ಹನೂರು: ತಾಲ್ಲೂಕಿನ ನೆಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ವರ್ಷಗಳಿಂದ ತಮಿಳು ಮಾಧ್ಯಮ ಶಿಕ್ಷಣ ಸ್ಥಗಿತಗೊಂಡಿದೆ. ಆದರೂ ಇಲ್ಲಿ ಮುಖ್ಯ ಶಿಕ್ಷಕಿ ಸೇರಿದಂತೆ ಮೂವರು ತಮಿಳು ಮಾಧ್ಯಮದ ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. ಸದ್ಯಕ್ಕೆ ಕನ್ನಡ ಮಾಧ್ಯಮದಲ್ಲಿ ಮಾತ್ರ ಬೋಧಿಸುವ ಈ ಶಾಲೆಯಲ್ಲಿ ಕನ್ನಡ ಶಿಕ್ಷಕರ ಹುದ್ದೆ ಖಾಲಿ ಇದೆ.
ಜಿಲ್ಲೆಯ ಗಡಿಭಾಗದಲ್ಲಿರುವನಲ್ಲೂರು ಗ್ರಾಮದಲ್ಲಿ ತಮಿಳು ಭಾಷಿಕರು ಹೆಚ್ಚಾಗಿರುವ ಕಾರಣಕ್ಕೆ 1961ರಲ್ಲಿ ಸರ್ಕಾರ, ತಮಿಳು ಮಾಧ್ಯಮ ಶಾಲೆ ತೆರೆದಿತ್ತು. ಉನ್ನತ ವಿದ್ಯಾಭ್ಯಾಸ ಹಾಗೂ ಉದ್ಯೋಗದ ದೃಷ್ಟಿಯಿಂದ ಕನ್ನಡ ಮಾಧ್ಯಮವನ್ನು ತೆರೆಯಬೇಕು ಎಂದು ಪೋಷಕರು ಒತ್ತಾಯಿಸಿದ್ದರಿಂದ 1991ರಲ್ಲಿ ಇಲ್ಲಿ ತಮಿಳಿನೊಂದಿಗೆ ಕನ್ನಡ ಮಾಧ್ಯಮ ಶಾಲೆಯೂ ಆರಂಭವಾಯಿತು.
ಎರಡೂವರೆ ವರ್ಷಗಳ ಹಿಂದೆ ಮಕ್ಕಳ ಹಾಜರಾತಿ ಕಡಿಮೆ ಇದೆ ಎಂಬ ಕಾರಣಕ್ಕೆ ತಮಿಳು ಮಾಧ್ಯಮ ಶಾಲೆಯನ್ನು ಮುಚ್ಚಲಾಗಿತ್ತು. ಆದರೆ, ಶಿಕ್ಷರು ವರ್ಗಾವಣೆಯಾಗದೆ ಇನ್ನೂ ಶಾಲೆಯಲ್ಲೇ ಇದ್ದಾರೆ. ಇದರ ನಡುವೆಯೇ, ತಮಿಳು ಮಾಧ್ಯಮ ಶಾಲೆಯನ್ನು ಮತ್ತೆ ಆರಂಭಿಸಬೇಕು ಎಂಬ ಒತ್ತಾಯವನ್ನು ಸ್ಥಳೀಯ ತಮಿಳು ಭಾಷಿಕರು ಒತ್ತಾಯಿಸಿದ್ದಾರೆ.
ಐದೂವರೆ ದಶಕಗಳಿಂದ ನಿರಂತರವಾಗಿ ಇಲ್ಲಿ ತಮಿಳು ಶಿಕ್ಷಣ ನೀಡಲಾಗಿದೆ. ಮೀಣ್ಯಂ, ಯರಂಬಾಡಿ, ಜಲ್ಲಿಪಾಳ್ಯ, ಕೂಡ್ಲೂರು, ಹೂಗ್ಯಂ, ಪೆದ್ದನಪಾಳ್ಯ, ಹಂಚಿಪಾಳ್ಯ ಮುಂತಾದ ಗ್ರಾಮದಲ್ಲಿರುವ ತಮಿಳು ಭಾಷಿಕರಿಗೆ ಇದೊಂದೇ ಶಿಕ್ಷಣದ ಕೇಂದ್ರವಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ಒಂದು ಶಾಲೆ ಮುಚ್ಚುವಂತಹ ಸ್ಥಿತಿಗೆ ಬಂದಾಗ ಅಥವಾ ಒಂದು ಮಾಧ್ಯಮದ ಶಿಕ್ಷಣವನ್ನು ಸ್ಥಗಿತಗೊಳಿಸುವ ಸಂದರ್ಭ ಎದುರಾದಾಗ ಮೂರು ವರ್ಷಗಳವರೆಗೆ ಕಾಲಾವಕಾಶ ನೀಡಬೇಕು. ಅಷ್ಟರೊಳಗೆ ಪೋಷಕರು ತಮ್ಮ ಮಕ್ಕಳನ್ನು ಮುಚ್ಚಲು ಮುಂದಾಗಿರುವ ಶಾಲೆಗೆ ಸೇರಿಸಲು ಬಯಸಿದರೆ ಅವಕಾಶ ನೀಡಬೇಕು ಎಂಬುದು ಸಾರ್ವಜನಿಕ ಶಿಕ್ಷಣ ಇಲಾಖೆ ನಿಯಮ.
