ಚಾಮರಾಜನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2023–24ನೇ ಶೈಕ್ಷಣಿಕ ಸಾಲಿಗೆ ಮೂರು ಹೊಸ ಪದವಿ ಕೋರ್ಸ್‌ಗಳು ಮತ್ತು 10 ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವಿಯ ಚಾಮರಾಜನಗರದ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಮಹದೇವ ಎಸ್ ಹೊಸ ಕೋರ್ಸ್‌ಗಳು ಹಾಗೂ ಕೇಂದ್ರದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
‘ಗ್ರಾಮೀಣ ಭಾಗ, ಬಡ ಕುಟುಂಬಗಳ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶ ಇಟ್ಟುಕೊಂಡು ಮುಕ್ತ ವಿವಿ ಕಾರ್ಯನಿರ್ವಹಿಸುತ್ತಿದೆ. ಯುಜಿಸಿಯ ಮಾನ್ಯತೆ ಹೊಂದಿರುವ ವಿವಿಯು ಎ+ ಶ್ರೇಣಿ ಪಡೆದುಕೊಂಡಿದೆ. ಸದ್ಯ 64 ಪದವಿ/ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕೋರ್ಸ್‌ಗಳನ್ನು ನೀಡುತ್ತಿದೆ. ಈ ಶೈಕ್ಷಣಿಕ ವರ್ಷದಿಂದ ಬಿಎಸ್‌ಡಬ್ಲ್ಯು, ಎಂಎಸ್‌ಡಬ್ಲ್ಯು ಮತ್ತು ಎಂಸಿಎ ಕೋರ್ಸ್‌ಗಳನ್ನು ಆರಂಭಿಸಿದೆ’ ಎಂದರು.
‘ಇದರೊಂದಿಗೆ ಬಿಎ (ಎಚ್‌ಇಪಿ), ಬಿಕಾಂ, ಎಂಕಾಂ, ಎಂಬಿಎ, ಎಂಎ–ಕನ್ನಡ, ಎಂಎ–ಇಂಗ್ಲಿಷ್, ಎಂಎ–ಹಿಂದಿ, ಎಂಎ– ಸಂಸ್ಕೃತ, ಎಂಎ–ಅರ್ಥಶಾಸ್ತ್ರ, ಎಂಎಸ್‌ಸಿ–ಗಣಿತ ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಇದರಲ್ಲಿ ಪಾಠ, ಪರೀಕ್ಷೆ ಎಲ್ಲವೂ ಆನ್‌ಲೈನ್‌ನಲ್ಲೇ ನಡೆಯುತ್ತದೆ. ಹಾಗಾಗಿ, ಎಲ್ಲಿ ವಾಸ ಇದ್ದರೂ ಕೋರ್ಸ್‌ಗೆ ಸೇರಬಹುದು’ ಎಂದು ಹೇಳಿದರು.
ಲ್ಯಾಟಿರಲ್ ಪ್ರವೇಶ: ‘ಪದವಿ ಕಾಲೇಜು, ವಿವಿಗಳಿಗೆ ಸೇರಿ ಒಂದು ವರ್ಷ ತರಗತಿಗಳಿಗೆ ಹಾಜರಾಗಿ, ಮುಂದಿನ ವರ್ಷ ಹೋಗಲು ಸಾಧ್ಯವಾಗದಿದ್ದವರಿ, ಎರಡನೇ ವರ್ಷ ಮುಕ್ತ ವಿವಿಗೆ ಅದೇ ಕೋರ್ಸ್‌ಗೆ ಸೇರುವುದಕ್ಕೆ ಅವಕಾಶ ಇದೆ. ಈ ಲ್ಯಾಟಿರಲ್ ಪ್ರವೇಶ ಸೌಲಭ್ಯದ ಬಗ್ಗೆ ಜನರಿಗೆ ಹೆಚ್ಚು ತಿಳಿದಿಲ್ಲ. ಇದರ ಸದುಪಯೋಗವನ್ನು ಎಲ್ಲರೂ ಮನವಿ ಮಾಡಿದರು.
‘ಪ್ರಾದೇಶಿಕ ಕೇಂದ್ರದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುತ್ತಿದ್ದಾರೆ. ವರ್ಷದಲ್ಲಿ ಎರಡು ಬಾರಿ (ಜನವರಿ ಮತ್ತು ಜುಲೈ) ಪ್ರವೇಶ ಪಡೆಯಲು ಅವಕಾಶ ಇದೆ. ಕಳೆ ವರ್ಷ ಜನವರಿಯಲ್ಲಿ 206 ಜನರು ದಾಖಲಾಗಿದ್ದರೆ, ಜುಲೈನಲ್ಲಿ 310 ಮಂದಿ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದಾರೆ’ ಎಂದು ಮಹದೇವ ಹೇಳಿದರು.
ಮುಕ್ತ ವಿವಿಯ ಕೇಂದ್ರ ಕಚೇರಿಯ ವಿಡಿಯೊ, ಆಡಿಯೊ ವಿಭಾಗದ ನಿರ್ಮಾಪಕ ಬಿ.ಸಿದ್ದೇಗೌಡ ಮಾತನಾಡಿ, ‘ಪದವಿ, ವಿವಿ ಸೇರಿ ಪಡೆಯುವ ಪದವಿಗಳಿಗೆ ಮುಕ್ತ ವಿವಿಯ ಪದವಿಗಳು ಸಮ. ಇಲ್ಲಿ ಕಲಿತರೂ, ಸರ್ಕಾರಿ ಕೆಲಸಗಳಿಗೆ ಸೇರಬಹುದು, ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿ ಆಗಬಹುದು. ಇತ್ತೀಚಿನ ವರ್ಷಗಳಲ್ಲಿ ಮುಕ್ತ ವಿವಿಯಲ್ಲಿ ಪ್ರವೇಶ ಪಡೆಯುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ’ ಎಂದರು.
ಲಭ್ಯವಿರುವ ಕೋರ್ಸ್‌ಗಳು, ಸೌಲಭ್ಯಗಳ ಬಗ್ಗೆ ಜನರಿಗೆ ತಿಳಿಸಲು ವಿವಿಯ ಪ್ರಚಾರ ರಥಕ್ಕೆ ಚಾಲನೆ ನೀಡಲಾಗಿದ್ದು, ಜಿಲ್ಲೆಯಾದ್ಯಂತ ಅದು ಸಂಚರಿಸಲಿದೆ ಎಂದರು.
ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.