ADVERTISEMENT

ಚಾಮರಾಜನಗರ: 6 ವರ್ಷ; 33 ಮಕ್ಕಳ ದತ್ತು ಸ್ವೀಕಾರ

ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಹೊಸ ಜೀವನಕ್ಕೆ ಅಡಿಯಿಟ್ಟ ಜಿಲ್ಲೆಯ ಅನಾಥ ಮಕ್ಕಳು

ಎಚ್.ಬಾಲಚಂದ್ರ
Published 20 ಅಕ್ಟೋಬರ್ 2024, 7:37 IST
Last Updated 20 ಅಕ್ಟೋಬರ್ 2024, 7:37 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಚಾಮರಾಜನಗರ: ಬಡತನ, ಅಪ್ರಾಪ್ತ ವಯಸ್ಸಿನಲ್ಲಿ ಜನನ, ಸಮಾಜದ ನಿಂದನೆ, ಅಂಗವೈಕಲ್ಯ, ಅನಾರೋಗ್ಯ ಹಾಗೂ ಇತರ ಕಾರಣಗಳಿಂದ ಹೆತ್ತವರಿಗೆ ಬೇಡವಾಗಿ ಪರಿತ್ಯಕ್ತಗೊಂಡು ಬೀದಿಗೆ ಬೀಳುವ ಅನಾಥ ಮಕ್ಕಳಿಗೆ ಸರ್ಕಾರದ ‘ದತ್ತು ಸ್ವೀಕಾರ’ ಯೋಜನೆ ವರದಾನವಾಗಿದೆ.

2018ರಿಂದ ಇಲ್ಲಿಯವರೆಗೂ ಜಿಲ್ಲೆಯ 33 ಅನಾಥ ಮಕ್ಕಳನ್ನು ದತ್ತು ಸ್ವೀಕಾರ ಯೋಜನೆಯಡಿ ಮಕ್ಕಳಿಲ್ಲದ ಪೋಷಕರಿಗೆ ದತ್ತು ನೀಡಲಾಗಿದೆ. 33 ಮಕ್ಕಳ ಪೈಕಿ ರಾಜ್ಯದ 9 ಜಿಲ್ಲೆಗಳಿಗೆ 15, 5 ರಾಜ್ಯಗಳಿಗೆ 13 ಹಾಗೂ ವಿದೇಶಗಳಿಗೆ ಐವರು ಮಕ್ಕಳನ್ನು ದತ್ತು ನೀಡಲಾಗಿದೆ. ದತ್ತು ಕೊಟ್ಟ ಮಕ್ಕಳ ಪೈಕಿ ಅಂಗವೈಕಲ್ಯದಿಂದ ಬಳಲುತ್ತಿದ್ದ ಐದು ಕಂದಮ್ಮಗಳು ಸೇರಿದ್ದು ಅವುಗಳಿಗೆ ತಂದೆ–ತಾಯಿಯ ಪ್ರೀತಿ ದೊರೆತಿರುವುದು ವಿಶೇಷ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಬಾಲನ್ಯಾಯ ಕಾಯ್ದೆ, ದತ್ತು ಮಾರ್ಗಸೂಚಿ ಅನ್ವಯ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಮಕ್ಕಳಿಲ್ಲದ ದಂಪತಿಗಳಿಗೆ ಹಸ್ತಾಂತರಿಸಿದರು. ರಾಜ್ಯ  ಹಾಗೂ ನೆರೆ ರಾಜ್ಯದ ದಂಪತಿಗಳು ದತ್ತು ಪ್ರಕ್ರಿಯೆಯನ್ನು ಪೂರೈಸಿ ಮಕ್ಕಳನ್ನು ದತ್ತು ಸ್ವೀಕರಿಸಿದರು.

ADVERTISEMENT

ಮಕ್ಕಳನ್ನು ಮಡಿಲಿಗೆ ಪಡೆದ ಪೋಷಕರ ಮೊಗದಲ್ಲಿ ‘ಮಕ್ಕಳಿಲ್ಲ ಎಂಬ ಕೊರಗು’ ನಿವಾರಣೆಯಾದ ಸಂತಸ ತುಂಬಿದ್ದರೆ, ತಂದೆ ತಾಯಿಗಳ ಪ್ರೀತಿಯಿಂದ ವಂಚಿತರಾಗಿದ್ದ ಅನಾಥ ಮಕ್ಕಳಿಗೆ ಮರಳಿ ಪೋಷಕರ ಪ್ರೀತಿ ಸಿಗುವಂತೆ ಮಾಡಿದ ಸಂತೃಪ್ತ ಭಾವ ಜಿಲ್ಲಾಡಳಿತದ ಅಧಿಕಾರಿಗಳ ಮೊಗದಲ್ಲಿ ಎದ್ದು ಕಾಣುತ್ತಿತ್ತು.

