ADVERTISEMENT

ಕೆರೆತಡಿ ಮಲ್ಲಮ್ಮ ದೇವಸ್ಥಾನ: ಗಣೇಶ ಹಬ್ಬದಂದೇ ಬಾಗಿಲು ತೆರೆಯುವ ದೇಗುಲ!

ಆಲ್ದೂರು ಗ್ರಾಮದ ಕೆರೆತಡಿ ಮಲ್ಲಮ್ಮ ದೇವಸ್ಥಾನದಲ್ಲಿ ಇಂದು ಜಾತ್ರೋತ್ಸವ

ಮಹದೇವ್ ಹೆಗ್ಗವಾಡಿಪುರ
Published 30 ಆಗಸ್ಟ್ 2022, 19:30 IST
Last Updated 30 ಆಗಸ್ಟ್ 2022, 19:30 IST
ಆಲ್ದೂರು ಗ್ರಾಮದ ಕೆರೆತಡಿ ಮಲ್ಲಮ್ಮ ದೇವಸ್ಥಾನದ ನೋಟ
ಆಲ್ದೂರು ಗ್ರಾಮದ ಕೆರೆತಡಿ ಮಲ್ಲಮ್ಮ ದೇವಸ್ಥಾನದ ನೋಟ   

ಸಂತೇಮರಹಳ್ಳಿ: ವರ್ಷಕ್ಕೆ ಒಮ್ಮೆ ಗಣೇಶ ಹಬ್ಬದ ದಿನ ಬಾಗಿಲು ತೆರೆಯುವ ಹೋಬಳಿಯ ಆಲ್ದೂರು ಗ್ರಾಮದ ಕೆರೆತಡಿ ಮಲ್ಲಮ್ಮ ದೇವಸ್ಥಾನವು ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಸಜ್ಜಾಗಿದೆ.

ಗಣೇಶ ಹಬ್ಬದ ದಿನ ಮಾತ್ರ ಬಾಗಿಲು ತೆರೆಯುವುದು ಈ ದೇವಾಲಯದ ವಿಶೇಷ. ಉಳಿದ ದಿನ ದೇಗುಲ ಮುಚ್ಚಿರುತ್ತದೆ. ಬುಧವಾರ ಜಾತ್ರೆ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.

ಈ ದೇವಸ್ಥಾನದ ಉಗಮದ ಕಾರಣವನ್ನು ಗ್ರಾಮಸ್ಥರು ವಿವರಿಸುವುದು ಹೀಗೆ: ‘ಕಾಶಿಯಿಂದ ಹೊರಟ ಈಶ್ವರನು ರಾತ್ರಿಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತಿರುವಾಗ ಮಿಂಚು ಸಿಡಿಲು ಬಡಿದ ಶಬ್ದವಾಯಿತು. ಮುಂಜಾನೆ ಗ್ರಾಮಸ್ಥರು ಹೋಗಿ ನೋಡುವಾಗ ಸಿಡಿಲು ಬಡಿದ ಜಾಗದಲ್ಲಿ ಶಿವನ ಪ್ರತಿರೂಪ ಬಿದ್ದಿತ್ತು. ಅಲ್ಲಿ ಶಂಭುಲಿಂಗ ಹೆಸರಿನಲ್ಲಿ ಗ್ರಾಮಸ್ಥರು ಗುಡಿ ನಿರ್ಮಿಸಿದರು’.

ADVERTISEMENT

‘ಶಿವನನ್ನು ಅಣ್ಣನಾಗಿ ಮಾಡಿಕೊಂಡ ಮಲ್ಲಮ್ಮ ಎಂಬ ದೇವತೆ ಗೌರಿ ಹಬ್ಬದ ಸಮಯದಲ್ಲಿ ತವರು ಮನೆಗೆ ಹೋಗಿ ಬರುವುದಾಗಿ ಶಂಭುಲಿಂಗ ದೇವರ ನೋಡಲು ಬಂದಾಗ ಶಿವನ (ಪತ್ನಿ) ಕಡೆಯವರು ಶಿವನನ್ನು ನೋಡಲು ಸೇರಿಸದೆ ಗ್ರಾಮದ ಹೊರ ಭಾಗದಲ್ಲಿ ಅಂದರೆ ಕೆರೆತಡಿ ಒಂದು ಭಾಗದಲ್ಲಿ ಇರಿಸಿದರು. ಅಂದಿನಿಂದ ಈ ದೇವಿಗೆ ಕೆರೆತಡಿ ಮಲ್ಲಮ್ಮ ಎಂಬ ಹೆಸರು ಬಂತು’ ಎಂದು ಹೇಳುತ್ತಾರೆ ಗ್ರಾಮಸ್ಥರು.

