ಯಳಂದೂರು: ತಾಲ್ಲೂಕಿನಲ್ಲಿ ಮಳೆ ಕೈಕೊಟ್ಟಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಬಿಸಿಗಾಳಿಯೂ ಬೀಸುತ್ತಿದೆ. ಈ ನಡುವೆ ಸಂಜೆ ವೇಳೆ ಮೇಘರಾಜ ಹಾಜರಿ ಹಾಕಿ ಸಾಗುತ್ತಿದ್ದಾನೆ. ವರುಣನಿಗೆ ಹರಕೆ, ಪೂಜೆ ಸಲ್ಲಿಕೆಯಾಗುತ್ತಿದೆ. ದಾಹ ನೀಗಿಸಿಕೊಳ್ಳಲು ಎಳನೀರು, ಪಾನೀಯ ಮತ್ತು ಹಣ್ಣು ಸೇವನೆಗೂ ಜನ ಮುಂದಾಗಿದ್ದು, ಇವುಗಳನ್ನು ಕೊಳ್ಳಲು ಬೆಲೆ ಏರಿಕೆಯ ಬಿಸಿಯೂ ನಾಗರಿಕರನ್ನು ಕಾಡಿದೆ.
ವಿವಿಧೆಡೆ ಮಳೆ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಸರಿಗಷ್ಟೇ ನಾಲ್ಕು ಹನಿಯ ಸಿಂಚನವಾಗಿದೆ. ಸಂಜೆ ಕೋಲ್ಮಿಂಚು, ಗುಡುಗು, ಗಾಳಿ ಅಬ್ಬರ ಕಂಡುಬಂದರೂ ವರುಣನನ್ನು ಕರೆತಂದಿಲ್ಲ. ಸುಡುಬಿಸಿಲು ಮತ್ತು ಬಿಸಿಗಾಳಿ 38-40 ಡಿಗ್ರಿ ಸೆಲ್ಸಿಯಸ್ ಇದ್ದು, ಜನ ಸಮುದಾಯ ಬಿಸಿಲ ರವಕ್ಕೆ ತತ್ತರಿಸುವಂತೆ ಆಗಿದೆ.
ಈ ನಡುವೆ ದೇಹ ತಂಪು ಮಾಡಿಕೊಳ್ಳಲು ಹಣ್ಣಿನ ರಸ, ಎಳನೀರು, ಕಿತ್ತಳೆ, ಮೂಸಂಬಿ ಮತ್ತು ದ್ರಾಕ್ಷಿ ಸೇವನೆಗೆ ಮುಂದಾಗಿದ್ದಾರೆ. ಮನೆ, ಕಚೇರಿ, ರಸ್ತೆ, ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಜ್ಜಿಗೆ, ಜ್ಯೂಸ್, ಕಬ್ಬಿನಹಾಲು ಕುಡಿದು ದೇಹದ ಉಷ್ಣಾಂಶ ಇಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಕಲ್ಲಂಗಡಿ, ಖರಬೂಜ, ನಿಂಬೆ ಷರಬತ್ತು ಅಂಗಡಿಗಳ ಮುಂದೆ ಜನರ ದಟ್ಟಣೆಯೂ ಕಂಡುಬರುತ್ತಿದೆ.
ಎಳನೀರು ಸಿಗುತ್ತಿಲ್ಲ: ಮೂರು ತಿಂಗಳ ಹಿಂದೆ ಉತ್ತಮ ದರ್ಜೆಯ ಎಳನೀರು ₹30ಕ್ಕೆ ಸಿಗುತ್ತಿತ್ತು.
‘ಈಗ ಎಳನೀರು ಇಳುವರಿ ಕುಸಿದಿದ್ದು, ಸಣ್ಣ ಗಾತ್ರದ ಎಳನೀರಿಗೆ ₹40 ನೀಡಬೇಕಿದೆ. ತೋಟಗಾರಿಕಾ ಬೆಳೆಗಳಿಗೆ ನೀರು ಸಮೃದ್ಧವಾಗಿ ಸಿಗುತ್ತಿಲ್ಲ. ಹಾಗಾಗಿ, ಪೂರೈಕೆಯೂ ತಗ್ಗಿದೆ. ಬೆಲೆ ಹೆಚ್ಚು ನೀಡಿದರೂ ಉತ್ತಮ ಎಳನೀರು ಸಂಗ್ರಹ ಆಗುತ್ತಿಲ್ಲ’ ಎನ್ನುತ್ತಾರೆ ಪಟ್ಟಣದ ನಾಗೇಂದ್ರ.
ಊಟ ಸೇರದು: ‘ಬಿಸಿಲು ಏರುತ್ತಲೇ ಇದೆ. ಊಟ ಮತ್ತು ತಿಂಡಿ ಹೆಚ್ಚು ಸೇವನೆ ಸಾಧ್ಯ ಇಲ್ಲ. ಹಣ್ಣಿನ ಜ್ಯೂಸ್, ಎಳನೀರು ಮತ್ತು ಷರಬತ್ತು ಕುಡಿಯಲು ಜನರು ಹೆಚ್ಚು ಒಲವು ತೋರುತ್ತಾರೆ. ವೃದ್ಧರು ಮತ್ತು ರೋಗಿಗಳಿಗೆ ಹಣ್ಣು ಬಳಕೆ ಜೀವಾಮೃತ ಆಗಿದ್ದು, ಹೆಚ್ಚಿನ ಬೇಡಿಕೆ ತಂದಿತ್ತಿದೆ. ಇದರಿಂದ ದಣಿದ ದೇಹ ಹೆಚ್ಚು ನಿರ್ಜಲೀಕರಣ ಆಗುವುದು ತಪ್ಪಲಿದೆ’ ಎನ್ನುತ್ತಾರೆ ಹೊನ್ನೂರು ಸುಂದರಮ್ಮ.
ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ತಾಜಾ ಹಣ್ಣು ಕೊಳ್ಳಲು ಜನರು ಮುಗಿಬಿದ್ದರು.
ಯಳಂದೂರು ಹೊರ ವಲಯದ ಗೂಳಿಪುರ ಮರಮ್ಮ ದೇವಸ್ಥಾನದ ಬಳಿ ಸೋಮವಾರ ಮಕ್ಕಳು ನೆರಳಿನಲ್ಲಿ ಕ್ರಿಕೆಟ್ ಆಡಿ ರಜಾ ಮಜಾ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.