ADVERTISEMENT

ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನಿಗೆ 22 ತಿಂಗಳ ಬಳಿಕ ಪೂಜೆ

ಸುಳ್ವಾಡಿ: ಮೂರು ದಿನಗಳ ಕಾಲ ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳು, 24ರಿಂದ ಭಕ್ತರಿಗೆ ಪ್ರವೇಶ

ಬಿ.ಬಸವರಾಜು
Published 20 ಅಕ್ಟೋಬರ್ 2020, 19:41 IST
Last Updated 20 ಅಕ್ಟೋಬರ್ 2020, 19:41 IST
ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಮುಂಭಾಗ ಚಪ್ಪರ ಹಾಕುತ್ತಿರುವುದು
ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಮುಂಭಾಗ ಚಪ್ಪರ ಹಾಕುತ್ತಿರುವುದು   

ಹನೂರು: ವಿಷ ಪ್ರಸಾದ ದುರಂತದಿಂದಾಗಿ ಮುಚ್ಚಿದ್ದ ತಾಲ್ಲೂಕಿನ ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇವಾಲಯವನ್ನು 22 ತಿಂಗಳ ಬಳಿಕ ಬುಧವಾರ ತೆರೆಯಲಾಗುತ್ತಿದ್ದು, ಮಾರಮ್ಮನಿಗೆ ಮತ್ತೆ ಪೂಜೆ ಪುನಸ್ಕಾರ ಆರಂಭವಾಗಲಿದೆ.

ಧಾರ್ಮಿಕ ದತ್ತಿ ಇಲಾಖೆಯು ತನ್ನ ವಶಕ್ಕೆ ತೆಗೆದುಕೊಂಡಿರುವ ದೇವಾಲಯವನ್ನುಶನಿವಾರ (ಅ.24) ಮಧ್ಯಾಹ್ನದಿಂದ ದೇವಾಲಯವನ್ನು ಭಕ್ತರಿಗೆ ಮುಕ್ತಗೊಳಿಸಲಾಗುತ್ತಿದೆ. ಅದಕ್ಕೂ ಮೊದಲು ಇಲಾಖೆಯ ವತಿಯಿಂದ ಪೂಜೆ, ಹೋಮ– ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಬುಧವಾರದಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ.

2018ರ ಡಿಸೆಂಬರ್‌ 14ರಂದು ನಡೆದ ದೇವಾಲಯದ ಗೋಪುರದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಿದ್ಧ ರೈಸ್‌ಬಾತ್‌ನಲ್ಲಿ ವಿಷ ಬೆರೆಸಲಾಗಿತ್ತು. ಇದನ್ನು ತಿಂದಿದ್ದ ಭಕ್ತರ ಪೈಕಿ 17 ಮಂದಿ ಮೃತಪಟ್ಟು 110ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು.

ADVERTISEMENT

ದೇವಾಲಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಟ್ರಸ್ಟಿಗಳ ನಡುವಣ ವೈಮನಸ್ಸು ಹಾಗೂ ದೇವಾಲಯದ ಆಡಳಿತವನ್ನು ನಿಯಂತ್ರಣಕ್ಕೆ ಪಡೆವುದಕ್ಕಾಗಿ ಇನ್ನೊಂದು ತಂಡದ ಮೇಲೆ ಕೆಟ್ಟ ಹೆಸರು ತರಿಸುವ ಉದ್ದೇಶದಿಂದ ಪ್ರಸಾದಕ್ಕೆ ಕ್ರಿಮಿನಾಶಕ ಬೆರೆಸಲಾಗಿತ್ತು ಎಂಬ ಸಂಗತಿ ತನಿಖೆಯಿಂದ ತಿಳಿದು ಬಂದಿತ್ತು.

ಆರೋಪಿಗಳಾದ ಮಹದೇಶ್ವರ ಬೆಟ್ಟದ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹಾದೇವಸ್ವಾಮಿ, ಅಂಬಿಕಾ, ಮಾದೇಶ ಹಾಗೂ ದೊಡ್ಡಯ್ಯ ಅವರು ಇನ್ನೂ ಜೈಲಿನಲ್ಲಿದ್ದಾರೆ.

ಭಕ್ತರ ಹಾಗೂ ಜನಪ್ರತಿನಿಧಿಗಳಿಂದಒತ್ತಡ ಬಂದಿದ್ದರಿಂದ ಸರ್ಕಾರ ದೇವಾಲಯವನ್ನು 2019ರ ಏಪ್ರಿಲ್‌ನಲ್ಲಿ ವಶಕ್ಕೆ ಪಡೆದುಕೊಂಡಿತ್ತು. ಆದರೆ, ಪೂಜೆ ಆರಂಭವಾಗಿರಲಿಲ್ಲ.

23 ಅರ್ಚಕರು: ದೇವಾಲಯವನ್ನು ತೆರೆಯಬೇಕು ಎಂದು ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಒತ್ತಾಯಿಸುತ್ತಲೇ ಬಂದಿದ್ದರು. ಅಕ್ಟೋಬರ್‌ 20ರಂದು ದೇವಾಲಯ ತೆರೆಯಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸದನದಲ್ಲಿ ಹೇಳಿದ್ದರು.

