ಯಳಂದೂರು: ತಾಲ್ಲೂಕಿನ ಕಬ್ಬಿನ ತಾಕುಗಳಲ್ಲಿ ಹೂವು ರಾರಾಜಿಸುತ್ತಿದೆ. ಡಿಸೆಂಬರಿಗೂ ಮೊದಲೇ ಕಬ್ಬಿನಲ್ಲಿ ಸೂಲಂಗಿ(ಹೂವು) ಅಬ್ಬರಿಸಿದೆ. ಇದು ಕಬ್ಬು ಬೆಳವಣಿಗೆಯನ್ನು ಮೂರು ತಿಂಗಳ ಮೊದಲೇ ತಗ್ಗಿಸಲಿದೆ. ಇದರಿಂದ ಕೃಷಿಕರಲ್ಲಿ ಇಳುವರಿ ಕುಸಿಯುವ ಆತಂಕವೂ ಕಾಡಿದೆ.
ಸೂಲಂಗಿ ಕಾಟದಿಂದ ಬೇಸತ್ತಿರುವ ಬೆಳೆಗಾರರು ಕಬ್ಬು ತೂಕ ಕಳೆದುಕೊಳ್ಳುವ ಮೊದಲೇ ಕಟಾವು ಮಾಡಿ, ಬೆಲ್ಲ ತಯಾರಿಸಿ ಮಾರುಕಟ್ಟೆಗೆ ಸಾಗಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ತಾಲ್ಲೂಕಿನಲ್ಲಿ 2, 500 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಸ್ಥಳೀಯ ಕಬ್ಬಿನ ಜೊತೆ ಕಬ್ಬನ್ನು ಹೊಸ ತಳಿಯ ಕಬ್ಬಿಗೂ ಆದ್ಯತೆ ನೀಡಲಾಗಿದೆ. ಮಳೆಯೂ ಉತ್ತಮವಾಗಿ ಬಂದಿದೆ. ಮಳೆ ಮತ್ತು ಕೊಳವೆ ಬಾವಿ ನೀರಾವರಿ ನಂಬಿಕೊಂಡು ವ್ಯವಸಾಯ ಮಾಡಲಾಗಿದೆ. ಕಟಾವಿಗೆ ಇನ್ನೂ 2ರಿಂದ3 ತಿಂಗಳು ಬಾಕಿ ಇರುವಾಗಲೇ ಕಬ್ಬು ತೂಕ ಕಳೆದುಕೊಳ್ಳವ ಆತಂಕ ಎದುರಾಗಿದೆ.
‘ಈ ಬಾರಿ ಮೂರು ತಿಂಗಳಿಂದ ಸತತ ಮಳೆಯಾಗಿ, ಗದ್ದೆಗಳಲ್ಲಿ ತೇವಾಂಶವೂ ಹೆಚ್ಚಿದೆ. ಶೀತ ಬಾಧೆಯಿಂದ ಗಿಡಗಳು ಬೆಳವಣಿಗೆ ವೇಗ ತಗ್ಗಿದೆ. ಜನವರಿಯಲ್ಲಿ ಕಟಾವು ಮಾಡಿ ಕೂಳೆ ಕಬ್ಬು ಉಳಿಸಿಕೊಂಡಿದ್ದೇವೆ. ಡಿಸೆಂಬರ್ ಅಂತ್ಯದಲ್ಲಿ ಕೊಯ್ಲು ಮಾಡಬೇಕಿತ್ತು. ಕಬ್ಬಿನಲ್ಲಿ ಸೂಲಂಗಿ ಬಂದಿರವುದರಿಂದ ಬಹುಬೇಗ ಆಲೆ ಮನೆಗೆ ಸಾಗಣೆ ಮಾಡಬೇಕಿದೆ. ಮೂರು ತಿಂಗಳ ಮೊದಲೇ ಕಟಾವು ಮಾಡಿದರೆ ಇಳುವರಿಯೂ ಕುಸಿಯಲಿದೆ’ ಎನ್ನುತ್ತಾರೆ ಅಂಬಳೆ ಕಬ್ಬು ಬೆಳೆಗಾರ ನಾಗೇಶ್.
