ಚಾಮರಾಜನಗರ: 9,800 ಎಕರೆಗೂ ಹೆಚ್ಚು ಕೃಷಿ ಭೂಮಿಗೆ ನೀರುಣಿಸುವ, ರೈತರ ಜೀವನಾಡಿಯಾಗಿರುವ, ಕೆರೆ–ಕಟ್ಟೆಗಳಿಗೆ ಜಲಾಧಾರವಾಗಿರುವ ಸುವರ್ಣಾವತಿ ಜಲಾಶಯವು ಮೈದುಂಬಿ ಕಣ್ಮನ ಸೆಳೆಯುತ್ತಿದೆ. ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು ಎರಡು ಕ್ರಸ್ಟ್‌ಗೇಟ್‌ಗಳ ಮೂಲಕ ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗಿದ್ದು ಸುವರ್ಣಾವತಿ ಹಾಲ್ನೊರೆಯಾಗಿ ಧುಮ್ಮಿಕ್ಕುತ್ತಿದ್ದಾಳೆ.
ಸುವರ್ಣಾವತಿ ಅಣೆಕಟ್ಟೆಯನ್ನು 1984ರಲ್ಲಿ ನಿರ್ಮಾಣ ಮಾಡಲಾಗಿದ್ದು 1.20 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಸದ್ಯ ಅಣೆಕಟ್ಟೆಯಲ್ಲಿ 1.18 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು ಕಣ್ಣು ಹಾಯಿಸಿದಷ್ಟು ದೂರ ಜಲರಾಶಿ ಕಂಗೊಳಿಸುತ್ತಿದೆ. ಹಸಿರ ಕಾನನ, ಬೆಟ್ಟಗುಡ್ಡಗಳ ಸಾಲು ಜಲಾಶಯದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ.
ಕೆರೆಗಳಿಗೆ ನೀರು: ಸುವರ್ಣಾವತಿ ಜಲಾಶಯದಿಂದ ಬಲದಂಡೆ ನಾಲೆ ಮೂಲಕ 150 ಕ್ಯುಸೆಕ್ ನೀರು ಹೊರಬಿಡಲಾಗಿದ್ದು ಚಾಮರಾಜನಗರ ತಾಲ್ಲೂಕಿನ ದೊಡ್ಡಕೆರೆ, ಚಿಕ್ಕಕೆರೆ, ಸಿಂಡಿಗೆರೆ, ಆಲೂರು ಕೆರೆ, ಕನ್ನೆಗಾಲ ಕೆರೆ, ಮಲ್ಲೇದೇವನಹಳ್ಳಿ ಕೆರೆ, ಪುಟ್ಟನಪುರ ಕೆರೆ, ಕಾಗಲವಾಡಿ ಕೆರೆ, ನಾಗವಳ್ಳಿ ಕೆರೆಗಳು ಶೀಘ್ರ ಭರ್ತಿಯಾಗಲಿವೆ.
ಕೆರೆಗಳು ಭರ್ತಿಯಾದರೆ ಜನ, ಜಾನುವಾರುಗಳಿಗೆ ಸಮೃದ್ಧ ನೀರು ದೊರೆಯುವುದರ ಜೊತೆಗೆ ಅಂತರ್ಜಲ ಮಟ್ಟವೂ ಹೆಚ್ಚಾಗಲಿದೆ. ನಾಲೆ ಹರಿಯುವ ಗ್ರಾಮಗಳ ವ್ಯಾಪ್ತಿಯಲ್ಲಿರುವ ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ, ಬಾಳೆ, ಅರಿಶಿನ ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳಿಗೆ ಸಮೃದ್ಧವಾದ ನೀರು ದೊರೆಯಲಿದೆ.
ಸುವರ್ಣಾವತಿ ನದಿ ಹರಿಯುವ ಗ್ರಾಮಗಳಾದ ಹೊಂಗಲವಾಡಿ, ದಡದಳ್ಳಿ, ಅಯ್ಯನಪುರ, ನಾಗವಳ್ಳಿ, ಪುಟ್ಟನಪುರ, ಮಲ್ಲೇದೇವನಹಳ್ಳಿ, ಆಲೂರು, ಸರಗೂರು, ಹೊಮ್ಮ, ಕರಿಯನಕಟ್ಟೆ, ಅಟ್ಟಗೂಳಿಪುರದಲ್ಲಿ ಮಲೆನಾಡಿನ ಪರಿಸರವನ್ನು ಕಾಣಬಹುದಾಗಿದ್ದು ಸುವರ್ಣಾವತಿ ಜಲಾಶಯದ ಛಾಯೆ ಎದ್ದು ಕಾಣುತ್ತದೆ.
