ADVERTISEMENT

ಆದಿ ಕರ್ನಾಟಕ ಅಭಿವೃದ್ಧಿ ಸಂಘದಲ್ಲಿ ಅವ್ಯಹಾರ ನಡೆದಿಲ್ಲ: ಎಸ್‌.ಮಹದೇವಯ್ಯ

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್‌.ಮಹದೇವಯ್ಯ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 16:18 IST
Last Updated 22 ಜೂನ್ 2024, 16:18 IST
ಎಸ್‌.ಮಹದೇವಯ್ಯ
ಎಸ್‌.ಮಹದೇವಯ್ಯ   

ಚಾಮರಾಜನಗರ: ತಾಲ್ಲೂಕು ಆದಿ ಕರ್ನಾಟಕ ಅಭಿವೃದ್ದಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂಬ ಅಯ್ಯನಪುರ ಶಿವಕುಮಾರ್ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್‌.ಮಹದೇವಯ್ಯ ಸ್ಪಷ್ಟಪಡಿಸಿದರು.

ಶನಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಕುಮಾರ್ ಆರೋಪದಂತೆ ನಾನು ಅವ್ಯವಹಾರದ ಕಿಂಗ್‌ಪಿನ್‌ ಅಲ್ಲ, ಗುಂಡ್‌ ಪಿನ್ ಕೂಡ ಅಲ್ಲ. ಸಮಾಜದ ಶ್ರೇಯೋಭಿವೃದ್ಧಿಗೆ ದುಡಿಯುತ್ತಿರುವ ವ್ಯಕ್ತಿ ಮಾತ್ರ.

ಆದಿ ಕರ್ನಾಟಕ ಅಭಿವೃದ್ಧಿ ಸಂಘದಿಂದ ₹ 7 ಲಕ್ಷ ಪಡೆದ ಬಗ್ಗೆ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಇದುವರೆಗೂ ಸಂಘದ ಭತ್ಯೆಯನ್ನೂ ಪಡೆದಿಲ್ಲ. ಹಣ ಪಡೆದಿರುವುದು ಸಾಬೀತು ಮಾಡಿದರೆ ದುಪ್ಪಟ್ಟು 14 ಲಕ್ಷವನ್ನು ಸಂಘದ ಖಾತೆಗೆ ಜಮೆ ಮಾಡುತ್ತೇನೆ. ಆರೋಪ ಸಾಬೀತುಪಡಿಸದಿದ್ದರೆ ಶಿವಕುಮಾರ್ 25 ಲಕ್ಷ ಸಂಘಕ್ಕೆ ನೀಡಲು ತಯಾರಿದ್ದಾರೆಯೇ ಎಂದು ಮಹದೇವಯ್ಯ ಸವಾಲು ಹಾಕಿದರು.

ADVERTISEMENT

ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಉಳಿಸುವ ನಿಟ್ಟಿನಲ್ಲಿ ನಡೆಯುವ ಹೋರಾಟ ಸ್ವಾಗತಾರ್ಹ. ಆದರೆ, ಸಮಾಜವನ್ನು ದಾರಿ ತಪ್ಪಿಸುವಂತಹ ಹೇಳಿಕೆಗಳನ್ನು ನೀಡಬಾರದು. ನನ್ನ ವಿರುದ್ಧ ಹಣ ದುರ್ಬಳಕೆ ಆರೋಪ ಮಾಡಿರುವವರ ವಿರುದ್ಧ ನಗರ ಠಾಣೆಗೆ ದೂರು ಸಲ್ಲಿಸಿದ್ದೇನೆ ಎಂದು ಮಹದೇವಯ್ಯ ತಿಳಿಸಿದರು.

1958ರಿಂದಲೂ ಎ.ಕೆ ಹಾಸ್ಟೆಲ್ ಹೆಸರಿನಲ್ಲಿಯೇ ಆಸ್ತಿ ಇದ್ದು ಇದುವರೆಗೂ ಪರಭಾರೆಯಾಗಿಲ್ಲ. ಕೋವಿಡ್‌ ಸಂದರ್ಭ ಕೆಲವರು ಅಧಿಕಾರಿಗಳ ಸಹಕಾರದೊಂದಿಗೆ ಸರ್ವೇ ನಂಬರ್ ಬದಲಿಸಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರ ಹಿಂದೆ ಸಂಘದ ಅಧ್ಯಕ್ಷರ, ಕಾರ್ಯದರ್ಶಿಗಳ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಚೆಕ್‌ ಮೂಲಕವೇ ವ್ಯವಹಾರ ನಡೆಸಲಾಗಿದೆ. ಶ್ರೀರಾಮಚಂದ್ರ ಶಿಕ್ಷಣ ಸಂಸ್ಥೆಯ ಹೆಸರಿಗೆ ಸಂಘದ ಜಾಗ ಬರೆದುಕೊಡಲಿಲ್ಲ ಎಂಬ ಕಾರಣಕ್ಕೆ ಸಂಘದ ವಿರುದ್ದ ಪಿತೂರಿ ಮಾಡಲಾಗಿದೆ ಎಂದು ಮಹದೇವಯ್ಯ ಆರೋಪ ಮಾಡಿದರು.

ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೆ  ಸಂಘದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು, ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ನೋಟಿಸ್‌ ನೀಡಲಾಗಿದ್ದು ಇದರ ವಿರುದ್ಧ ಸಂಘ ತಡೆಯಾಜ್ಞೆ ತಂದಿದೆ. ಈ ಅವಧಿಯಲ್ಲಿ ಸಂಘದ ತೇಜೋವಧೆ ಮಾಡುವುದು ಸರಿಯಲ್ಲ ಎಂದರು.

ಆದಿ ಕರ್ನಾಟಕ ಅಭಿವೃದ್ದಿ ಸಂಘದ ಸದಸ್ಯರಾದ ಅಮಚವಾಡಿ ಕಾಂತರಾಜ್, ಖಜಾಂಚಿ ಸಿ.ಕೆ.ರವಿಕುಮಾರ್, ನಿರ್ದೇಶಕ ನಾಗರಾಜ್ ಕೆ.ಮಸನಾಪುರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.