ADVERTISEMENT

ಸುಳ್ವಾಡಿ ವಿಷ ಪ್ರಸಾದ ದುರಂತ: ಪ್ರಕರಣ ರದ್ದು ಕೋರಿ ಮಹಾದೇವಸ್ವಾಮಿ ಅರ್ಜಿ

ನ್ಯಾಯಾಂಗ ಬಂಧನ ಅವಧಿ 19ರ ವರೆಗೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 14:39 IST
Last Updated 5 ಆಗಸ್ಟ್ 2019, 14:39 IST
ಸುಳ್ವಾಡಿ ಪ್ರಕರಣದ ನಾಲ್ವರು ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು
ಸುಳ್ವಾಡಿ ಪ್ರಕರಣದ ನಾಲ್ವರು ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು   

ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ನಡೆದಿದ್ದ ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಮೊಕದ್ದಮೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಮೊದಲ ಆರೋಪಿ ಇಮ್ಮಡಿ ಮಹಾದೇವಸ್ವಾಮಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಆರೋಪಿ ಪರ ವಕೀಲ ವಿಶ್ವನಾಥ್ ಅವರು ಅರ್ಜಿ ಸಲ್ಲಿಸಿದ್ದಾರೆ.

‘ಪ್ರಕರಣದಲ್ಲಿ ಮಹಾದೇವಸ್ವಾಮಿ ಅವರ ಪಾತ್ರ ಇರುವ ಬಗ್ಗೆ ಸಾಕ್ಷ್ಯಗಳಿಲ್ಲ. ಹಾಗಾಗಿ, ಅವರ ವಿರುದ್ಧ ದಾಖಲಿಸಿರುವ ಮೊಕ‌ದ್ದಮೆಗಳನ್ನು ಕೈ ಬಿಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ’ ಎಂದು ವಿಶ್ವನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕೋರ್ಟ್‌ಗೆ ಹಾಜರು: ಈ ಮಧ್ಯೆ, ನ್ಯಾಯಾಂಗ ಬಂಧನದ ಅವಧಿ ಸೋಮವಾರ ಮುಕ್ತಾಯಗೊಂಡಿದ್ದರಿಂದ ಪೊಲೀಸರು, ನಾಲ್ವರು ಆರೋಪಿಗಳನ್ನು ಸೋಮವಾರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ಈ ಸಂದರ್ಭದಲ್ಲಿ ವಕೀಲ ವಿಶ್ವನಾಥ್ ಅವರು, ಇಮ್ಮಡಿ ಮಹದೇವಸ್ವಾಮಿ ವಿರುದ್ಧದ ಪ್ರಕರಣ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಪಬ್ಲಿಕ್ ಪ್ರಾಸಿಕ್ಯೂಟರ್ ಲೋಲಾಕ್ಷಿ ಅವರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದರು.

ಇದೇ 8ರ ಒಳಗಾಗಿ ಆಕ್ಷೇಪಣೆ ಸಲ್ಲಿಸುವಂತೆ ಜಿಲ್ಲಾ ಪ್ರಧಾನ‌ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಬಸವರಾಜ ಅವರು ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಸೂಚಿಸಿದರು.

ಬಾರದ ವಕೀಲರು: ಉಳಿದ ಮೂವರು ಆರೋಪಿಗಳಾದ ಅಂಬಿಕಾ, ಮಾದೇಶ ಮತ್ತು ದೊಡ್ಡಯ್ಯ ಪರ ವಕೀಲರು ಸೋಮವಾರವೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹಾಗಾಗಿ,ನ್ಯಾಯಾಧೀಶರು ನ್ಯಾಯಾಂಗ ಬಂಧನದ ಅವಧಿಯನ್ನು ಇದೇ 19ರವರೆಗೆ ವಿಸ್ತರಿಸಿ ವಿಚಾರಣೆಯನ್ನು ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.