ಜಲಾನಯನ ಪ್ರದೇಶ: ಸುವರ್ಣಾವತಿ ಜಲಾಶಯ ತುಂಬಬೇಕಾದರೆ ಕರ್ನಾಟಕ ಹಾಗೂ ತಮಿಳುನಾಡಿನ ಗಡಿ ಭಾಗವಾಗಿರುವ ದಿಂಬಂ, ಬೇಡಗುಳಿ, ಕೋಳಿ ಪಾಳ್ಯದಲ್ಲಿ ಸಮೃದ್ಧ ಮಳೆ ಸುರಿಯಬೇಕು. ಈ ವರ್ಷ ಪೂರ್ವ ಮುಂಗಾರು ಕೈಕೊಟ್ಟರೂ ನಂತರದ ಅವಧಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಸುವರ್ಣಾವತಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದೆ. ಜಲಾಶಯದ ಗರಿಷ್ಠ ಮಟ್ಟ ಮುಟ್ಟುವ ಹಂತದಲ್ಲಿದ್ದು ಪೂರ್ತಿ ಭರ್ತಿಯಾಗಲು 0.2 ಟಿಎಂಸಿ ಅಡಿ ಮಾತ್ರ ಬಾಕಿ ಇದೆ ಎನ್ನುತ್ತಾರೆ ಸುವರ್ಣಾವತಿ ಜಲಾಶಯದ ಸಹಾಯಕ ಎಂಜಿನಿಯರ್ ಮಹೇಶ್.
ಚಾಮರಾಜನಗರ ತಾಲ್ಲೂಕಿನ ಅವಳಿ ಜಲಾಶಯಗಳಾದ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಈ ಭಾಗದ ರೈತರ ಜೀವನಾಡಿಯಾಗಿದೆ. ಕಳೆದ ವರ್ಷ ಮಳೆಯ ಕೊರತೆಯಿಂದ ಸುವರ್ಣಾವತಿ ತುಂಬಿರಲಿಲ್ಲ. 2022ರಲ್ಲಿ ಗರಿಷ್ಠ ಮಟ್ಟ ತಲುಪಿತ್ತು. ಎರಡು ವರ್ಷಗಳ ಬಳಿಕ ಜಲಾಶಯ ಮತ್ತೊಮ್ಮೆ ತುಂಬಿದ್ದು ನೀರು ಹೊರಬಿಡಲಾಗಿದೆ ಎಂದು ಮಹೇಶ್ ಮಾಹಿತಿ ನೀಡಿದರು.
1984ರಲ್ಲಿ ನಿರ್ಮಾಣವಾದ ಜಲಾಶಯ ದಿಂಬಂ, ಬೇಡಗುಳಿಯಲ್ಲಿ ಮಳೆಯಾದರೆ ಡ್ಯಾಂ ಭರ್ತಿ ಜಲಾಶಯ ಭರ್ತಿ: ರೈತರಲ್ಲಿ ಸಂತಸ
- ಮೈದುಂಬುತ್ತಿದೆ ಚಿಕ್ಕಹೊಳೆ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಚಾಮರಾಜನಗರ ತಾಲ್ಲೂಕಿನ ಅವಳಿ ಜಲಾಶಯಗಳು. ಚಿಕ್ಕಹೊಳೆ ಡ್ಯಾಂ ಗರಿಷ್ಠ 74 ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು ಸದ್ಯ 66 ಅಡಿ ನೀರು ಸಂಗ್ರಹ ಇದೆ. ರಾಜ್ಯದ ಗಡಿ ಭಾಗವಾಗಿರುವ ತಾಳವಾಡಿಯಲ್ಲಿ ಮಳೆಯಾದರೆ ಚಿಕ್ಕಹೊಳೆ ಜಲಾಶಯ ಭರ್ತಿಯಾಗುತ್ತದೆ. ಸಿದ್ದಯ್ಯನ ಪುರ ಬಂಡಿಗೆರೆ ಹರದನಹಳ್ಳಿ ಗ್ರಾಮಗಳ ಸಾವಿರಾರು ಎಕರೆ ಕೃಷಿ ಭೂಮಿಗೆ ಚಿಕ್ಕಹೊಳೆ ಜಲಾಶಯ ನೀರುಣಿಸುತ್ತಿದೆ.
ಪ್ರವಾಸಿಗರ ಆಕರ್ಷಿಸಲು ಅನುಕೂಲ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳ ಪಾತ್ರದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳ ಅಭಿವೃದ್ಧಿಗೆ ಪೂರಕ ವಾತಾವರಣ ಇದೆ. ಕರಾವಳಿ ಮಾದರಿಯಲ್ಲಿ ನದಿಪಾತ್ರದಲ್ಲಿ ಕಯಾಕಿಂಗ್ ದೋಣಿ ವಿಹಾರ ಸೇರಿದಂತೆ ವಾಟರ್ ಸ್ಪೋರ್ಟ್ಸ್‌ಗಳನ್ನು ಆಯೋಜಿಸುವ ಮೂಲಕ ಜಿಲ್ಲೆಗೆ ಬರುವ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಮಾಡಬಹುದಾಗಿದೆ ಎನ್ನುತ್ತಾರೆ ಸ್ಥಳೀಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.