ಗುಂಡ್ಲುಪೇಟೆ: ಪಟ್ಟಣದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಕಚೇರಿ ಆವರಣದಲ್ಲಿ ಮೂರು ಗಂಧದ ಮರಗಳನ್ನು ಕಳ್ಳರು ಮಂಗಳವಾರ ಕಡಿದು ಸಾಗಿಸಿದ್ದಾರೆ.
ಪಟ್ಟಣದ ಊಟಿ-ಮೈಸೂರು ರಸ್ತೆಗೆ ಹೊಂದಿಕೊಂಡಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಚೇರಿಯಿದ್ದರೂ ಮರಗಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಇದರಿಂದ ಸರ್ಕಾರಿ ವಸತಿ ಗೃಹದಲ್ಲಿರುವವರು ಬೆಚ್ಚಿ ಬಿದ್ದಿದ್ದಾರೆ. ಈ ಹಿಂದೆಯೂ ಸಹ ಮರ ಕಡಿಯಲು ಪ್ರಯತ್ನ ಮಾಡಿ ಅರ್ಧಕ್ಕೆ ಬಿಟ್ಟು ಹೋಗಿದ್ದ ಖದೀಮರು ಮತ್ತೆ ವಸತಿ ಒಳಗೆ ಪ್ರವೇಶಿಸಿ ಮನೆಗಳ ಮುಂಭಾಗ ಇದ್ದ ಮರಗಳನ್ನ ಕತ್ತರಿಸಿದ್ದಾರೆ.
ಕೆಲ ತಿಂಗಳ ಹಿಂದೆ ಗುಂಡ್ಲುಪೇಟೆ ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಈ ಮಧ್ಯೆ ಗಂಧದ ಮರ ಕಳ್ಳರು ಸಕ್ರಿಯವಾಗಿರುವುದು ಪಟ್ಟಣದ ಜನತೆಯ ನಿದ್ದೆಗೆಡಿಸಿದೆ. ಈ ಕಾರಣದಿಂದ ಮನೆ ಮುಂಭಾಗ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸಹ ಯೋಚಿಸುವಂತಾಗಿದೆ.
ಪಟ್ಟಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿರುವ ಹಿನ್ನೆಲೆ ರಾತ್ರಿ ವೇಳೆ ಪೊಲೀಸರು ಗಸ್ತು ಹೆಚ್ಚಿಸುವಂತೆ ಪಟ್ಟಣದ ನಿವಾಸಿಗಳು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.