ಹನೂರು: ದಟ್ಟ ಅರಣ್ಯದೊಳಗಿರುವ ಹಾಡಿಯ ಜನರು ಸರ್ಕಾರ ವಿತರಿಸುವ ಉಚಿತ ಪಡಿತರ ಅಕ್ಕಿಯನ್ನು ಪಡೆಯಲು ಮೈಲುಗಟ್ಟಲೆ ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರತಿ ತಿಂಗಳು ಸರ್ಕಾರದಿಂದ ಪೂರೈಕೆಯಾಗುವ ಅಕ್ಕಿಯನ್ನು ಹಾಡಿಗಳಿಗೆ ಹೊತ್ತೊಯ್ಯುವ ವಾಹನಳು ದಾರಿ ಮಧ್ಯೆಯೇ ಕೆಟ್ಟು ನಿಲ್ಲುತ್ತಿರುವ ಹಾಗೂ ಮಳೆಗೆ ವಾಹನಗಳು ಮುಂದೆ ಸಾಗಲಾರದೆ ಸಿಲುಕುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಹಾಡಿಯೇ ಜನರೇ ಪಡಿತರವನ್ನು ಹಾಡಿಯ ಕೇಂದ್ರಗಳಿಗೆ ಸಾಗಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.
ಪಿ.ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಕಲಕಂಡಿ, ನೆಲ್ಲಿಕತ್ರಿ, ಕೆರೆದಿಂಬ, ಗೊಂಬೆಗಲ್ಲು ಹಾಡಿಯ ನಿವಾಸಿಗಳು ಉಚಿತ ಅಕ್ಕಿ ಪಡೆಯಲು ಪಡುತ್ತಿರುವ ಪಾಡು ಹೇಳತೀರದು. ಹುಲಿ ಸಂರಕ್ಷಿತ ಪ್ರದೇಶವಾಗಿರುವ ಕಾರಣ ಇಲ್ಲಿ ಖಾಸಗಿ ವಾಹನಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಪಡಿತರ ಅಕ್ಕಿ ಸಾಗಾಟ ಮಾಡುವ ವಾಹನಗಳಿಗೆ ಮಾತ್ರ ಅನುಮತಿ ಇದೆ. ಇಲ್ಲಿನ ಜನರು ಹಾಡಿಗಳಿಗೆ ತೆರಳಲು ದ್ವಿಚಕ್ರ ವಾಹನ ಬಳಸಿದರೆ, ಕೆಲವರು ಕಾಲ್ನಡಿಗೆಯಲ್ಲೇ ಹೋಗುತ್ತಾರೆ.
ಕಾಡಿನೊಳಗೆ ಇರುವ ನಮಗೆ ಮೂಲಸೌಕರ್ಯವಿಲ್ಲ. ಸರ್ಕಾರದಿಂದ ಸಿಗುವ ಸೌಲಭ್ಯಗಳು ಸೂಕ್ತ ಸಮಯಕ್ಕೆ ಸಿಗುವುದಿಲ್ಲ. ಉಚಿತವಾಗಿ ಸಿಗುವ ಆಹಾರ ಪದಾರ್ಥಗಳನ್ನು ಕಷ್ಟಪಟ್ಟು ಪಡೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಪಡಿತರ ಸಾಗಿಸುವ ವಾಹನ ಕೆಟ್ಟರೆ ನಾವೇ ತಲೆಯ ಮೇಲೋ, ಸೈಕಲ್ ಅಥವಾ ದ್ವಿಚಕ್ರ ವಾಹನಗಳ ಮೇಲೋ ಹಾಡಿಗೆ ತರಬೇಕಾಗಿದೆ. ನಮ್ಮ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಸುಮ್ಮನಿದ್ದಾರೆ. ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು ಎಂದು ತೋಚುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಹಾಡಿಯ ನಿವಾಸಿಗಳು.
ಸಚಿವರು ಬಂದರೂ ಸಮಸ್ಯೆ ನೀಗಿಲ್ಲ:
2014 ರಲ್ಲಿ ಅಂದಿನ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಗೊಂಬೆಗಲ್ಲು ಹಾಡಿಯಲ್ಲಿ ವಾಸ್ತವ್ಯ ಹೂಡಿ ಹೊಸವರ್ಷವನ್ನು ಆಚರಿಸಿ ಚಾಮರಾಜನಗರ ಜಿಲ್ಲೆಯ ಹಾಡಿಗಳ ಅಭಿವೃದ್ಧಿಗೆ ₹ 10 ಕೊಟಿ ಅನುದಾನ ಮಂಜೂರು ಮಾಡಿದ್ದರು. ಆದರೂ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದೊಳಗಿರುವ ನೆಲ್ಲಿಕತ್ರಿ, ಗೊಂಬೆಗಲ್ಲು, ಕಡಕಲಕಂಡಿ, ಕೆರೆದಿಂಬ ಸೇರಿದಂತೆ ಹಾಡಿಗಳ ಪರಿಸ್ಥಿತಿ ಇಂದಿಗೂ ಹಾಗೇ ಇದೆ.
ಕನಿಷ್ಠ ಮೂಲಸೌಕರ್ಯಗಳಿಗೂ ಒದ್ದಾಡುತ್ತಿರುವ ಇಲ್ಲಿನ ಜನರ ಪಾಡು ಅತ್ಯಂತ ನಿಕೃಷ್ಟವಾಗಿದೆ. ಬದುಕು ಸುಧಾರಿಸುವುದು ಯಾವಾಗ ಎಂದು ಕಾದು ಕುಳಿತಿದ್ದಾರೆ ಇಲ್ಲಿನ ಜನ. ಶಿಕ್ಷಣ, ಆರೊಗ್ಯ ಇಂದಿಗೂ ಎಲ್ಲರಿಗೆ ಕೈಗೆಟುಕಿಲ್ಲ. ಪಡಿತರ ಆಹಾರ ಪದಾರ್ಥಗಳನ್ನು ನಾವೇ ಹೊತ್ತು ಸಾಗಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎನ್ನುತ್ತಾರೆ ಹಾಡಿಯ ಮಾದ.
ಹಾಡಿಗಳಿಗೆ ವಾಹನ ಹೋಗದೆ ತೊಂದರೆ ಉಂಟಾಗಿರುವ ವಿಷಯ ಗೊತ್ತಿಲ್ಲ. ಈ ಬಗ್ಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಮಾಹಿತಿ ನೀಡಲಾಗುವುದು.-ಮಂಜುಳಾ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.