‘ಮಕ್ಕಳನ್ನು ಶಾಲೆಗೆ ದಾಖಲಿಸಲು ಹೋದರೆ, ‘ತಮಿಳು ಮಾಧ್ಯಮವನ್ನು ನಿಲ್ಲಿಸಲಾಗಿದೆ’ ಎಂದು ಹೇಳುತ್ತಿದ್ದಾರೆ. ಮುಖ್ಯಶಿಕ್ಷಕರ ಕೊಠಡಿಯ ಫಲಕ ಹಾಗೂ ಶಾಲೆಯ ಮುಖ್ಯದ್ವಾರದ ಕಮಾನಿನಲ್ಲಿಯೂ ತಮಿಳು ಹಾಗೂ ಕನ್ನಡ ಮಾಧ್ಯಮ ಶಾಲೆ ಎಂದು ಬರೆದಿದ್ದಾರೆ. ತಮಿಳು ಮಾಧ್ಯಮ ಶಾಲೆ ಸ್ಥಗಿತಗೊಂಡಿದ್ದರೆ, ಅಲ್ಲಿದ್ದ ಶಿಕ್ಷಕರನ್ನು ಬೇರೆಡೆ ನಿಯೋಜಿಸಿ, ನಾಮಫಲಕವನ್ನು ಅಳಿಸಬೇಕಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಪೋಷಕರು.
ಶಿಕ್ಷಕರಿಂದ ತಪ್ಪು ಮಾಹಿತಿ–ಆರೋಪ
‘ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಲು ಹೋದಾಗ, ತಮಿಳು ಮಾಧ್ಯಮವನ್ನು ನಿಲ್ಲಿಸಲಾಗಿದೆ. ಇಲ್ಲಿದ್ದ ತಮಿಳು ಭಾಷಾ ಶಿಕ್ಷಕರು ವರ್ಗಾವಣೆಗೊಂಡಿದ್ದಾರೆ ಎಂದು ಹೇಳಿದ್ದರು. ಆದರೆ, ಶಾಲೆಯಲ್ಲಿ ಈಗಾಗಲೇ ಮುಖ್ಯಶಿಕ್ಷಕಿ ಸೇರಿದಂತೆ ಇಬ್ಬರು ತಮಿಳು ಭಾಷಾ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕರು ಪೋಷಕರಿಗೆ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಗ್ರಾಮದ ಕರುಣಾನಿಧಿ ಆರೋಪಿಸಿದರು.
‘ನನ್ನ ಎರಡು ಮಕ್ಕಳು ತಮಿಳು ಮಾಧ್ಯಮದಲ್ಲೇ ಓದುತ್ತಿದ್ದರು. ತಮಿಳು ಮಾಧ್ಯಮವನ್ನು ಸ್ಥಗಿತಗೊಳಿಸಿರುವುದರಿಂದ ಇಬ್ಬರನ್ನೂ ಶಾಲೆ ಬಿಡಿಸಿ ಮನೆಯಲ್ಲೇ ಉಳಿಸಿಕೊಂಡಿದ್ದೇನೆ. ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿ ಎಂದು ಶಿಕ್ಷಕರು ಹೇಳುತ್ತಾರೆ. ನಾವು ತಮಿಳು ಮಾಧ್ಯಮವನ್ನು ಹುಡುಕಿಕೊಂಡು ಹೋಗುವುದು ಎಲ್ಲಿಗೆ’ ಎಂದು ಪೋಷಕರಾದ ಶಕ್ತಿವೇಲು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.