ಜಿಲ್ಲೆಯಲ್ಲಿ ವಿಶೇಷ ದತ್ತು ಸಂಸ್ಥೆ ಆರಂಭವಾದ ಬಳಿಕ 2018ರಿಂದ 2024ರ ಅ.18ರವರೆಗೆ ನೀಡಿರುವ 33 ದತ್ತು ಮಕ್ಕಳ ಪೈಕಿ 21 ಹೆಣ್ಣು ಹಾಗೂ 12 ಗಂಡು ಮಕ್ಕಳು ಸೇರಿವೆ. ಇವುಗಳಲ್ಲಿ ಮಕ್ಕಳು ಬೇಡ ಎಂಬ ಕಾರಣ ನೀಡಿ ಹೆತ್ತವರೇ ಸ್ವಇಚ್ಛೆಯಿಂದ ಒಪ್ಪಿಸಿರುವ ಮಕ್ಕಳ ಸಂಖ್ಯೆ 28. ಹಲವು ಕಾರಣಗಳಿಂದ ತಂದೆ–ತಾಯಿಯಿಂದ ಪರಿತ್ಯಕ್ತಗೊಂಡ ಮಕ್ಕಳ ಸಂಖ್ಯೆ 5. ಎಲ್ಲ ಮಕ್ಕಳು ಎರಡು ವರ್ಷದೊಳಗಿನ ಕಂದಮ್ಮಗಳು.

ಮಕ್ಕಳು ಅನಾಥರಾಗಲು ಕಾರಣ: ಬಾಲ್ಯವಿವಾಹ ಎಂಬ ಸಾಮಾಜಿಕ ಪಿಡುಗು ಜಿಲ್ಲೆಯಲ್ಲಿ ಅನಾಥ ಮಕ್ಕಳ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ. ಅಪ್ತಾಪ್ತ ವಯಸ್ಸಿನಲ್ಲಿ ಮಗು ಜನಿಸಿದ ಬಳಿಕ ಎದುರಾಗುವ ಕಾನೂನು ತೊಡುಕುಗಳಿಗೆ ಹೆದರಿ, ಸಮಾಜದ ನಿಂದನೆ, ಕುಟುಂಬದ ಮರ್ಯಾದೆಗೆ ಅಂಜಿ ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟುಹೋಗುವಂತಹ ಹಲವು ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ.

ಇದಲ್ಲದೆ ಅನೈತಿಕ ಸಂಬಂಧ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಜನಿಸುವ ಮಕ್ಕಳು ಅನಾಥವಾಗುತ್ತಿವೆ. ಬಸ್ ನಿಲ್ದಾಣ, ಮಾರುಕಟ್ಟೆ, ದೇವಸ್ಥಾನ, ಕಸದ ತೊಟ್ಟಿಯಲ್ಲಿ ಸಿಗುವ ಮಕ್ಕಳು, ಬಡತನದ ಕಾರಣಕ್ಕೆ ಮಕ್ಕಳನ್ನು ಸಾಕಲಾಗದವರು ತಂದೊಪ್ಪಿಸಿರುವ ಘಟನೆಗಳು ನಡೆದಿವೆ. ಪೋಷಕರ ಸಾವಿನ ಬಳಿಕ ಅನಾಥರಾಗುವ ಮಕ್ಕಳನ್ನು ಸಂಬಂಧಿಗಳು ಮಕ್ಕಳ ರಕ್ಷಣಾ ಘಟಕಕ್ಕೆ ತಂದು ಬಿಟ್ಟಿರುವ ಘಟನೆಗಳು ‌ನಡೆದಿವೆ ಎನ್ನುತ್ತಾರೆ ಅಧಿಕಾರಿಗಳು.

ಹೆತ್ತವರಿಗೆ ಮಕ್ಕಳು ಬೇಡವಾದ ಮಾತ್ರಕ್ಕೆ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಂಡಿಲ್ಲ. ಮಕ್ಕಳ ಪಾಲನೆ, ಪೋಷಣೆ ಹಾಗೂ ಹೊಸ ಜೀವನ ನೀಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಇದಕ್ಕಾಗಿಯೇ ‌ಜಿಲ್ಲೆಯಲ್ಲಿ ಎನ್‌ಜಿಒಗಳ ಸಹಕಾರದೊಂದಿಗೆ ಅನಾಥಾಲಯ ತೆರೆಯಲಾಗಿದೆ. ಅಲ್ಲಿ ಮಕ್ಕಳ ಪಾಲನೆ ಪೋಷಣೆಯ ಜೊತೆಗೆ ಶಿಕ್ಷಣವನ್ನೂ ನೀಡಲಾಗುತ್ತಿದೆ. ದತ್ತು ಸ್ವೀಕಾರ ಯೋಜನೆಯಡಿ ಅರ್ಹ ಮಕ್ಕಳನ್ನು ಮಕ್ಕಳಿಲ್ಲದ ದಂಪತಿಗೆ ದತ್ತು ನೀಡಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೆಲುವರಾಜು.

