ಸಂತೇಮರಹಳ್ಳಿ: ಪ್ರತಿದಿನ ಮನೆಗಳಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳು ಎಲ್ಲಿಂದ ಸರಬರಾಜಾಗುತ್ತದೆ, ಹೇಗೆ ತಯಾರಾಗುತ್ತವೆ ಎಂಬ ಮಕ್ಕಳ ಕುತೂಹಲವನ್ನು ತಣಿಸುವ ನಿಟ್ಟಿನಲ್ಲಿ ಯಳಂದೂರು ಎಸ್‌ಡಿವಿಎಸ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳನ್ನು ಪಠ್ಯೇತರ ಶೈಕ್ಷಣಿಕ ಪ್ರವಾಸದ ಭಾಗವಾಗಿ ಕುದೇರು ಗ್ರಾಮದಲ್ಲಿರುವ ಹಾಲು ಉತ್ಪಾದಕ ಒಕ್ಕೂಟಕ್ಕೆ (ಚಾಮೂಲ್) ಕರೆದೊಯ್ಯಲಾಯಿತು.
ವಿದ್ಯಾರ್ಥಿಗಳು ಚಾಮೂಲ್ ಪ್ರವೇಶಿಸುತ್ತಿದ್ದಂತೆ ಚಕಿತಗೊಂಡರು. ಕಾರ್ಖಾನೆಯೊಂದಕ್ಕೆ ಭೇಟಿ ನೀಡಿದ ಅನುಭವ ಅವರದ್ದಾಗಿತ್ತು. ಚಾಮೂಲ್‌ನಲ್ಲಿದ್ದ ತಂತ್ರಜ್ಞರು ವಿದ್ಯಾರ್ಥಿಗಳನ್ನು ಹೊಸತೊಂದು ಲೋಕಕ್ಕೆ ಕರೆದೊಯ್ದು ಹಾಲಿನ ಉತ್ಪನ್ನಗಳು ತಯಾರಾಗುವ ಬಗೆಯನ್ನು ವಿವರಿಸಿದರು
ಹಾಲು ಉತ್ಪಾದಕ ಘಟಕಗಳು, ಬಹು ಎತ್ತರದ ಟ್ಯಾಂಕರ್‌ಗಳು, ರಾಶಿ ಹಾಲಿನ ಪ್ಯಾಕೆಟ್ ಹಾಗೂ ಉತ್ಪನ್ನಗಳನ್ನು ನೋಡಿದ ವಿದ್ಯಾರ್ಥಿಗಳು ಪುಳಕಿತರಾದರು. ಅಲ್ಲಿನ ಪ್ರತಿಯೊಂದು ಯಂತ್ರ, ತಾಂತ್ರಿಕತೆ ಸೇರಿದಂತೆ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆಯುವುದರ ಜತೆಗೆ ಕೈಯಲ್ಲಿ ಪೆನ್ನು ಪುಸ್ತಕ ಹಿಡಿದು ಬರೆದುಕೊಂಡರು ವಿದ್ಯಾರ್ಥಿಗಳು.
ಡೇರಿಯಲ್ಲಿ ಪ್ರತಿ ವಸ್ತು, ಯಂತ್ರಗಳನ್ನು ನೋಡುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಕುತೂಹಲ ಹೆಚ್ಚಾಗುತಿತ್ತು. ಹಾಲು ಪ್ಯಾಕೆಟ್ ರೂಪದಲ್ಲಿ ಮನೆಗೆ ಬರುವುದನ್ನಷ್ಟೆ ನೋಡಿದ ಮಕ್ಕಳು ಡೇರಿಗೆ ಹಾಲು ಎಲ್ಲಿಂದ ಪೂರೈಕೆಯಾಗುತ್ತದೆ, ಬಂದ ನಂತರ ಹೇಗೆ ಪ್ಯಾಕಿಂಗ್ ಮಾಡಲಾಗುತ್ತದೆ. ಬಳಿಕ ಮಾರುಕಟ್ಟೆಗೆ ಹೇಗೆ ವಿತರಣೆಯಾಗುತ್ತದೆ ಎಂಬ ಮಾಹಿತಿ ಪಡೆದುಕೊಂಡು ಸಂಭ್ರಮಿಸಿದರು.
ಗ್ರಾಮೀಣ ಪ್ರದೇಶಗಳಿಂದ ರೈತರಿಂದ ಪ್ರತಿದಿನ ಹಾಲನ್ನು ತಂದು ಶೇಖರಿಸಿ ಯಂತ್ರಗಳ ಮೂಲಕ ತಂತ್ರಜ್ಞಾನದ ಸಹಾಯದಿಂದ ಬಗೆಬಗೆಯ ಹಾಲಿನ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ ಎಂಬುದನ್ನು ಮಕ್ಕಳಿಗೆ ವಿವರಿಸಿದ ಅಲ್ಲಿನ ಸಿಬ್ಬಂದಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.
