ಚಾಮರಾಜನಗರ:ಪದವೀಧರ ಶಿಕ್ಷಕರ ಸಮಸ್ಯೆ ಇತ್ಯರ್ಥ, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಕಪ್ಪುಪಟ್ಟಿ ಧರಿಸಿ, ಭುವನೇಶ್ವರಿ ವೃತ್ತದ ಬಳಿಯಿರುವ ಶಿಕ್ಷಕರ ಭವನದಿಂದ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದಪ್ರಾಥಮಿಕ ಶಾಲಾ ಶಿಕ್ಷಕರು, ಅಲ್ಲಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ನಂತರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಸಂಘದ ವತಿಯಿಂದ ಆ.29ರಂದು ಬೆಳಗಾವಿಯಲ್ಲಿ, ಇದೇ 16ರಂದು ತುಮಕೂರಿನಲ್ಲಿ ನಡೆದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಕೈಗೊಂಡ ತೀರ್ಮಾದಂತೆ ಶಿಕ್ಷಕರ ಪ್ರಮುಖ ಬೇಡಿಕೆಗಳಾದ ಪದವೀಧರ ಶಿಕ್ಷಕರ ಸಮಸ್ಯೆ ಇತ್ಯರ್ಥಪಡಿಸುವುದು, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ, ಮುಖ್ಯ ಶಿಕ್ಷಕರಿಗೆ 15, 20, 25 ವರ್ಷಗಳ ವೇತನ ಬಡ್ತಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ, ದೈಹಿಕ ಶಿಕ್ಷಣ ಶಿಕ್ಷಕರ ಹಾಗೂ ಹಿಂದಿ ಶಿಕ್ಷಕರ ಸಮಸ್ಯೆ... ಸೇರಿದಂತೆ ಶಿಕ್ಷಕರ ಇನ್ನು ಹಲವಾರು ಪ್ರಮುಖ ಬೇಡಿಕೆ ಈಡೇರಿಸುವ ಸಂಬಂಧ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
‘ಹಲವು ಸಮಯದಿಂದ ಮನವಿ ಮಾಡುತ್ತಿದ್ದರೂ, ಇಲಾಖೆ ಸ್ಪಂದಿಸಿಲ್ಲ. ಬೇಡಿಕೆ ಈಡೇರಿಸದಿದ್ದರೆ, ಸಂಘದ ವತಿಯಿಂದ ತರಗತಿ ಬಹಿಷ್ಕಾರ ಹಾಕಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ’ ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷಕೆ.ಎಸ್.ಮಾದಪ್ಪ ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಜಿಲ್ಲಾ ಉಪಾಧ್ಯಕ್ಷರಾದ ಬುಕಾನಿ, ಜಿಲ್ಲಾ ಪದಾಧಿಕಾರಿಗಳಾದ ಸಲೀನಾ, ಗೀತಾ, ನಾಗಸುಂದರ, ಮಹದೇವಸ್ವಾಮಿ, ತಾಲ್ಲೂಕು ಆಧ್ಯಕ್ಷ ಲಾಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಭರತ್‌ಭೂಷಣ್, ಶಿವಪ್ರಸಾದ್, ರವೀಂದ್ರ, ಸೋಮಣ್ಣ, ಶ್ರೀಧರ್, ನಂದೀಶ್, ಗಿರೀಶ್, ಸಿ.ಕೆ.ರಾಮ, ಸ್ವಾಮಿ, ಕೃಷ್ಣಮೂರ್ತಿ, ಮಹದೇವಸ್ವಾಮಿ, ಸವಿತಾರಾಣಿ, ಶಾಂತರಾಜು, ನಟರಾಜು, ಮುರುಗೇಶ್, ಮಹದೇವಯ್ಯ, ರಾಚಯ್ಯ, ಪ್ರಸಾದ್, ಸೋಮಶೇಖರ್ ಪ್ರತಿಭಟನೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.