ನಂತರ ಗ್ರಾಮಸ್ಥರು ಗುಡಿ ನಿರ್ಮಿಸಿಕೊಂಡು ಶಂಭುಲಿಂಗೇಶ್ವರ ಹಾಗೂ ಕೆರೆತಡಿ ಮಲ್ಲಮ್ಮನಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದರು. 500 ವರ್ಷಗಳ ಹಿಂದೆ ಕೃಷ್ಣದೇವರಾಯನ ಸಾಮಂತರು ಇಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಆ ಸಮಯದಲ್ಲಿ 30 ಗುಂಟೆ ಪ್ರದೇಶದಲ್ಲಿ ದೇವಸ್ಥಾನ ನಿರ್ಮಿಸಿದರು.‌

ಇಲ್ಲಿಗೆ ಯಾವುದೇ ಹರಕೆ ಹೊತ್ತರೆ ಅದು ಈಡೇರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಸುತ್ತಲಿನ ಜಿಲ್ಲೆಯವರೂ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಂದಿಗೂ ಗೌರಿ-ಗಣೇಶ ಹಬ್ಬದಂದು ಇಲ್ಲಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.

‘ದೇವಸ್ಥಾನದಲ್ಲಿ ನಮ್ಮ ತಾತ ಹಾಗೂ ಮುತ್ತಾತನ ಕಾಲದಿಂದಲೂ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದೇವೆ. ದೇವಸ್ಥಾನದಲ್ಲಿ ಹರಕೆ ಈಡೇರುತ್ತಿರುವುದರಿಂದ ಪ್ರತಿ ವರ್ಷವು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ’ ಎಂದು ದೇವಸ್ಥಾನದ ಶಿವಾರ್ಚಕ ಶಿವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಚ್ಚಿನ ಸಂಖ್ಯೆಯಲ್ಲಿ ಹೊರ ಜಿಲ್ಲೆಗಳಿಂದಲೂ ಭಕ್ತರು ಬರುತ್ತಾರೆ. ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಸಕಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಮಾದೇಶ್ ತಿಳಿಸಿದರು.

ಹುತ್ತದ ಪವಾಡ

ಅರ್ಚಕರ ಕುಟುಂಬದವರು ಗೌರಿ ಹಬ್ಬದಂದು ದೇವಸ್ಥಾನವನ್ನು ಸ್ವಚ್ಛಗೊಳಿಸಿ ಸೆಗಣಿಯಲ್ಲಿ ಗರ್ಭ ಗುಡಿಯನ್ನು ಸಾರಿಸುತ್ತಾರೆ. ರಾತ್ರಿ ಸಮಯದಲ್ಲಿ ಈ ದೇವರಿನ ಹಳ್ಳಿಕೆರೆಹುಂಡಿ ಹಾಗೂ ನವಿಲೂರು ಗ್ರಾಮಗಳ ಒಕ್ಕಲು ಮನೆತನದವರು ಮಣ್ಣನ್ನು ತಂದು ದೇವಸ್ಥಾನದ ಖಾಲಿ ಇರುವ ಗರ್ಭಗುಡಿಗೆ ಸುರಿದು ಹೋಗುತ್ತಾರೆ. ಇತ್ತ ಅರ್ಚಕರು ದೇವಸ್ಥಾನಕ್ಕೆ ಬೀಗ ಹಾಕಿ ಮನೆಗೆ ಬರುತ್ತಾರೆ. ಮುಂಜಾನೆ ಗಣೇಶ ಹಬ್ಬದಂದು ಅರ್ಚಕರು ದೇವಸ್ಥಾನದ ಬಾಗಿಲು ತೆಗೆದಾಗ ಗರ್ಭಗುಡಿಯಲ್ಲಿ ಹುತ್ತ ಬೆಳೆದಿರುತ್ತದೆ. ಈ ಹುತ್ತಕ್ಕೆ ಕೆರೆತಡಿ ಮಲ್ಲಮ್ಮ ದೇವಿಯ ವಿಗ್ರಹ ಪ್ರತಿಷ್ಠಾಪಿಸಿ ಶೃಂಗಾರ ಮಾಡಿ ಪೂಜೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಮನೆತನದವರು ಮೊದಲಿಗೆ ಬಂದು ಪೂಜೆ ಸಲ್ಲಿಸಿದ ನಂತರ ದೇವಸ್ಥಾನಕ್ಕೆ ಅಗಮಿಸುವ ಭಕ್ತಾಧಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ.
ಗ್ರಾಮಸ್ಥರು ಟ್ರಸ್ಟ್ ನಿರ್ಮಿಸಿ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.