ಹಾಲಿನಿಂದ ಮೊಸರು, ಮಜ್ಜಿಗೆ, ಬೆಣ್ಣೆ, ಹಾಲಿನ ಪೌಡರ್ ಹಾಗೂ ಸಿಹಿ ತಿಂಡಿ ತಯಾರಾಗುವ ಬಗೆಯನ್ನು ನೋಡಿ ಮಕ್ಕಳು ಖುಷಿಪಟ್ಟರು.
ಒಂದು ಲೀಟರ್, ಅರ್ಧ ಲೀಟರ್ ಹಾಗೂ ಕಾಲು ಲೀಟರ್ ಪ್ಯಾಕೇಟ್‌ಗಳು ತಯಾರಾಗುವ ಪ್ರಕ್ರಿಯೆಯನ್ನು ಕುತೂಹಲದಿಂದ ವೀಕ್ಷಿಸಿದರು.
ನಂದಿನಿ ಹಾಗೂ ಸಮೃದ್ಧಿ ಹೆಸರಿನ ಹಾಲಿನ ಪ್ಯಾಕೆಟ್ 17 ಗಂಟೆಯವರೆಗೂ ಇಟ್ಟುಕೊಳ್ಳಬಹುದು. ಗುಡ್‌ಲೈಫ್ ಹೆಸರಿನಡಿ ತಯಾರಿಸುವ ಹಾಲನ್ನು 6 ತಿಂಗಳಿನವರೆಗೂ ಇಡಬಹುದು ಎಂಬ ಮಾಹಿತಿಯನ್ನು ಚಾಮೂಲ್ ತಂತ್ರಜ್ಞರು ಮಕ್ಕಳಿಗೆ ನೀಡಿದರು.
ಪೇಡಾ, ಉಲ್ಲಾಸ್ ಗುಲ್ಲಾ, ಲಸ್ಸಿ ಹಾಗೂ ಸಿಹಿ ಉತ್ಪನ್ನಗಳನ್ನು ನಂದಿನಿ ಹಾಲಿನ ಕೇಂದ್ರ ಮತ್ತು ಬೇಕರಿಗಳಲ್ಲಿ ಖರೀದಿಸುವುದನ್ನು ನೋಡಿದ್ದ ವಿದ್ಯಾರ್ಥಿಗಳು ತಯಾರಾಗುವ ಬಗೆಯನ್ನು ಕಂಡುಕೊಂಡ ವಿದ್ಯಾರ್ಥಿಗಳು ಶಾಲೆಗಳಿಗೆ ಪೂರೈಕೆಯಾಗುವ ಹಾಲಿನ ಪೌಡರ್ ಇಲ್ಲಿಂದಲೇ ಪೂರೈಕೆಯಾಗುತ್ತದೆ ಎಂಬುದನ್ನು ತಿಳಿದು ಕುತೂಹಲಕ್ಕೊಳಗಾದರು.
ಹಾಲಿನಿಂದ ಮೊಸರು, ಬೆಣ್ಣೆ, ತುಪ್ಪವಾಗುವ ಬಗೆ ತಿಳಿದ ಮಕ್ಕಳು ಸಿಹಿ ತಿಂಡಿಗಳ ತಯಾರಿಕೆ ಪ್ರಾತ್ಯಕ್ಷಿಕೆ ನೀಡಿದ ಸಿಬ್ಬಂದಿ ಹಲವು ಮಾದರಿಯ ಹಾಲುಗಳ ಬಗ್ಗೆ ಮಾಹಿತಿ
ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಕಚ್ಚಾ ವಸ್ತುಗಳನ್ನು ಸಿದ್ದ ವಸ್ತುಗಳನ್ನಾಗಿ ತಯಾರಿಸುವ ವಿಧಾನಗಳನ್ನು ಮಕ್ಕಳಿಗೆ ತಿಳಿಸಲಾಯಿತು.–ನವ್ಯ ಚಾಮೂಲ್ ಕೆಮಿಸ್ಟ್
ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯ ಭಾಗವಾಗಿ ಚಾಮೂಲ್ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆಧುನಿಕ ತಂತ್ರಜ್ಞಾನ ಮನುಷ್ಯರಿಗೆ ಯಾವ ರೀತಿ ಸಹಾಯ ಮಾಡುತ್ತದೆ ಎಂಬುದನ್ನು ಮನದಟ್ಟು ಮಾಡಿಸಲಾಯಿತು.–ನೀಲಾಂಬರಿ ಶಿಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.