‘ಹೊಸ ತಳಿಯ ಕಬ್ಬುಗಳಲ್ಲಿ ಸೂಲಂಗಿ ಅಷ್ಟಾಗಿ ಬರುವುದಿಲ್ಲ. ಕಬ್ಬು ಎತ್ತರವಾಗಿ. ಉತ್ತಮ ಇಳುವರಿಯೂ ಕೈಸೇರುತ್ತದೆ. ಕಬ್ಬು ಎತ್ತರ ಬೆಳೆಯುವುದರಿಂದ ತೂಕವೂ ಹೆಚ್ಚಾಗುತ್ತದೆ. ಇಂತಹ ಕಬ್ಬು ಆಲೆಮನೆ ಇಲ್ಲವೆ ಸಕ್ಕರೆ ಕಾರ್ಖಾನೆಯಲ್ಲಿ ಬಳಕೆಯಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬೇಸಾಯಗಾರರು ಸೂಲಂಗಿ ರಹಿತ ತಳಿಯ ಕಬ್ಬು ನೆಟ್ಟಿದ್ದಾರೆ. ಆದರೂ, ಹೂವು ಬರುವುದು ನಿಂತಿಲ್ಲ’ ಎಂದು ಹೊನ್ನೂರು ಮಹದೇವಶೆಟ್ಟಿ ಹೇಳಿದರು.
ಕಬ್ಬು ವಾರ್ಷಿಕ ಬೆಳೆ. ಸೂಲಂಗಿ ಬಂದಿರುವುದರಿಂದ ಏಳೆಂಟು ತಿಂಗಳಿಗೆ ಕಟಾವು ಮಾಡಬೇಕಿದೆ. ಇದರಿಂದ ಆಲೆಮನೆಗಳಿಗೆ ಬೇಡಿಕೆಯೂ ಹೆಚ್ಚಿದೆ. ತುಂತುರು ಮಳೆ ಆಗಾಗ ಕಾಡುವುದರಿಂದ ಬೆಲ್ಲದ ಉತ್ಪಾದನೆಯಲ್ಲೂ ಹಿನ್ನಡೆಯಾಗಿದೆ. ಈ ವರ್ಷ ಬೆಳೆ ಕೈಸೇರುವ ಹೊತ್ತಿನಲ್ಲಿ ಕಬ್ಬು ಹೂವು ಬಿಟ್ಟಿದೆ’ ಎನ್ನುತ್ತಾರೆ ಬೆಳೆಗಾರರು.
‘ಶೇ 30 ಇಳುವರಿ ಕುಸಿತ’
‘ತಾಲ್ಲೂಕಿನ ಹವಾಮಾನ ಕಬ್ಬು ಬೆಳೆಗೆ ಸೂಕ್ತವಾಗಿದೆ. ಮಳೆ ಪ್ರಮಾಣ 150 ರಿಂದ 200 ಸೆ.ಮೀ. ಸುರಿದಿದೆ. ಆರಂಭದಲ್ಲಿ ಉಷ್ಣಾಂಶವೂ ಹೆಚ್ಚಿದ್ದು ಬೆಳೆಗೆ ಪೂರಕವಾಗಿತ್ತು. ಸೂಲಂಗಿ ಬೆಳೆಯದ ಸಿಒ 13014ನ ಹೊಸ ತಳಿಯ ಕಬ್ಬನ್ನು ರೈತರಿಗೆ ಪರಿಚಯಿಸಲಾಗಿದೆ. ಆದರೆ ಈ ಬಾರಿ ಅಕ್ಟೋಬರ್ ವೇಳೆಗೆ ಶೇ 25 ರಷ್ಟು ಕಬ್ಬು ತಾಕಿನಲ್ಲಿ ಸೂಲಂಗಿ ಅರಳಿದೆ. ಕಬ್ಬಿನ ಬೆಳವಣಿಗೆ ವೇಗ ತಗ್ಗಲಿದೆ. ಇದರಿಂದ ಇಳುವರಿ ಪ್ರಮಾಣ ಶೇ 30 ಕುಸಿಯಲಿದೆ’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.