ADVERTISEMENT

ಲೋಕಾಯುಕ್ತ ಬಲಪಡಿಸಲು ಕಬ್ಬು ಬೆಳೆಗಾರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 11:09 IST
Last Updated 19 ಆಗಸ್ಟ್ 2022, 11:09 IST
ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವಂತೆ  ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು
ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವಂತೆ  ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ರಾಜ್ಯದಲ್ಲಿ ಎಸಿಬಿ ರದ್ದು ಮಾಡಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಭುವನೇಶ್ವರಿ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು ರಸ್ತೆ ತಡೆ ನಡೆಸಿದರು. ‘ಎಸಿಬಿ ರದ್ದಾಗಲಿ, ಲೋಕಾಯುಕ್ತ ಜಾರಿಯಾಗಲಿ’ ಎಂಬ ಘೋಷಣೆ ಕೂಗಿದರು.

ಕಬ್ಬು ಬೆಳೆಗಾರರ ಸಂಘದ ಮೈಸೂರು– ಚಾಮರಾಜನಗರ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ‘ಹೈಕೋರ್ಟ್‌ ಎಸಿಬಿ ರದ್ದು ಮಾಡಬೇಕು ಎಂದು ಆದೇಶಿಸಿದೆ. 1971ರಲ್ಲಿ ಡಿ.ದೇವರಾಜ ಅರಸು ಅವರು ಈ ರಾಜ್ಯ, ದೇಶಕ್ಕೆ ಮಾದರಿಯಾಗಿ ಒಂದು ಲೋಕಾಯುಕ್ತ ಬೇಕು ಅಂಥಾ ಹೇಳಿ ರಚನೆ ಮಾಡಿದರು. ರಾಮಕೃಷ್ಣ ಹೆಗಡೆ ಅವರು 1984ರಲ್ಲಿ ಲೋಕಾಯುಕ್ತವನ್ನು ಬಹಳಷ್ಟು ಗಟ್ಟಿಗೊಳಿಸಿ ಸ್ವಾತಂತ್ರ್ಯ ಕಾನೂನು ಕೊಟ್ಟರು’ ಎಂದರು.

ADVERTISEMENT

‘ಸಿದ್ದರಾಮಯ್ಯ ಅವರು ಸರ್ಕಾರದಲ್ಲಿ ಬಹಳಷ್ಟು ಪ್ರಕರಣದಲ್ಲಿ ಶಾಸಕರು, ಮಂತ್ರಿಗಳು, ವಿಧಾನ ಪರಿಷತ್ ಸದಸ್ಯರು, ಬಹಳಷ್ಟು ಪ್ರಭಾವಿಯಾದ ಅಧಿಕಾರಿಗಳ ಮೇಲೆ ಪ್ರಕರಣಗಳು ದಾಖಲು ಆಗಲು ಪ್ರಾರಂಭವಾದ ಮೇಲೆ ಭ್ರಷ್ಟರನ್ನು ರಕ್ಷಣೆ ಮಾಡಲು ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಎಸಿಬಿಯನ್ನು ಸ್ಥಾಪನೆ ಮಾಡಿತ್ತು’ ಎಂದು ದೂರಿದರು.

ಹೈಕೋರ್ಟ್ ನೀಡಿರುವ ತೀರ್ಪಿನಂತೆ ಭ್ರಷ್ಟಾಷಾರ ನಿಗ್ರಹ ದಳವನ್ನು ರದ್ದು ಮಾಡಬೇಕು. ಲೋಕಾಯುಕ್ತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಬಿಜೆಪಿ ಸರ್ಕಾರ ಎಸಿಬಿ ರದ್ದು ಮಾಡಲು ಕ್ರಮ ಕೈಗೊಳ್ಳದಿದ್ದರೆ, ಈ ಸರ್ಕಾರ ಭ್ರಷ್ಟರಿಗೆ ಮಣೆ ಹಾಕಿದಂತಾಗುತ್ತದೆ. ಲೋಕಾಯುಕ್ತವನ್ನು ಬಲಪಡಿಸದಿದ್ದರೆ ರಾಜ್ಯದಾದ್ಯಂತ ರೈತರು ಉಗ್ರ ಹೋರಾಟ ನಡೆಸಲಿದ್ದಾರೆ’ ಎಂದು ಅವರು ಎಚ್ಚರಿಸಿದರು.

ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಪ್ರವೀಣ್ ಕುಮಾರ್, ನಂಜುಂಡನಾಯಕ, ಹಾಲಿನ ನಾಗರಾಜು, ನರ್ಸರಿ ಗುರುಪ್ರಸಾದ್, ಸತೀಶ್, ನಾಗೇಂದ್ರ, ನವೀನ್, ನಂಜಪ್ಪ, ಮಾದಪ್ಪ, ಅರಳೀಕಟ್ಟೆ ಪ್ರಜ್ವಲ್, ಮಹದೇವ, ಸಂಜು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.