ಚಾಮರಾಜನಗರ: ‘ಪಶ್ಚಿಮಘಟ್ಟದ ಸಂರಕ್ಷಣೆಗೆ ಸಂಬಂಧಿಸಿದಂತೆ ಮಾಧವ ಗಾಡ್ಗೀಳ್ ವರದಿಯು ನಿಸರ್ಗ ಕೇಂದ್ರಿತವಾಗಿದ್ದರೆ, ಕಸ್ತೂರಿ ರಂಗನ್ ವರದಿ ಮನುಷ್ಯ ಕೇಂದ್ರಿತವಾಗಿದೆ. ನಮ್ಮ ಶಾಸಕರು, ಜನ ಪ್ರತಿನಿಧಿಗಳು ಇವೆರಡನ್ನೂ ಓದದೆ, ಗುತ್ತಿಗೆದಾರರ ಮಾತು ಕೇಳುತ್ತಿದ್ದಾರೆ’ ಎಂದು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ದೂರಿದರು.
ಚಾಮರಾಜನಗರದ ದೀನಬಂಧು ಸಂಸ್ಥೆ, ಡಾ.ಲೋಹಿಯಾ ಜನ್ಮಶತಾಬ್ಧಿ ಟ್ರಸ್ಟ್, ಪುನರ್ಚಿತ್, ಹೊಂಡರಬಾಳುವಿನ ಅಮೃತಭೂಮಿ ಮತ್ತು ಶಾಂತಲಾ ಕಲಾವಿದರು ಸಂಘಟನೆಗಳು ‘ಹಸಿರು ಚಾಮರ’ ಎಂಬ ವೇದಿಕೆಯ ಅಡಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಧವ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಯ ಸಾರಾಂಶ ಮಂಡನೆ ಮತ್ತು ಚರ್ಚಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪಶ್ಚಿಮಘಟ್ಟ ನಿಸರ್ಗ ಮಾತೆಯ ಗರ್ಭಗುಡಿ. ಪವಿತ್ರವಾಗಿರುವ ಈ ಸ್ಥಳದಲ್ಲಿ ಮಾಡಬಾರದ್ದನ್ನೆಲ್ಲ ಮಾಡಿದ್ದರಿಂದ ಈಗಿನ ಸ್ಥಿತಿ ನಿರ್ಮಾಣ ಆಗಿದೆ. 60 ವರ್ಷಗಳಿಂದೀಚೆಗೆ ವಾತಾವರಣ ನಮಗೆ ಅರಿವಿಗೆ ಬಾರದಂತೆ ಬಿಸಿಯಾಗುತ್ತಿದೆ. ಆಗುತ್ತಿರುವ ಬದಲಾವಣೆಗೆ ಹೇಗೆ ಹೊಂದಿಕೊಳ್ಳಬೇಕು ಎಂಬುದು ಭೂಮಿಗೆ ಗೊತ್ತಾಗುತ್ತಿಲ್ಲ’ ಎಂದರು.
‘ಮಾಧವ ಗಾಡ್ಗೀಳ್ ಅವರು ತಮ್ಮ ವರದಿಯಲ್ಲಿ ನಿಸರ್ಗಕ್ಕೆ ಆದ್ಯತೆ ನೀಡಿದ್ದರು. ಕಾಡಿನಲ್ಲಿ ಬದುಕುವ ಬುಡಕಟ್ಟು ಜನರು ಅಲ್ಲೇ ಜೀವನ ನಡೆಸಬೇಕು ಎಂದು ಅವರು ಹೇಳಿದ್ದರು. ಅವರಿಗೆ ಬೇಕಾದಂತಹ ಎಲ್ಲ ಸೌಲಭ್ಯಗಳನ್ನು ಅವರು ಮಾಡಿಕೊಳ್ಳಲಿ. ಅದು ನೈಸರ್ಗಿಕವಾಗಿರಬೇಕು. ಅರಣ್ಯ ಸಂರಕ್ಷಣೆ ವಿಚಾರದಲ್ಲಿ ಸ್ಥಳೀಯ ಪಂಚಾಯಿತಿ ಆಡಳಿತಕ್ಕೆ ಆದ್ಯತೆ ನೀಡಬೇಕು ಎಂದು ಅವರು ಪ್ರತಿಪಾದಿಸಿದ್ದರು’ ಎಂದು ನಾಗೇಶ ಹೆಗಡೆ ಹೇಳಿದರು.