ಆನ್‌ಲೈನ್‌ನಲ್ಲಿ ಮಾತ್ರ ದತ್ತು ಸ್ವೀಕಾರ: ದತ್ತು ಸ್ವೀಕಾರ ಕಾಯ್ದೆ 2022ರಂತೆ ದತ್ತು ಪಡೆಯುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯಲಿದೆ. ಮಕ್ಕಳನ್ನು ದತ್ತು ಪಡೆಯಲು ಇಚ್ಛಿಸುವ ಪೋಷಕರು ‘ಕಾರಾ’ (ಸೆಂಟ್ರಲ್ ಅಡಾಪ್ಷನ್‌ ರಿಸೋರ್ಸ್ ಅಥಾರಿಟಿ) ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ದತ್ತು ಪಡೆಯುವರು ದೈಹಿಕ, ಆರ್ಥಿಕ, ಮಾನಸಿಕವಾಗಿ ಸದೃಢರಾಗಿರಬೇಕು. ಮಗುವಿಗೆ ಉತ್ತಮ ಭವಿಷ್ಯ ನೀಡುವಷ್ಟು ಸಬಲರಾಗಿರಬೇಕು.

ಸರ್ಕಾರದಿಂದ ನಿಯೋಜಿಸಲ್ಪಟ್ಟ ಅಧಿಕಾರಿಗಳ ತಂಡ ದತ್ತು ಪಡೆಯುವ ಪೋಷಕರ ನಿವಾಸಕ್ಕೆ ಖುದ್ದು ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತದೆ. ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಪರಿಶೀಲಿಸುತ್ತದೆ, ಮಗುವನ್ನು ಸಾಕಲು ಶಕ್ತರಿದ್ದಾರೆಯೇ ಎಂದು ಅಧ್ಯಯನ ಮಾಡಿ ವರದಿ ಸಲ್ಲಿಸುತ್ತದೆ. ಈ ವರದಿ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಮಗುವನ್ನು ದತ್ತು ನೀಡುವ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ.

ದತ್ತು ಪಡೆಯುವ ಮಕ್ಕಳ ಹಾಗೂ ಪೋಷಕರ ವಿವರವನ್ನು ಗೌಪ್ಯವಾಗಿರಿಸಲಾಗುವುದು. ದತ್ತು ಕೊಟ್ಟ ನಂತರದ ಎರಡು ವರ್ಷಗಳ ಕಾಲ ಮಗುವನ್ನು ಹೇಗೆ ಪಾಲನೆ ಮಾಡಲಾಗುತ್ತಿದೆ ಎಂದು ಕಾಲಕಾಲಕ್ಕೆ ನಿಗಾ ಇರಿಸಲಾಗುವುದು ಎನ್ನುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೆಲುವರಾಜ್‌.

ಸಂಗ್ರಹ ಚಿತ್ರ
ದತ್ತು ನೀಡಿದ ಮಕ್ಕಳ ಪೈಕಿ 21 ಹೆಣ್ಣು, 12 ಗಂಡು ಎಲ್ಲ ಮಕ್ಕಳು ಎರಡು ವರ್ಷದೊಳಗಿನ ಕಂದಮ್ಮಗಳು ಆನ್‌ಲೈನ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ

‘ದತ್ತು ಸ್ವೀಕಾರ ಪ್ರಕ್ರಿಯೆ ಹೇಗೆ’

ದತ್ತು ನೀಡುವ ಪ್ರಕ್ರಿಯೆ ಸಂಕೀರ್ಣವಾದುದು. ಹೆತ್ತವರು ಸಾಕಲಾಗದೆ ಅಥವಾ ಇತರೆ ಕಾರಣಗಳಿಗೆ ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಿದರೂ ಮಗುವನ್ನು ವಾಪಸ್‌ ಪಡೆಯಲು 6 ತಿಂಗಳು ಕಾಲಾವಕಾಶ ಇರುತ್ತದೆ. ಈ ಅವಧಿಯಲ್ಲಿ ಮತ್ತೆ ಮಗು ಬೇಕು ಎನಿಸಿದರೆ ವಾಪಸ್‌ ಪಡೆಯಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಸಿಗುವ ಅನಾಥ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಕೊಳ್ಳೇಗಾಲದಲ್ಲಿರುವ ವಿಶೇಷ ದತ್ತು ಸಂಸ್ಥೆ ಜೀವನ್‌ ಜ್ಯೋತಿ ಟ್ರಸ್ಟ್‌ನಲ್ಲಿ ಪಾಲನೆ ಪೋಷಣೆ ಮಾಡಲಾಗುತ್ತದೆ. ಮಗುವಿನ ವಾರಸುದಾರರ ಹುಡುಕಾಟ ಪ್ರಕ್ರಿಯೆ ನಂತರವೂ ಪೋಷಕರು ಸಿಗದಿದ್ದಾಗ ಮಕ್ಕಳ ಕಲ್ಯಾಣ ಸಮಿತಿ ಮಗು ದತ್ತು ಪಡೆಯಲು ಮುಕ್ತ ಎಂದು ಆದೇಶ ನೀಡುತ್ತದೆ. ನಂತರ ಕಾರಾ ವೆಬ್‌ಸೈಟ್‌ಗೆ ಮಗುವಿನ ಎಲ್ಲ ವಿವರಗಳನ್ನು ಅಪ್‌ಲೋಡ್‌ ಮಾಡಲಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೆಲುವರಾಜು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.