮಲ್‌ ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

‘ಮುಂದೆ ಏನಾಗಬೇಕೆಂದು ಬಯಸಿದ್ದೀರಾ’ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದಾಗ, ಅಗ್ನೀಶ್ ಸಾರ, ‘ಚಾರ್ಟೆಡ್ ಅಕೌಂಟೆಂಟ್ ಆಗಬೇಕು ಎಂದುಕೊಂಡಿದ್ದೇನೆ’ ಎಂದರು.

ಆ ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ಭವನ ನಿರ್ವಹಣಾ ಸಮಿತಿ, ಗಿರಿಜನರ ಶೈಕ್ಷಣಿಕ ಅಭಿವೃದ್ದಿ ಸಂಬಂಧ ಸಭೆ, ದಸರಾ, ಮಹದೇ‌ಶ್ವರ ಬೆಟ್ಟ ಮಹಾಲಯ ಅಮವಾಸ್ಯೆ, ದೀಪಾವಳಿ ಜಾತ್ರೆ ಪೂರ್ವಭಾವಿ ಸಭೆ ಸೇರಿದಂತೆ ಇತರೆ ಸಭೆಗಳಲ್ಲಿ ಅಗ್ನೀಶ್ ಅವರು ಜಿಲ್ಲಾಧಿಕಾರಿಗಳ ಪಕ್ಕದಲ್ಲೇ ಕುಳಿತು ವೀಕ್ಷಿಸಿದರು. ಸಭೆ ಸಂದರ್ಭದಲ್ಲಿ ಟಿಪ್ಪಣಿಯನ್ನೂ ಮಾಡಿಕೊಳ್ಳುತ್ತಿದ್ದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಚಾರುಲತಾ ಅವರ ಜೊತೆಗಿದ್ದು, ಹತ್ತಿರದಿಂದ ಆಡಳಿತ ಕಾರ್ಯಗಳನ್ನು ವೀಕ್ಷಿಸಿದರು. ಸಭೆಗಳ ಬಳಿಕ ಸಂಜೆ ವಿದ್ಯಾರ್ಥಿನಿಯನ್ನು ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಆತ್ಮೀಯವಾಗಿ ಬೀಳ್ಕೊಟ್ಟರು. ‘ಮುಂದಿನ ಭವಿಷ್ಯ ಉಜ್ವಲವಾಗಲಿ’ ಎಂದು ಶುಭ ಹಾರೈಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌.ಸುಂದರ್‌ರಾಜ್‌, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ಕೌಶಲ ಅಧಿಕಾರಿ ಮಹಮ್ಮದ್‌ ಅಕ್ಬರ್‌, ಬಿಸಿಯೂಟ ಶಿಕ್ಷಣಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಗುರುಲಿಂಗಯ್ಯ, ಅಗ್ನೀಶ್‌ ಸಾರ ತಾಯಿ ಶರ್ಮಿಳಾ ಇತರರು ಇದ್ದರು.

ಶ್ರೇಷ್ಠ ಅವಕಾಶ: ಅಗ್ನೀಶ್‌ ಸಾರ

ಜಿಲ್ಲಾಡಳಿತ ನೀಡಿದ ಬೀಳ್ಕೊಡುಗೆ ಸ್ವೀಕರಿಸಿದ ನಂತರ ಮಾತನಾಡಿದ ಅಗ್ನೀಶ್‌ ಸಾರ, ‘ಇದು ನನಗೆ ಸಿಕ್ಕಿದ ಶ್ರೇಷ್ಠವಾದ ಅವಕಾಶ.ಜಿಲ್ಲಾಧಿಕಾರಿ ಅವರೊಂದಿಗೆ ಇಡೀ ದಿನ ಇದ್ದು, ಅವರ ಕರ್ತವ್ಯ, ಚಟುವಟಿಕೆಗಳ ಭಾಗವಾಗಿರುವುದಕ್ಕೆ ಖುಷಿಯಾಗುತ್ತಿದೆ. ಕೌಶಲ ಅಭಿವೃದ್ಧಿ ಇಲಾಖೆಗೆ ಧನ್ಯವಾದ ಹೇಳಬೇಕು. ನಾನು ಇಲ್ಲಿಗೆ ಬರುವುದಕ್ಕೆ ನನಗೆ ಬೆಂಬಲ ನೀಡಿದ ಪೋಷಕರು ಕೂಡ ಕಾರಣ’ ಎಂದರು.

‘ಜಿಲ್ಲಾಧಿಕಾರಿ ಅವರ ಕಾರ್ಯವಿಧಾನಗಳು ಹೇಗಿರುತ್ತವೆ? ಒತ್ತಡ ಎಷ್ಟಿರುತ್ತದೆ? ಅವುಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಬಗ್ಗೆ ತಿಳಿಯಿತು. ಕೆಲಸದ ನಡುವೆಯೂ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಅವುಗಳನ್ನ ಬಗೆಹರಿಸುವುದನ್ನು ನೋಡುವಾಗ, ನಾವೂ ಅದೇ ರೀತಿಯಲ್ಲಿ ಇರಬೇಕು ಎಂದು ಅನಿಸಿತು’ ಎಂದರು.

ಸಾರ ತಂದೆ ಜೋಸೆಫ್‌ ಅಲೆಕ್ಸಾಂಡರ್‌ ಮಾತನಾಡಿ, ‘ಜಿಲ್ಲಾಧಿಕಾರಿ ಅವರನ್ನು ಹಲವು ಕಾರ್ಯಕ್ರಮಗಳಲ್ಲಿ ನೋಡಿದ್ದೇವೆ. ಇವತ್ತು ಖುದ್ದಾಗಿ ಹತ್ತಿರದಿಂದ ಅವರ ಕಾರ್ಯ ವೈಖರಿಯನ್ನು ನೋಡಿ ಸ್ಫೂರ್ತಿಗೊಂಡೆವು. ಅವರೊಂದಿಗೆ ಒಂದು ದಿನ ಕಳೆಯುವುದಕ್ಕೆ ಮಗಳಿಗೆ ಅವಕಾಶ ಸಿಕ್ಕಿರುವುದು, ಆಕೆ ಉನ್ನತ ಸ್ಥಾನಕ್ಕೆ ಬರುವುದಕ್ಕೆ ಸ್ಫೂರ್ತಿಯಾಗಲಿದೆ. ಇದು ಆಕೆಯ ಜೀವನದ ತಿರುವು ಆಗಿರುವ ಸಾಧ್ಯತೆಯೂ ಇದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಜಿಲ್ಲಾಡಳಿತಕ್ಕೆ ಧನ್ಯವಾದ ಅರ್ಪಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.