ADVERTISEMENT

ಚಾಮರಾಜನಗರ | ಜ.26ರಿಂದ ಮೂರು ದಿನ ಫಲಪುಷ್ಪ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 16:49 IST
Last Updated 8 ಜನವರಿ 2024, 16:49 IST
ಫಲಪುಷ್ಪ ಪ್ರದರ್ಶನಗಳ ಆಯೋಜನೆಗೆ ಸಂಬಂಧಿಸಿದಂತೆ ಜಿ.ಪಂ ಸಿಇಒ ಆನಂದ್‌ ಪ್ರಕಾಶ್‌ ಮೀನಾ ಅವರು ಸೋಮವಾರ ಅಧಿಕಾರಿಗಳ ಸಭೆ ನಡೆಸಿದರು
ಫಲಪುಷ್ಪ ಪ್ರದರ್ಶನಗಳ ಆಯೋಜನೆಗೆ ಸಂಬಂಧಿಸಿದಂತೆ ಜಿ.ಪಂ ಸಿಇಒ ಆನಂದ್‌ ಪ್ರಕಾಶ್‌ ಮೀನಾ ಅವರು ಸೋಮವಾರ ಅಧಿಕಾರಿಗಳ ಸಭೆ ನಡೆಸಿದರು   

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಎನ್.ಆರ್.ಎಲ್.ಎಂ ಹಾಗೂ ಕೃಷಿ ಸಂಬಂಧಿತ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಇದೇ 26ರಿಂದ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್‌ ಪ್ರಕಾಶ್‌ ಮೀನಾ ಅವರು ಫಲಪುಷ್ಪ ಪ್ರದರ್ಶನ ಸಂಬಂಧ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ್ದು, ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

‘ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳ ಕುರಿತು ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದೇ ಫಲಪುಷ್ಪ ಪ್ರದರ್ಶನದ ಉದ್ದೇಶ. ಇದಕ್ಕೆ ಖಾಸಗಿ ಸಂಸ್ಥೆಗಳೂ ಸಹಭಾಗಿತ್ವ ನೀಡಲಿವೆ. ಎಲ್ಲಾ ಇಲಾಖೆಗಳು ಮಳಿಗೆಗಳನ್ನು ತೆರೆದು ಜನರಿಗೆ ವೈಜ್ಞಾನಿಕ ಮಾಹಿತಿಯ ಅರಿವು ಮೂಡಿಸಲು ಮುಂದಾಗಬೇಕು. ಪ್ರದರ್ಶನ ಆಯೋಜನೆಯಲ್ಲಿ ಲೋಪಗಳು ಆಗಬಾರದು’ ಎಂದರು.

ADVERTISEMENT

‘ಜಿಲ್ಲಾ ಪಂಚಾಯಿತಿಯ ರಾಷ್ಟ್ರೀಯ ಜೀವನೋಪಾಯ ಸಂವರ್ಧನಾ ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಮಾರಾಟ ಮತ್ತು ಸ್ವಚ್ಛಭಾರತ್ ಮಿಷನ್ ಯೋಜನೆ, ಸ್ವೀಪ್ ಕಾರ್ಯಕ್ರಮ ಹಾಗೂ ಸರ್ಕಾರದ ಗೃಹಲಕ್ಷ್ಮಿ, ಯುವನಿಧಿ ಸೇರಿದಂತೆ ಗ್ಯಾರಂಟಿ ಯೋಜನೆಗಳು, ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಪೀಠಿಕೆ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುವಂತಿರಬೇಕು. ಫಲಪುಷ್ಪ ಪ್ರದರ್ಶನದ ಯಶಸ್ಸಿಗಾಗಿ ವಿವಿಧ ಇಲಾಖೆಗಳ ಸಮನ್ವಯದಿಂದ ಕೆಲಸ ಮಾಡಬೇಕು’ ಎಂದು ಆನಂದ್ ಪ್ರಕಾಶ್ ಮೀನಾ ನಿರ್ದೇಶನ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಆಬೀದ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಏನೇನು ಇರಲಿದೆ?

‘ತೋಟಗಾರಿಕೆ ಇಲಾಖೆಯಿಂದ ಆಧುನಿಕ ತಾಂತ್ರಿಕತೆಯುಳ್ಳ ಹನಿ ನೀರಾವರಿ ಪದ್ದತಿ ಕೃಷಿ ಹೊಂಡ ನೀರು ಸಂರಕ್ಷಣೆ ಕೊಯ್ಲು ಗ್ರೀನ್ ಹೌಸ್ ವಿವಿಧ ಹಣ್ಣಿನ ಮಾದರಿಗಳು ಹೂವಿನ ಕಲಾಕೃತಿಗಳು ತರಕಾರಿ ಕೆತ್ತನೆ ಜೇನುಕೃಷಿ ತಾರಸಿ ಕೈತೋಟ ಕೃಷಿ ಇಲಾಖೆಯಿಂದ ಜಲಾನಯನ ಮಾದರಿ ಪ್ರಾತ್ಯಕ್ಷಿಕೆ ಹಾಗೂ ಸಿರಿಧಾನ್ಯ ಪ್ರದರ್ಶನ ಮೀನುಗಾರಿಕೆ ಇಲಾಖೆಯಿಂದ ಬಯೋಫಿಕ್ ಮಾದರಿಯಲ್ಲಿ ಮೀನು ಸಾಕಾಣಿಕೆ ರೇಷ್ಮೆ ಹಾಗೂ ಪಶುಪಾಲನಾ ಇಲಾಖೆಗಳಿಂದ ಆಧುನಿಕ ತಂತ್ರಜ್ಞಾನ ತಳಿಗಳ ಪ್ರದರ್ಶನಗಳು ಇರಲಿವೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.