ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ವನ್ಯಜೀವಿ ವಲಯದ ಕರಡಿ ಗುಡ್ಡದಿಂದ ಕರಿಕಲ್ಲು ಪೊಟರೆವರೆಗೆ ಸೋಲಾರ್ ತೂಗು ಬೇಲಿ ನಿರ್ಮಾಣ ಕೆಲಸ ನಡೆಯುತ್ತಿದೆ. ವನ್ಯಜೀವಿ-ಮಾನವ ಸಂಘರ್ಷವನ್ನು ತಪ್ಪಿಸುವ ದಿಸೆಯಲ್ಲಿ ಕಾಮಗಾರಿ ಆರಂಭವಾಗಿದೆ.
ಆದರೆ, ಈ ಮಾರ್ಗದಲ್ಲಿ ನಿರ್ಮಾಣ ಮಾಡುತ್ತಿರುವ ಕಂದಕ, ತಂತಿ ಅಳವಡಿಸುವ ಕಾರ್ಯವನ್ನು ಗೌಡಹಳ್ಳಿ ತನಕ ಪೂರ್ಣಗೊಳಿಸಬೇಕು ಎಂಬುದು ರೈತ ಸಂಘದ ಸದಸ್ಯರ ಒತ್ತಾಯ.
ಸುಮಾರು 4.5 ಕಿ.ಮೀ ದೂರದ ಕರಡಿ ಗುಡ್ಡದಿಂದ ಗಸ್ತು ವಾಹನಕ್ಕೆ ದಾರಿ, ಪ್ರಾಣಿಗಳೂ ಕಾಡಿನಿಂದ ಹೊರ ಹೋಗದಂತೆ ಕಂದಕ ಹಾಗೂ ಸೋಲಾರ್ ತಂತಿ ಹಾಕುವ ಕೆಲಸ ನಡೆಯುತ್ತಿದೆ. ಇದರಿಂದ ಗ್ರಾಮೀಣ ಭಾಗಗಳು ಮತ್ತು ಗದ್ದೆಗಳಿಗೆ ಚಿರತೆ, ಹುಲಿ, ಕರಡಿ, ಆನೆ ದಾಳಿ ಮಾಡುವುದು ತಪ್ಪಲಿದೆ. ಅರಣ್ಯ ಇಲಾಖೆಗೆ ರೈತರ ಹಿತ ಕಾಯುವ ಕೆಲಸ ಸುಲಭವಾಗಲಿದೆ. ಹಿಡುವಳಿದಾರರು ರಾತ್ರಿ ಭಯವಿಲ್ಲದೆ ಸಾಗುವಳಿ ಮಾಡಲು ಸಾಧ್ಯವಾಗಲಿದೆ.
ಕೃಷಿಕರ ಮನವಿ: ‘ಬೇಸಾಯಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಕರಿಕಲ್ಲು ಪೊಟರೆಯಿಂದ ಗೌಡಹಳ್ಳಿ ಅಣೆಕಟ್ಟೆವರೆಗೂ ಕೆಲಸ ಪೂರೈಸಬೇಕು. ಕೆಲವು ಭಾಗಗಳಲ್ಲಿ ಮಾತ್ರ ಕಾಮಗಾರಿ ಮಾಡಿ, ಉಳಿದ ಕಡೆಗಳಲ್ಲಿ ಕೆಲಸ ಅಪೂರ್ಣಗೊಂಡರೆ, ವನ್ಯ ಜೀವಿಗಳು ಮತ್ತೆ ಕಾಡಿನಿಂದ ನಾಡಿನತ್ತ ನುಗ್ಗುತ್ತವೆ. ಬೇಸಿಗೆ ಸಮಯದಲ್ಲಿ ಮೇವು ಮತ್ತು ನೀರು ಸಿಗದಿದ್ದರೆ, ಆನೆ, ಕಾಡಮ್ಮೆ, ಜಿಂಕೆ, ಕಡವೆ ಜಮೀನಿಗೆ ಲಗ್ಗೆ ಇಡುತ್ತವೆ. ಹಾಗಾಗಿ, ಕಾಡಂಚಿನ ಪ್ರದೇಶಗಳಲ್ಲಿ ಸೋಲಾರ್ ನಿರ್ಮಾಣ ಕಾಮಗಾರಿಯನ್ನು ಕಾಡಂಚಿನ ಗ್ರಾಮಗಳಲ್ಲಿ ಪೂರ್ಣಗೊಳಿಸಲಿ’ ಎಂದು ರೈತರಾದ ಬೂದಿತಿಟ್ಟು ನಂಜುಂಡೇಗೌಡ ಹಾಗೂ ಗುಂಬಳ್ಳಿ ಬಸಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.