ADVERTISEMENT

ಸುಳ್ವಾಡಿ ಸಂತ್ರಸ್ತರಿಗೆ ಜಮೀನು ಹಂಚಿಕೆ, ಖರೀದಿ ಪ್ರಗತಿಯಲ್ಲಿದೆ: ಸುರೇಶ್ ಕುಮಾರ್

ಎರಡು ಎಕರೆ ಜಮೀನು ಹಂಚಿಕೆ ಬಗ್ಗೆ ಸಚಿವರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 6:03 IST
Last Updated 14 ಡಿಸೆಂಬರ್ 2019, 6:03 IST
ಎಸ್.ಸುರೇಶ್ ಕುಮಾರ್ (ಸಂಗ್ರಹ ಚಿತ್ರ)
ಎಸ್.ಸುರೇಶ್ ಕುಮಾರ್ (ಸಂಗ್ರಹ ಚಿತ್ರ)   

ಚಾಮರಾಜನಗರ:ಸುಳ್ವಾಡಿ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಜಮೀನು ನೀಡಲು ಖಾಸಗಿಯವರಿಂದ ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೃತಪಟ್ಟವರ ಕುಟುಂಬಗಳಿಗೆ ಎರಡು ಎಕರೆ ಜಮೀನು ನೀಡುವುದಾಗಿ ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಘೋಷಿಸಿದ್ದರು. ಅದರಂತೆ ಜಿಲ್ಲಾಡಳಿತ ಕ್ರಮ ವಹಿಸಿದೆ. ಆ ಪ್ರದೇಶದಲ್ಲಿ ಸರ್ಕಾರಿ ಜಮೀನು ಇಲ್ಲದಿರುವುದರಿಂದ ಖಾಸಗಿಯವರಿಂದ ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈಗ ಅವರು ಹೆಚ್ಚು ಬೆಲೆ ಹೇಳುತ್ತಿದ್ದಾರೆ’ ಎಂದರು.

ಅದಾಲತ್:‘ಸಂತ್ರಸ್ತರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆಗಾಗಿ ಅಲ್ಲಿ ಅದಾಲತ್ ನಡೆಸುತ್ತೇವೆ. ತಹಶೀಲ್ದಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ’ ಎಂದರು.

ಚಿಕಿತ್ಸೆಗೆ ಕ್ರಮ:‘ಅಸ್ವಸ್ಥಗೊಂಡಿದ್ದ ಸಂತ್ರಸ್ತರು ಈಗಲೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಮಾತುಗಳಿವೆ. ಅಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತಿದೆ. ಅಗತ್ಯ ಬಿದ್ದರೆ ಮೈಸೂರಲ್ಲಿ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ಹೇಳಿದರು.

‘ಕೂಲಿ ಕೆಲಸಕ್ಕೆ ಕರೆಯುತ್ತಿಲ್ಲ ಎಂದು ಸಂತ್ರಸ್ತರು ಹೇಳಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಸಂತ್ರಸ್ತರಿಗೆ ಸಮಗ್ರವಾಗಿ ಹೇಗೆ ಪುನರ್ವಸತಿ ಕಲ್ಪಿಸಬಹುದು ಎಂಬುದನ್ನು ಚರ್ಚಿಸುತ್ತೇವೆ’ ಎಂದು ಸಚಿವರು ಹೇಳಿದರು‌.

ಶೀಘ್ರ ಪುನರಾರಂಭ:‘ಘಟನೆ ಬಳಿಕ ಮುಚ್ಚಿರುವ ಮಾರಮ್ಮ ದೇವಾಲಯವನ್ನು ಮತ್ತೆ ತೆರೆಯಬೇಕು ಎಂಬ ಬೇಡಿಕೆಯನ್ನು ಭಕ್ತರು ಮುಂದಿಟ್ಟಿದ್ದಾರೆ. ಅವರ ಭಾವನೆಗಳು ಅರ್ಥವಾಗುತ್ತದೆ. ಈಗಾಗಲೇ ದೇವಸ್ಥಾನಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದ್ದೇವೆ. ಆಗಮ ಶಾಸ್ತ್ರ ಅರಿತಿರುವ ಅರ್ಚಕರನ್ನು ನೇಮಿಸಬೇಕಾಗಿದೆ. ಒಳ್ಳೆಯ ಮುಹೂರ್ತ ನೋಡಿ ಶೀಘ್ರದಲ್ಲಿ ದೇವಸ್ಥಾನವನ್ನು ತೆರೆಯಲಾಗುವುದು’ ಎಂದು ಸುರೇಶ್ ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.