ADVERTISEMENT

ಸುಳ್ವಾಡಿ ದುರಂತ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಫೆ.12ರವರೆಗೆ ವಿಸ್ತರಣೆ

ನ್ಯಾಯಾಲಯಕ್ಕೆ ಬಾರದ ಇಮ್ಮಡಿ ಮಹಾದೇಸ್ವಾಮಿ ಪರ ವಕೀಲರು

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 11:00 IST
Last Updated 29 ಜನವರಿ 2019, 11:00 IST
   

ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷ ಪ್ರಸಾದ ದುರಂತ ಪ್ರಕರಣದ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಫೆಬ್ರುವರಿ 12ರವರೆಗೆ ಮತ್ತೆ ವಿಸ್ತರಿಸಲಾಗಿದೆ.

ಆರೋಪಿಗಳಾದ ಇಮ್ಮಡಿ ಮಹಾದೇವಸ್ವಾಮಿ, ಅಂಬಿಕಾ, ದೊಡ್ಡಯ್ಯ ಮತ್ತು ಮಾದೇಶ ಅವರ ನ್ಯಾಯಾಂಗ ಬಂಧನದ ಅವಧಿ ಮಂಗಳವಾರಕ್ಕೆ ಮುಕ್ತಾಯವಾಗಿದ್ದರಿಂದ ಪೊಲೀಸರು ಅವರನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಬಸವರಾಜ ಅವರ ಮುಂದೆ ಹಾಜರು ಪಡಿಸಿದರು.

ಬಾರದ ವಕೀಲರು: ಮೊದಲ ಆರೋಪಿ ಇಮ್ಮಡಿ ಮಹಾದೇವಸ್ವಾಮಿ ಅವರ ಪರವಾಗಿ ಜಾಮೀನು ಅರ್ಜಿ ಸಲ್ಲಿಸಿರುವ ಗೋಣಿಕೊಪ್ಪಲಿನ ಪೊನ್ನಂಪೇಟೆಯ ವಕೀಲರಾದ ಅಪ್ಪಣ್ಣ ಕೆ.ಜಿ., ಸುಧೀಶ್‌ ಎಚ್‌.ಯು. ಹಾಗೂ ಲೋಹಿತ್‌ ಎ.ಎಂ. ಅವರು ಮಂಗಳವಾರ ವಿಚಾರಣೆಗೆ ಹಾಜರಾಗಿರಲಿಲ್ಲ.

ADVERTISEMENT

ವಕೀಲರು ಬಂದಿದ್ದಾರೆಯೇ ಎಂದು ವಿಚಾರಿಸಿದ ನ್ಯಾಯಾಧೀಶರು, ಸಿಬ್ಬಂದಿ ಮೂಲಕ ಮೂವರ ಹೆಸರನ್ನೂ ಕೂಗಿಸಿದರು. ಆದರೆ, ಯಾರೂ ಬಂದಿರಲಿಲ್ಲ.

‘ನೀವು ವಕೀಲರನ್ನು ನೇಮಿಸಿಕೊಂಡಿದ್ದೀರಾ’ ಎಂದು ಜಿ. ಬಸವರಾಜ ಅವರು ಉಳಿದ ಮೂವರು ಆರೋಪಿಗಳನ್ನು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಾದೇಶ, ‘ಅಪ್ಪಣ್ಣ ಅವರು ಬಂದು ನಮ್ಮ ಸಹಿ ತೆಗೆದುಕೊಂಡು ಹೋಗಿದ್ದಾರೆ’ ಎಂದರು.

‘ನಿಮ್ಮ ಪರವಾಗಿ ಯಾವ ವಕೀಲರೂ ವಕಾಲತ್ತಿಗೆ ಬಂದಿಲ್ಲ. ಜಾಮೀನು ಅರ್ಜಿಯನ್ನೂ ಸಲ್ಲಿಸಿಲ್ಲ. ಅವರನ್ನು ಸಂಪರ್ಕಿಸಿ ವಕಾಲತ್ತು ವಹಿಸಲು ಹೇಳಿ’ ಎಂದು ನ್ಯಾಯಾಧೀಶರು ಸೂಚಿಸಿದರು.

5 ರೊಳಗೆ ಆಕ್ಷೇಪ‍ಣೆ: ಇಮ್ಮಡಿ ಮಹಾದೇವಸ್ವಾಮಿ ಅವರು ಸಲ್ಲಿಸಿರುವ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮೂರು ದಿನಗಳ ಕಾಲಾವಕಾಶ ನೀಡುವಂತೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಲೋಲಾಕ್ಷಿ ಅವರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಧೀಶರು ಫೆಬ್ರುವರಿ 5ರ ಒಳಗಾಗಿ ಸಲ್ಲಿಸುವಂತೆ ಸೂಚಿಸಿದರು.

ಜಾಮೀನು ಅರ್ಜಿ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು, ಆರೋಪಿಗಳನ್ನು ಫೆಬ್ರುವರಿ 12ರಂದು ಮತ್ತೆ ಹಾಜರು ಪಡಿಸುವಂತೆ ಸೂಚಿಸಿದರು.

ರಕ್ಷಣೆ ಕೋರಿದ ವಕೀಲರು

ಈ ಮಧ್ಯೆ, ಇಮ್ಮಡಿ ಮಹಾದೇವಸ್ವಾಮಿ ಅವರ ಪರ ಜಾಮೀನು ಅರ್ಜಿ ಸಲ್ಲಿಸಿದ ಮೂವರು ವಕೀಲರು, ರಕ್ಷಣೆ ಕೋರಿ ಜಿಲ್ಲಾ ಪೊಲೀಸರಿಗೆ ಮನವಿ ಮಾಡಿದ್ದಾರೆ.

‘ಚಾಮರಾಜನಗರಕ್ಕೆ ವಿಚಾರಣೆಗೆ ಬರುವಾಗ ಪೊಲೀಸ್‌ ಭದ್ರತೆ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ರಕ್ಷಣೆ ಕೊಡುವ ಭರವಸೆ ನೀಡಿದ್ದೇನೆ. ಬರುವ ಮುಂಚೆ ಮಾಹಿತಿ ನೀಡುವಂತೆ ಅವರಿಗೆ ತಿಳಿಸಿದ್ದೇನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ವಕೀಲ ಸಂಘದಿಂದ ಪತ್ರ

ಇದರ ನಡುವೆಯೇ, ‘ಈ ಪ್ರಕರಣದಲ್ಲಿ ಮಾನವೀಯ ದೃಷ್ಟಿಯಿಂದ ಆರೋಪಿಗಳ ಪರ ಯಾರೂ ವಕಾಲತ್ತು ವಹಿಸಲು ಮುಂದೆ ಬರಬಾರದು ಹಾಗೂ ಈಗಾಗಲೇ ಜಾಮೀನು ಅರ್ಜಿ ಸಲ್ಲಿಸಿರುವ ವಕೀಲರಿಗೆ ಈ ಬಗ್ಗೆ ತಿಳಿ ಹೇಳಬೇಕು’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಹಾಗೂ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್ ಅವರು ಮಡಿಕೇರಿ ಹಾಗೂ ವಿರಾಜಪೇಟೆಯ ವಕೀಲರ ಸಂಘಗಳಿಗೆ ಪತ್ರಬರೆದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.