ADVERTISEMENT

ಚಾಮರಾಜನಗರ | ಹೊಗೇನಕಲ್‌ನಲ್ಲಿ ದೋಣಿ ವಿಹಾರ ತಾತ್ಕಾಲಿಕ ಸ್ಥಗಿತ

ಕಾವೇರಿ ಜಲಾನಯದ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನೆಲೆ: ಮೈದುಂಬಿಕೊಂಡಿರುವ ಜಲಪಾತ

ಬಿ.ಬಸವರಾಜು
Published 20 ಜುಲೈ 2024, 6:36 IST
Last Updated 20 ಜುಲೈ 2024, 6:36 IST
<div class="paragraphs"><p>ತೆಪ್ಪ ವಿಹಾರಕ್ಕೆ ನಿರ್ಬಂಧ ವಿಧಿಸಿರುವುದರಿಂದ ದಡದಲ್ಲಿ ಇಟ್ಟಿರುವ ತೆಪ್ಪಗಳು</p></div>

ತೆಪ್ಪ ವಿಹಾರಕ್ಕೆ ನಿರ್ಬಂಧ ವಿಧಿಸಿರುವುದರಿಂದ ದಡದಲ್ಲಿ ಇಟ್ಟಿರುವ ತೆಪ್ಪಗಳು

   

ಹನೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿರುವ ಕಾರಣ ಕೆಆರ್‌ಎಸ್ ಅಣೆಕಟ್ಟೆಯಿಂದ ಹೆಚ್ಚುವರಿ ನೀರು ಬಿಡುತ್ತಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಜುಲೈ 20ರಿಂದ ತಾಲ್ಲೂಕಿನ ಹೊಗೇನಕಲ್‌ ಜಲಪಾತ ವ್ಯಾಪ್ತಿಯಲ್ಲಿ ದೋಣಿ ವಿಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕೆಲ ದಿನಗಳ ಹಿಂದೆ ನೀರಿಲ್ಲದೆ ಒಣಗಿನಿಂತಿದ್ದ ಹೊಗೇನಕಲ್ ಜಲಪಾತ ಮೈದುಂಬಿಕೊಂಡು ಕಣ್ಮನ ಸೆಳೆಯುತ್ತಿದೆ. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗುತ್ತಿರುವುದನ್ನು ಮನಗಂಡ ಅರಣ್ಯ ಇಲಾಖೆ ಹೊಗೇನಕಲ್ ಜಲಪಾತದಲ್ಲಿ ತೆಪ್ಪಗಳನ್ನು ಇಳಿಸದಂತೆ ತೆಪ್ಪ ನಡೆಸುವವರಿಗೆ ಸೂಚನೆ ನೀಡಿದೆ.

ADVERTISEMENT

ಅರಣ್ಯ ಇಲಾಖೆಯ ಆದೇಶದ ಹಿನ್ನೆಲೆಯಲ್ಲಿ, ಸದಾ ಪ್ರವಾಸಿಗರನ್ನು ತುಂಬಿಕೊಂಡು ನೀರಿನಲ್ಲಿ ಅಡ್ಡಾಡುತ್ತಿದ್ದ ತೆಪ್ಪಗಳು ದಡ ಸೇರಿವೆ.

ಹಿಂದೆ ಜಲಪಾತ ವೀಕ್ಷಣೆಗೆ ಬಂದಿದ್ದ ತಮಿಳುನಾಡಿನ ಕುಟುಂಬವೊಂದು ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿತ್ತು. ಇಂತಹ ಘಟನೆಗಳು ಮರುಕಳಿಸಬಾರದು ಎಂದು ತಾತ್ಕಾಲಿಕವಾಗಿ ತೆಪ್ಪ ವಿಹಾರ ಸ್ಥಗಿತಗೊಳಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೊಗೇನಕಲ್‌ನಲ್ಲಿ ನೀರು ಹೆಚ್ಚಾಗಿರುವುದರಿಂದ ಸಹಜವಾಗಿ ಪ್ರವಾಸಿಗರು ನೀರಿಗಿಳಿಯುತ್ತಾರೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು, ನೀರಿನ ಪ್ರಮಾಣ ಕಡಿಮೆಯಾಗುವವರೆಗೂ ತೆಪ್ಪ ವಿಹಾರ ನಿರ್ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರವಾಸಿಗರ ನಿರಾಸೆ: ‘ಮಹದೇಶ್ವರ ಬೆಟ್ಟಕ್ಕೆ ಬಂದು ದೇವರ ದರ್ಶನ ಮುಗಿಸಿ ಹೊಗೇನಕಲ್ ಜಲಪಾತ ನೋಡಲು ಬಂದಿದ್ದೆವು. ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ನೀಡಿ ತೆಪ್ಪ ವಿಹಾರ ಮಾಡಲು ಅವಕಾಶ ನೀಡಲಿಲ್ಲ. ದಡದಲ್ಲೇ ನಿಂತು ಹರಿಯುವ ನೀರು ನೋಡಿ ನಿರಾಸೆಯಿಂದಲೇ ಹಿಂದಿರುಗುವಂತಾಗಿದೆ. ಕಳೆದ ಬಾರಿಯೂ ಇದೇ ರೀತಿ ಆಗಿತ್ತು’ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ನೀರಿಗಿಳಿಯುವುದು ಅಪಾಯಕಾರಿ ನಿರಾಸೆಯಿಂದಲೇ ಹಿಂದಿರುಗುತ್ತಿರುವ ಪ್ರವಾಸಿಗರು

ಸೇತುವೆ ನಿರ್ಮಿಸಲು ಆಗ್ರಹ ಮಳೆಗಾಲದಲ್ಲಿ ಮೈದುಂಬಿ ಹರಿಯುವ ಜಲಪಾತವನ್ನು ಕಣ್ತುಂಬಿಕೊಳ್ಳಲು ಪಾಲಪಡು ಸೇತುವೆ ನಿರ್ಮಿಸಲಾಗಿತ್ತು. ಐದು ವರ್ಷಗಳ ಹಿಂದೆ ನೀರಿನ ಪ್ರಮಾಣ ಹೆಚ್ಚಾಗಿ ಸೇತುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಹಬ್ಬದ ರಜೆ ಹಾಗೂ ವಾರಾಂತ್ಯದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಹಾಗೂ ನೆರೆಯ ತಮಿಳುನಾಡಿನಿಂದಲೂ ಜಲಪಾತವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬಂದವರು ನೀರಿನ ಪ್ರಮಾಣ ಜಾಸ್ತಿಯಾದರೆ ನಿರಾಸೆಯಿಂದ ಹಿಂದಿರುಗುತ್ತಾರೆ. ಪ್ರವಾಸೋದ್ಯಮ ಇಲಾಖೆಯು ಸೇತುವೆ ದುರಸ್ತಿಪಡಿಸಿದರೆ ಜಲಪಾತ ವೀಕ್ಷಿಸಲು ಅನುಕೂಲವಾಗಲಿದೆ ಎನ್ನುತ್ತಾರೆ ಪ್ರವಾಸಿಗರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.