‘ಕಸ್ತೂರಿ ರಂಗನ್ ವರದಿಯಲ್ಲಿ ಪಶ್ಚಿಮ ಘಟ್ಟವನ್ನು ನೈಸರ್ಗಿಕ ಪ್ರಾಂತ್ಯಗಳು ಮತ್ತು ನಾಗರಿಕ ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ. ನೈಸರ್ಗಿಕ ಪ್ರಾಂತ್ಯದಲ್ಲಿ ಸಂರಕ್ಷಣೆಯ ಕೆಲಸ ಮಾಡಬೇಕು ಎಂದು ವರದಿ ಹೇಳಿದೆ’ ಎಂದು ವಿವರಿಸಿದರು.
ಮುಚ್ಚಿ ಹಾಕಿದರು
‘ನಾನು ಅರಣ್ಯಾಧಿಕಾರಿ ಆಗಿದ್ದಾಗ, ಕೊಡಗನ್ನು ಹೇಗೆ ರಕ್ಷಿಸಬಹುದು ಎಂಬ ಬಗ್ಗೆ ವಿಸ್ತೃತ ವರದಿ ನೀಡಿದ್ದೆ. ನನ್ನ ಮೇಲಾಧಿಕಾರಿಗಳು ಸೇರಿದಂತೆ ತಪ್ಪು ಮಾಡಿದವರ ವಿವರಗಳನ್ನೂ ವರದಿಯಲ್ಲಿ ಉಲ್ಲೇಖಿಸಿದ್ದೆ. ಆದರೆ, ಅದನ್ನು ಮುಚ್ಚಿಹಾಕಲಾಯಿತು’ ಎಂದು ಪರಿಸರವಾದಿ ಯಲ್ಲಪ್ಪರೆಡ್ಡಿ ಮಾತನಾಡಿ ದೂರಿದರು.
‘ಪಶ್ಚಿಮ ಘಟ್ಟದ ಅಧ್ಯಯನಕ್ಕೂ ಮುನ್ನ ಮಾಧವ ಗಾಡ್ಗೀಳ್ ಅವರಾಗಲಿ, ಕಸ್ತೂರಿ ರಂಗನ್ ಅವರಾಗಲಿ ನನ್ನ ಬಳಿ ಅಭಿಪ್ರಾಯವನ್ನೂ ಪಡೆಯಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಮಾಧ್ಯಮಗಳು ತೋರಿಸುತ್ತಿಲ್ಲ
‘ಇತ್ತೀಚೆಗೆ ಸಂಭವಿಸಿದ ಅನಾಹುತದಲ್ಲಿ ಎತ್ತಿನಹೊಳೆ ಯೋಜನೆ ಪ್ರದೇಶ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಅಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೂ ಹಾನಿಯಾಗಿದೆ. ಆದರೆ ಮಾಧ್ಯಮಗಳು ಇದರ ಬಗ್ಗೆ ವರದಿ ಮಾಡುತ್ತಿಲ್ಲ’ ಎಂದು ಹೇಳಿದರು.
ಪರಿಸರಕ್ಕೆ ಹಾನಿ ಖಚಿತ
‘ಗೋಣಿಕೊಪ್ಪಲಿನಿಂದ ಕೇರಳದ ವಯನಾಡಿವರೆಗೆ ಎತ್ತರಿಸಿದ ಹೆದ್ದಾರಿ (ಎಲಿವೇಟೆಡ್) ನಿರ್ಮಿಸುವ ಯೋಜನೆಯ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಪ್ರಸ್ತಾಪಿಸಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಹಣ ಕೊಡುವುದು ಬೇಡ ಎಂದೂ ಹೇಳಿದ್ದಾರೆ. ಬನ್ನೇರುಘಟ್ಟದಿಂದ ಕೃಷ್ಣಗಿರಿಗೂ ಹೊಸ ರಸ್ತೆ ನಿರ್ಮಿಸುವ ಪ್ರಸ್ತಾವ ಇದೆ. ಇದರಿಂದ ಪರಿಸರಕ್ಕೆ ತೀವ್ರ ಹಾನಿ ಸಂಭವಿಸಲಿದೆ’ ಎಂದು ಭವಿಷ್ಯ ನುಡಿದರು.
ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಜ್ಞಾನವೇ ಕಾರಣ: ನಾಗಭೂಷಣ
ಪರಿಸರದಲ್ಲಿ ಸಂಭವಿಸುತ್ತಿರುವಇಷ್ಟೆಲ್ಲ ಅನಾಹುತಕ್ಕೆ ಆಧುನಿಕ ವಿಜ್ಞಾನವೇ ಕಾರಣ ಎಂದು ಸಾಹಿತಿ ಡಿ.ಎಸ್.ನಾಗಭೂಷಣ ಹೇಳಿದರು.
‘ವಿಜ್ಞಾನವೇ ಪರಮಧರ್ಮ ಎಂದು ನಾವು ಒಪ್ಪಿಕೊಂಡಿದ್ದೇವೆ. ಆದರೆ, ಅದಕ್ಕೂ ಮಿತಿ ಇದೆ. ಅಳತೆಗೆ ಸಿಗುವಂತಹ ವಸ್ತುವನ್ನು ಮಾತ್ರ ಅದು ಅಧ್ಯಯನ ಮಾಡಬಲ್ಲದು. ಆದರೆ, ವಿಜ್ಞಾನ ಇದನ್ನು ಒಪ್ಪುವುದಿಲ್ಲ. ಅದು ಎಲ್ಲವನ್ನೂ ವಿಘಟಿಸಿ ವಿಶ್ಲೇಷಣೆಗೆ ಒಳಪಡಿಸುತ್ತದೆ. ನಾವು ಈಗ ಆಧುನಿಕ ವಿಜ್ಞಾನ– ತಂತ್ರಜ್ಞಾನವನ್ನು ನಂಬಿ ಬದುಕು ನಡೆಸುತ್ತಿದ್ದೇವೆ’ ಎಂದು ಅವರು ಹೇಳಿದರು.
‘ಧರ್ಮ/ಜ್ಞಾನದ ಸ್ಥಾನವನ್ನು ಈಗ ವಿಜ್ಞಾನ ಆಕ್ರಮಿಸಿದೆ. ದೇವರ ಮೂಲವನ್ನೂ ಅದರಿಂದ ತಿಳಿಯಬಹುದು ಎಂದು ಹೇಳಲಾಗುತ್ತದೆ. ಇಲ್ಲಿ ದೇವರು ಎಂದರೆ ಗಣಪತಿ, ಈಶ್ವರ ಅಲ್ಲ. ಸೃಷ್ಟಿಯ ಮೂಲ. ಹಿಂದಿನವರು ಇಡೀ ಸೃಷ್ಟಿಯನ್ನು ಸಮಗ್ರ ದೃಷ್ಟಿಕೋನದಲ್ಲಿ ನೋಡುತ್ತಿದ್ದರು. ಹಾಗಾಗಿ ಅವರು ಗಿಡ– ಮರ, ಜಲಪಾತಗಳಿಗೆ ಪೂಜೆ ಮಾಡುತ್ತಿದ್ದರು. ವಿಜ್ಞಾನದ ಯುಗದಲ್ಲಿ ಅದು ಮೌಢ್ಯವಾಗಿದೆ’ ಎಂದರು.
‘ವೈಜ್ಞಾನಿಕ ನಾಗರಿಕತೆಯ ಹಿಂದೆ ಬಿದ್ದ ನಾವು ಮಿತಿ ಇಲ್ಲದ ಬದುಕೇ ಶ್ರೇಷ್ಠ ಎಂದುಕೊಂಡಿದ್ದೇವೆ. ನಮ್ಮ ಜೀವನದ ದೃಷ್ಟಿ ಬದಲಾವಣೆಯಾಗದೇ, ಜೀವನ ಶೈಲಿ ಬದಲಾಗಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.