ದೇವಾಲಯವನ್ನು ತೆರೆಯುವ ಮೊದಲು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ಸರ್ಕಾರ ನಿರ್ಧರಿಸಿತ್ತು. ಅದರಂತೆ ಬುಧವಾರದಿಂದ ಶನಿವಾರದವರೆಗೆ 23 ಮಂದಿ ಅರ್ಚಕರು ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಿದ್ದಾರೆ.

ಬುಧವಾರ ಸಂಜೆ ವೇಳೆಗೆ ಪೂಜಾ ಕೈಂಕರ್ಯಗಳು ಪ್ರಾರಂಭವಾಗಲಿದ್ದು ಶುಕ್ರವಾರದವರೆಗೂ ಮುಂದುವರೆಯಲಿವೆ. ಶನಿವಾರ ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ ಬಳಿಕ ದೇವಾಲಯವು ಸಾರ್ವಜನಿಕರು ಹಾಗೂ ಭಕ್ತರ ದರ್ಶನಕ್ಕೆ ಮುಕ್ತಗೊಳ್ಳಲಿದೆ. ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ನಿಯೋಜನೆಗೊಂಡಿರುವ ಆಗಮಿಕ ಆರ್ಚಕ ಮಲ್ಲಣ್ಣ ಅವರ ನೇತೃತ್ವದ ತಂಡ ಈ ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸಲಿದೆ.

ಸಿದ್ಧತೆ: ಧಾರ್ಮಿಕ ಕಾರ್ಯಗಳಿಗಾಗಿ ತಾಲ್ಲೂಕು ಆಡಳಿತ ಸಿದ್ಧತೆ ನಡೆಸಿದೆ. ಈಗಾಗಲೇ ದೇವಾಲಯಕ್ಕೆ ಸುಣ್ಣ ಬಣ್ಣ ಬಳಿಯಲಾಗಿದೆ. ಭದ್ರತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಕಲ್ಯಾಣಿ ಬಾವಿ ಹಾಗೂ ಪ್ರಾಂಗಣ, ಅಡುಗೆ ಕೋಣೆ ಮುಂತಾದವುಗಳನ್ನು ಸಜ್ಜುಗೊಳಿಸಲಾಗಿದೆ.

‘ದೇವಾಲಯದ ಮುಂದೆ ಚಪ್ಪರ ಹಾಗೂ ಆವರಣದಲ್ಲಿ ಶಾಮಿಯಾನ ಹಾಕಲಾಗಿದೆ. ಹೋಮ, ಹವನ ನಡೆಯುವ ಸ್ಥಳಗಳನ್ನು ಸಿದ್ಧಗೊಳಿಸಿದ್ದು, ಆಗಮಿಕ ಆರ್ಚಕರು ಬಂದ ಬಳಿಕ ಅವರ ಸೂಚನೆ ಮೇರೆಗೆ ಮತ್ತಷ್ಟು ಸಿದ್ಧತಾ ಕಾರ್ಯಗಳನ್ನು ಮಾಡಿಕೊಳ್ಳಲಾಗುವುದು. ದೇವಾಲಯದ ಆವರಣದಲ್ಲೇ ಇರುವ ವಸತಿ ಗೃಹ ಕೊಠಡಿಗಳನ್ನು ಸಹ ಸಿದ್ಧಗೊಳಿಸಿದ್ದು, ಪೂಜೆಗೆ ಬರುವ ಆಚರ್ಕರು ಉಳಿದುಕೊಳ್ಳಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಸ್ಥಳೀಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಿದ್ಧತೆಗಳ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಪ್ರಭಾರ ತಹಶೀಲ್ದಾರ್‌ ಕೆ.ಕುನಾಲ್‌ ಅವರು, ‘ಸುಳ್ವಾಡಿ ಮುಖ್ಯ ರಸ್ತೆಯಿಂದ ದೇವಾಲಯಕ್ಕೆ ತೆರಳುವ ರಸ್ತೆ ಮಳೆಗೆ ತೀರ ಹದಗೆಟ್ಟಿದ್ದರಿಂದ ರಸ್ತೆಯುದ್ದಕ್ಕೂ ಮಣ್ಣು ಹಾಕಿ ಸರಿಪಡಿಸಲಾಗಿದೆ. ದೇವಾಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಕೇಳಿ ಬಂದಿದ್ದರಿಂದ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕಾರ್ಯಕ್ರಮ ಮುಗಿದ ಬಳಿಕ ಕೊಳವೆಬಾವಿ ಕೊರೆಸುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಹೇಳಿದರು.

‘ಶನಿವಾರದ ಬಳಿಕ ದೇವಾಲಯ ಭಕ್ತರ ಪ್ರವೇಶಕ್ಕೆ ಮುಕ್ತಗೊಳ್ಳಲಿದ್ದು, ಕೋವಿಡ್‌ ತಡೆ ನಿಯಮ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸ್ಯಾನಿಟೈಸರ್‌, ಧರ್ಮಲ್‌ ಸ್ಕ್ರೀನಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಾಲ್ಲೂಕು ಆಡಳಿತದೊಂದಿಗೆ ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.