ಹನೂರು: ತಾಲ್ಲೂಕಿನ ಭದ್ರಯ್ಯನಹಳ್ಳಿ ಗ್ರಾಮದಲ್ಲಿ ಅಪರೂಪದ ಚರ್ಮದ ಕಾಯಿಲೆಯಿಂದ ಬಳಲುತ್ತಿರುವ ದೀಕ್ಷಿತ ಎಂಬ ಬಾಲಕಿಯ ಮನೆಗೆ ಆಧಾರ್ ಕಿಟ್ ತೆಗೆದುಕೊಂಡು ಹೋದ ತಾಲ್ಲೂಕು ಆಡಳಿತದ ಸಿಬ್ಬಂದಿ, ಮನೆಯಲ್ಲೇ ಆಕೆಯ ಆಧಾರ್ ನೋಂದಣಿ ಮಾಡಿಸಿದ್ದಾರೆ.
ಕುರಟ್ಟಿ ಹೊಸೂರು ಹಾಗೂ ಶೆಟ್ಟಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ಮಕ್ಕಳು ಹಾಗೂ ವಯಸ್ಕರು ಅನುವಂಶೀಯವಾದ ಅಪರೂಪದ ಕಾಯಿಲೆಗೆ ತುತ್ತಾಗಿ ಬಳಲುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬಳಿಕ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಗ್ರಾಮಗಳಿಗೆ ಬೇಟಿ ನೀಡಿ ಮಾಹಿತಿ ಪಡೆದು ರೋಗದಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಭದ್ರಯ್ಯನಹಳ್ಳಿ ಗ್ರಾಮದಲ್ಲಿ ದೀಕ್ಷಿತ ಎಂಬ ಬಾಲಕಿಯೂ ಕಾಯಿಲೆಯಿಂದ ಬಳಲುತ್ತಿದ್ದು, ಅಂಕವೈಕಲ್ಯ ಸಮಸ್ಯೆಯನ್ನೂ ಹೊಂದಿದ್ದಾಳೆ. ಮೂರು ವರ್ಷವಾದರೂ ಆಧಾರ್ ನೋಂದಣಿ ಮಾಡಿಸಿಕೊಂಡಿರಲಿಲ್ಲ. ನೋಂದಣಿ ಮಾಡಿಸಿಕೊಡುವಂತೆ ಪೋಷಕರು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದರು.
ಜಿಲ್ಲಾಧಿಕಾರಿಯವರ ಆದೇಶದಂತೆ ಹನೂರು ತಹಶೀಲ್ದಾರ್ ಗುರುಪ್ರಸಾದ್ ನೇತೃತ್ಚದ ತಂಡ ಶನಿವಾರ ಆಧಾರ್ ಕಿಟ್ ಅನ್ನು ಮನೆಗೆ ತೆಗೆದುಕೊಂಡು ಹೋಗಿ ಆಧಾರ್ ನೋಂದಣಿ ಮಾಡಿಕೊಟ್ಟಿದೆ.
‘ಕುರಟ್ಟಿ ಹೊಸೂರು ಹಾಗೂ ಶೆಟ್ಟಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕಾಯಿಲೆಯಿಂದ ಬಳಲುತ್ತಿರುವ ಯಾರಾದರೂ ಇನ್ನೂ ಆಧಾರ್ ನೋಂದಣಿ ಮಾಡಿಸಿಕೊಳ್ಳದಿದ್ದರೆ, ನಮಗೆ ಮಾಹಿತಿ ನೀಡಬಹುದು. ನಾವು ಆಧಾರ್ ಕಿಟ್ ಸಮೇತ ಗ್ರಾಮಕ್ಕೆ ತೆರಳಿ ಆಧಾರ್ ನೋಂದಣಿ ಮಾಡಿಕೊಡಲಿದ್ದೇವೆ’ ತಹಶೀಲ್ದಾರ್ ಗುರುಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.