ಯಳಂದೂರು: ತಾಲ್ಲೂಕು ಸೇರಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಶೀತ ಹಾಗೂ ಚಳಿಗಾಳಿ ವಾತಾವರಣ ಕಂಡು ಬರುತ್ತಿದ್ದು, ಇದರಿಂದ ಎಳನೀರಿಗೆ ಬೇಡಿಕೆ ಕುಸಿಯುತ್ತಿದೆ.
ಕೃಷಿಕರಿಗೆ ಉತ್ತಮ ಆದಾಯ ತಂದುಕೊಡುವ ತೆಂಗಿನ ಉತ್ಪನ್ನಗಳಿಗೆ ಧಾರಣೆಯೂ ಏರುತ್ತಿಲ್ಲ. ಉತ್ಪಾದನೆ ಮತ್ತು ಇಳುವರಿ ಉತ್ತಮವಾಗಿದ್ದರೂ, ಬೆಳೆಗಾರರು ನಿರೀಕ್ಷಿಸಿದ ಬೆಲೆ ಇಲ್ಲದೆ ಕಂಗೆಟ್ಟಿದ್ದಾರೆ.
ಸದಾ ಎಳನೀರಿಗೆ ಬೇಡಿಕೆ ಸಲ್ಲಿಸುತ್ತಿದ್ದ ವ್ಯಾಪಾರಿಗಳು ತೋಟದತ್ತ ತಿರುಗಿ ನೋಡುತ್ತಿಲ್ಲ. ಹಾಗಾಗಿ, ಸ್ಥಳೀಯ ಮಾರಾಟಗಾರರು ಕಡಿಮೆ ಬೆಲೆಗೆ ಎಳನೀರು ಕಟಾವು ಮಾಡುವಂತೆ ಆಗಿದೆ.
‘ನವೆಂಬರ್ ಅಂತ್ಯದ ತನಕ ಎಳೆನೀರು ಒಂದಕ್ಕೆ ₹15 ರಿಂದ ₹20 ತನಕ ದರ ನಿಗದಿ ಪಡಿಸಲಾಗಿತ್ತು. ಕೊಳ್ಳುವವರು ಗಾತ್ರ ಮತ್ತು ಗುಣಮಟ್ಟದ ಆಧಾರದ ಮೇಲೆ ಮಾಲೀಕರಿಗೆ ಮುಂಗಡ ನೀಡಿ ವರ್ಷವಿಡೀ ಕಟಾವು ಮಾಡುತ್ತಿದ್ದರು. ಮದ್ದೂರು, ಮುಂಬೈ, ಹೈದರಾಬಾದ್ ನಗರಗಳಿಗೆ ಪ್ರತಿದಿನ 5 ಸಾವಿರಕ್ಕೂ ಹೆಚ್ಚಿನ ಎಳನೀರು ಪೂರೈಕೆಯಾಗುತ್ತಿತ್ತು. ಆದರೆ, ಈಗ ಧಾರಣೆ ಒಂದು ಎಳೆನೀರಿಗೆ ₹13 ರಿಂದ ₹14ಕ್ಕೆ ಕುಸಿದಿದೆ. ಬೇಡಿಕೆಯೂ ಇಲ್ಲ. ಇದರಿಂದ ರೈತರ ವರಮಾನ ಕುಸಿದಿದೆ’ ಎಂದು ವ್ಯಾಪಾರಿ ಯರಿಯೂರು ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರತಿ ಗ್ರಾಮದಲ್ಲೂ ಸ್ಥಳೀಯರು ಎಳನೀರು ಕೊಯ್ದು, ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರು. ಪ್ರತಿದಿನ ಶ್ರಮಿಕರು ₹700 ರಿಂದ ₹1000 ಕೂಲಿ ಗಳಿಸುತ್ತಿದ್ದರು. ಆದರೆ, ಶೀತ ಹೆಚ್ಚು ವ್ಯಾಪಿಸಿದಂತೆ ಎಳನೀರು ಬಳಸುವವರ ಸಂಖ್ಯೆ ಕಡಿಮೆಯಾಗಿದೆ. ಜನವರಿಯಲ್ಲೂ ಚಳಿ ಮುಂದುವರಿಯುವ ನಿರೀಕ್ಷೆ ಇದ್ದು, ಬೇಸಿಗೆ ತನಕ ಬೆಲೆ ಏರಿಳಿತ ಬೆಳೆಗಾರರನ್ನು ಕಾಡಲಿದೆ’ ಎನ್ನುತ್ತಾರೆ ವ್ಯಾಪಾರಿ ಚಂಗಚಹಳ್ಳಿ ನಾಗರಾಜು.
‘ಈ ಬಾರಿ ತೆಂಗಿನಕಾಯಿಗೂ ಬೆಲೆ ಇಲ್ಲ. ಎಳನೀರು ಕೊಳ್ಳಲು ವ್ಯಾಪಾರಿಗಳು ತೋಟದತ್ತ ಬರುತ್ತಿಲ್ಲ. ಮದುವೆ, ಹಬ್ಬ, ಉತ್ಸವಗಳ ಸಂದರ್ಭದಲ್ಲಿ ಒಂದಿಷ್ಟು ಬೆಲೆ ಬರುವ ಸಾಧ್ಯತೆ ಇದೆ. ಸಂಕ್ರಾಂತಿ ನಂತರ ಕಾಯಿ-ಎಳನೀರಿಗೆ ಬೇಡಿಕೆ ಕುದುರಲಿದೆ. ಉಳಿದಂತೆ ಮಾರ್ಚ್-ಏಪ್ರಿಲ್ ತನಕ ಬೆಳೆಗಾರರು ಕಾಯಬೇಕು. ಸ್ಥಳೀಯ ವ್ಯಾಪಾರಿಗಳಿಗೆ ಕಡಿಮೆ ದರಕ್ಕೆ ಮಾರಾಟ ಮಾಡಬೇಕು’ ಎಂದು ಬೆಳೆಗಾರ ಅಂಬಳೆ ಮಹದೇವ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.